ನಾನು ಯೋಚಿಸಿದ್ದೇ ರೀಲ್ಸ್‌ನಲ್ಲಿ ಬಂತಲ್ಲ! ಇದು ಮೈಂಡ್ ರೀಡಿಂಗ್ ಅಲ್ಲ ಡಿಜಿಟಲ್ ಮ್ಯಾಜಿಕ್...Instagram

ನಾವು ಮನಸ್ಸಿನಲ್ಲಿ ಏನು ಯೋಚಿಸುತ್ತಿದ್ದೇವೆ ಎಂಬುದನ್ನು ಇನ್‌ಸ್ಟಾಗ್ರಾಂ ನಿಜವಾಗಿಯೂ ತಿಳಿದುಕೊಳ್ಳುತ್ತದೆಯೇ? ನಮ್ಮ ಯೋಚನೆಗಳನ್ನು ನೇರವಾಗಿ ಓದುವ ವ್ಯವಸ್ಥೆ ಇನ್‌ಸ್ಟಾಗ್ರಾಂನಲ್ಲಿ ಇಲ್ಲ. ಆದರೆ, ನಾವು ಆ್ಯಪ್ ಬಳಸುವ ರೀತಿಯಿಂದ ನಮ್ಮ ಆಸಕ್ತಿ ಮತ್ತು ಅಭ್ಯಾಸಗಳನ್ನು ಅದು ಅಂದಾಜು ಮಾಡುತ್ತದೆ. ಅದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.
Instagram
ಸಾಂದರ್ಭಿಕ ಚಿತ್ರ
Published on: 

Instagram : ಕೆಲವೊಮ್ಮೆ ನಮ್ಮ ಮನಸ್ಸಿನಲ್ಲಿ ಒಂದು ವಿಷಯ ಓಡಾಡುತ್ತಿರುತ್ತದೆ. ಅದರ ಬಗ್ಗೆ ಯಾರ ಬಳಿಯೂ ಹೇಳಿರುವುದಿಲ್ಲ. ಅಂತಹ ಸಮಯದಲ್ಲಿ ಸುಮ್ಮನೆ ಇನ್‌ಸ್ಟಾಗ್ರಾಂ ತೆರೆದರೆ, ನಾವು ಯೋಚಿಸುತ್ತಿದ್ದ ಅದೇ ವಿಷಯಕ್ಕೆ ಸಂಬಂಧಿಸಿದ ರೀಲ್ಸ್‌ಗಳು ಒಂದರ ಹಿಂದೆ ಒಂದರಂತೆ ಕಾಣಿಸಿಕೊಳ್ಳುತ್ತವೆ. ಆಗ ಇದು ಹೇಗೆ ಸಾಧ್ಯ? ಎಂಬ ಅನುಮಾನ ಬರುವುದು ಸಹಜ.

ನಾವು ಮನಸ್ಸಿನಲ್ಲಿ ಏನು ಯೋಚಿಸುತ್ತಿದ್ದೇವೆ ಎಂಬುದನ್ನು ಇನ್‌ಸ್ಟಾಗ್ರಾಂ ನಿಜವಾಗಿಯೂ ತಿಳಿದುಕೊಳ್ಳುತ್ತದೆಯೇ? ನಮ್ಮ ಯೋಚನೆಗಳನ್ನು ನೇರವಾಗಿ ಓದುವ ವ್ಯವಸ್ಥೆ ಇನ್‌ಸ್ಟಾಗ್ರಾಂನಲ್ಲಿ ಇಲ್ಲ. ಆದರೆ, ನಾವು ಆ್ಯಪ್ ಬಳಸುವ ರೀತಿಯಿಂದ ನಮ್ಮ ಆಸಕ್ತಿ ಮತ್ತು ಅಭ್ಯಾಸಗಳನ್ನು ಅದು ಅಂದಾಜು ಮಾಡುತ್ತದೆ. ಅದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

Also Read
ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಮೆಟಾ ಕಡೆಯಿಂದ ಬಿಗ್​ ಶಾಕ್: ಇನ್ಮುಂದೆ ಈ ಮೆಸೇಜ್​ಗಳಿಗೆ ಹಣ ಪಾವತಿ ಕಡ್ಡಾಯ..! WhatsApp
Instagram

ನಿಮಗೆ ಸೀರೆಗಳ ಬಗ್ಗೆ ಆಸಕ್ತಿ ಬಂದಿದೆ ಎಂದುಕೊಳ್ಳಿ. ಒಂದು ಸೀರೆಯ ರೀಲ್ಸ್‌ ಅನ್ನು ನೀವು ಕೆಲವು ಸೆಕೆಂಡ್ ಹೆಚ್ಚು ನೋಡುತ್ತೀರಿ. ಮತ್ತೊಂದು ರೀಲ್ಸ್‌ ಅನ್ನು ಕೊನೆಯವರೆಗೂ ನೋಡುತ್ತೀರಿ. ಇಷ್ಟವಾದ ರೀಲ್ಸ್‌ಗೆ ಲೈಕ್​ ನೀಡುತ್ತೀರಿ ಅಥವಾ ಅದನ್ನು ಸೇವ್​ ಕೂಡಾ ಮಾಡಿಕೊಳ್ಳುತ್ತೀರಿ. ಕೆಲವೊಮ್ಮೆ ಸ್ನೇಹಿತರಿಗೆ ಕಳುಹಿಸುತ್ತೀರಿ. ಇಂತಹ ಪ್ರತಿಯೊಂದು ಚಟುವಟಿಕೆಯೂ ನಿಮ್ಮ ಆಸಕ್ತಿಯ ಬಗ್ಗೆ ಇನ್‌ಸ್ಟಾಗ್ರಾಂಗೆ ಸೂಚನೆ ನೀಡುತ್ತದೆ.

ನೀವು ಯಾವ ರೀಲ್ಸ್‌ ಅನ್ನು ಹೆಚ್ಚು ಸಮಯ ನೋಡುತ್ತೀರಿ, ಯಾವುದನ್ನು ತಕ್ಷಣ ಬಿಟ್ಟುಬಿಡುತ್ತೀರಿ, ಯಾವ ರೀತಿಯ ವಿಷಯಗಳಿಗೆ ಪ್ರತಿಕ್ರಿಯಿಸುತ್ತೀರಿ ಎಂಬುದನ್ನು ಆಧರಿಸಿ ಮುಂದಿನ ದಿನಗಳಲ್ಲಿ ನಿಮಗೆ ಯಾವ ರೀತಿಯ ವಿಷಯಗಳು ಇಷ್ಟವಾಗಬಹುದು ಎಂಬುದನ್ನು ಅದು ಯಾವಾಗಲೂ ಅಂದಾಜು ಮಾಡುತ್ತದೆ. ಅದಕ್ಕಾಗಿಯೇ ನಾವು ಒಂದೇ ರೀತಿಯ ರೀಲ್ಸ್‌ಗಳನ್ನು ಪದೇಪದೇ ನೋಡುತ್ತೇವೆ.

ಇದರಲ್ಲಿ ನಮ್ಮ ಗಮನವೂ ಒಂದು ಪಾತ್ರ ವಹಿಸುತ್ತದೆ. ನೀವು ಇತ್ತೀಚೆಗೆ ಪ್ರವಾಸಕ್ಕೆ ಹೋಗುವ ಬಗ್ಗೆ ಯೋಚಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಅದೇ ಸಮಯದಲ್ಲಿ ಪ್ರವಾಸಕ್ಕೆ ಸಂಬಂಧಿಸಿದ ರೀಲ್ಸ್‌ಗಳು ಕಣ್ಣಿಗೆ ಬಿದ್ದರೆ, ನಾನು ಯೋಚಿಸಿದ್ದೇ ಇನ್‌ಸ್ಟಾಗ್ರಾಂನಲ್ಲಿ ಬಂತಲ್ಲ ಎಂದು ಅನಿಸಬಹುದು. ಆದರೆ ಅದಕ್ಕೂ ಮೊದಲು ಅಂತಹ ಹಲವು ರೀಲ್ಸ್‌ಗಳು ಬಂದಿದ್ದರೂ ನಾವು ಗಮನಿಸದೇ ಇರಬಹುದು. ಮನಸ್ಸಿನಲ್ಲಿ ಆ ವಿಷಯ ಇದ್ದಾಗ ಮಾತ್ರ ಅದಕ್ಕೆ ಸಂಬಂಧಿಸಿದ ವಿಷಯಗಳು ಹೆಚ್ಚು ಗಮನಕ್ಕೆ ಬರುತ್ತವೆ.

ಇನ್ನೊಂದು ಮುಖ್ಯ ವಿಷಯವೆಂದರೆ, ಇನ್‌ಸ್ಟಾಗ್ರಾಂನಲ್ಲಿ ನಾವು ಮಾತ್ರವಲ್ಲ, ನಮ್ಮ ಸುತ್ತಮುತ್ತಲಿನ ಜನರ ಆಸಕ್ತಿಗಳೂ ಕೆಲವು ರೀತಿಯಲ್ಲಿ ಪರಿಣಾಮ ಬೀರುತ್ತವೆ. ನಾವು ಫಾಲೋ ಮಾಡುವ ಖಾತೆಗಳು, ಅವುಗಳಿಗೆ ಸಂಬಂಧಿಸಿದ ವಿಷಯಗಳು ಮತ್ತು ನಾವು ಪದೇಪದೆ ನೋಡುವ ವಿಷಯಗಳ ಆಧಾರದ ಮೇಲೆ ನಮಗೆ ಇಷ್ಟವಾಗಬಹುದಾದ ಹೊಸ ಪೋಸ್ಟ್​ ಹಾಗೂ ವಿಡಿಯೋಗಳನ್ನು ತೋರಿಸಲಾಗುತ್ತದೆ.

Also Read
ಪುಸ್ತಕ ಓದಲು ಕೂತರೆ ನಿದ್ದೆ ಬರುತ್ತಾ? ಓದುವ ಅಭ್ಯಾಸ ಬೆಳೆಸಿಕೊಳ್ಳೋಕೆ ಈ ಟಿಪ್ಸ್ ಫಾಲೋ ಮಾಡಿ! | Books reading habit
Instagram

ಹೀಗಾಗಿ ಇನ್‌ಸ್ಟಾಗ್ರಾಂ ನಮ್ಮ ಮನಸ್ಸನ್ನು ಓದುತ್ತಿದೆ ಎಂದು ಭಾವಿಸುವ ಅಗತ್ಯವಿಲ್ಲ. ನಾವು ಆ್ಯಪ್‌ನಲ್ಲಿ ಮಾಡುವ ಸಣ್ಣ ಸಣ್ಣ ಚಟುವಟಿಕೆಗಳನ್ನೇ ಅದು ಗಮನಿಸಿ, ನಮ್ಮ ಆಸಕ್ತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ನಂತರ ಅದೇ ರೀತಿಯ ವಿಷಯಗಳನ್ನು ನಮ್ಮ ಮುಂದೆ ತಂದಿಡುತ್ತದೆ. ಅದಕ್ಕಾಗಿಯೇ ಕೆಲವೊಮ್ಮೆ ರೀಲ್ಸ್‌ಗಳು ನಮ್ಮ ಮನಸ್ಸಿನ ಮಾತನ್ನೇ ಹೇಳುತ್ತಿರುವಂತೆ ಅನಿಸುತ್ತದೆ. ನಿಜವಾಗಿ ನೋಡಿದರೆ, ಅದು ನಮ್ಮ ಮನಸ್ಸನ್ನು ಓದಿರುವುದಕ್ಕಿಂತ ನಮ್ಮ ಡಿಜಿಟಲ್ ಅಭ್ಯಾಸಗಳನ್ನು ಗಮನಿಸಿ ನಮ್ಮ ಮುಂದಿನ ಆಸಕ್ತಿಯನ್ನು ಊಹಿಸುವ ಕೆಲಸ ಮಾಡುತ್ತದೆ.

ಹಾಗಾಗಿ ಮುಂದಿನ ಬಾರಿ ನಾನು ಯೋಚಿಸಿದ್ದೇ ರೀಲ್ಸ್‌ನಲ್ಲಿ ಬಂತಲ್ಲ ಎಂದು ಅಚ್ಚರಿಯಾದಾಗ, ಇನ್‌ಸ್ಟಾಗ್ರಾಂ ನಮ್ಮ ಮನಸ್ಸನ್ನು ಓದಿತೇ ಎಂದು ಯೋಚಿಸುವ ಬದಲು, ನಾವು ಕಳೆದ ಕೆಲವು ದಿನಗಳಲ್ಲಿ ಯಾವ ರೀತಿಯ ರೀಲ್ಸ್‌ಗಳನ್ನು ಹೆಚ್ಚು ನೋಡಿದ್ದೇವೆ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net