Kannada Books: ಪುಸ್ತಕ ಓದಲು ಕೂತ ತಕ್ಷಣ ನಿದ್ದೆ ಬರುತ್ತಾ? ಯಾವ ಪುಸ್ತಕದಿಂದ ಶುರು ಮಾಡ್ಬೇಕು ಅನ್ನೋ ಗೊಂದಲ ಇದ್ಯಾ? ಈ ಟಿಪ್ಸ್ ಟ್ರೈ ಮಾಡಿ
ಪುಸ್ತಕ ಓದಬೇಕು ಅನ್ನೋ ಆಸೆ ಇದ್ರೂ, ಓದಲು ಕೂತ ತಕ್ಷಣ ನಿದ್ದೆ ಬರುತ್ತಾ? ಯಾವ ಪುಸ್ತಕದಿಂದ ಶುರು ಮಾಡ್ಬೇಕು ಅನ್ನೋದು ಗೊತ್ತಾಗ್ತಿಲ್ವಾ? ಹಾಗಿದ್ರೆ ಓದುವ ವಿಧಾನದಲ್ಲಿ ಕೆಲವೊಂದು ಸಣ್ಣ ಬದಲಾವಣೆ ಮಾಡ್ಕೊಂಡ್ರೆ, ಓದುವ ಅಭ್ಯಾಸ ಬೆಳೆಸಿಕೊಳ್ಳೋದು ಸುಲಭ.
ಹಾಸಿಗೆಯ ಮೇಲೆ ಮಲಗಿ ಅಥವಾ ಹೆಚ್ಚು ಒರಗಿ ಓದಬೇಡಿ. ಬೆನ್ನು ನೇರವಾಗಿಟ್ಟುಕೊಂಡು ಕುರ್ಚಿಯಲ್ಲಿ ಕುಳಿತು ಓದಿ. ಆರಾಮವಾಗಿ ಮಲಗಿ ಓದಿದ್ರೆ ನಿದ್ದೆ ಬೇಗ ಆವರಿಸಬಹುದು. ಕಡಿಮೆ ಬೆಳಕಿನಲ್ಲಿ ಓದುವುದನ್ನು ತಪ್ಪಿಸಿ. ಓದುವ ರೂಮ್‌ನಲ್ಲಿ ಸಾಕಷ್ಟು ಬೆಳಕು ಇರುವಂತೆ ನೋಡಿಕೊಳ್ಳಿ. ಸರಿಯಾದ ಬೆಳಕಿನಲ್ಲಿ ಓದುವುದರಿಂದ ಕಣ್ಣುಗಳ ಮೇಲಿನ ಒತ್ತಡ ಕಡಿಮೆಯಾಗಲು ಸಹಾಯವಾಗುತ್ತದೆ.
ಓದುತ್ತಾ ಓದುತ್ತಾ ಕಣ್ಣು ಮುಚ್ಚಿಕೊಳ್ಳುತ್ತಿದ್ದರೆ, ಎದ್ದು ನಿಂತು ಕೋಣೆಯಲ್ಲಿ ಅತ್ತಿಂದಿತ್ತ ಸ್ವಲ್ಪ ನಡೆಯುತ್ತಾ ಓದಬಹುದು. ಇದರಿಂದ ದೇಹ ಆ್ಯಕ್ಟಿವ್ ಆಗಿರಲು ಸಹಾಯವಾಗುತ್ತದೆ.
ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಓದಬೇಡಿ. ಪ್ರತಿ 25–30 ನಿಮಿಷಕ್ಕೊಮ್ಮೆ 5 ನಿಮಿಷದ ಸಣ್ಣ ಬ್ರೇಕ್ ತೆಗೆದುಕೊಳ್ಳಿ. ಈ ವೇಳೆ ಮುಖ ತೊಳೆಯಿರಿ, ನೀರು ಕುಡಿಯಿರಿ ಅಥವಾ ಸ್ವಲ್ಪ ನಡೆಯಿರಿ.
ಓದುವ ಅಭ್ಯಾಸವೇ ಇಲ್ಲ ಅಂತಿದ್ದರೆ, ನೇರವಾಗಿ ದೊಡ್ಡ ಕಾದಂಬರಿ ಹಿಡಿದುಕೊಳ್ಳುವ ಅಗತ್ಯವಿಲ್ಲ. ಮೊದಲು ಪ್ರಾಥಮಿಕ ಶಾಲಾ ಮಕ್ಕಳ ಕನ್ನಡ ಪಠ್ಯಪುಸ್ತಕದಲ್ಲಿರುವ ಸರಳ ಕಥೆಗಳು, ಪದ್ಯಗಳು ಹಾಗೂ ಚಿಕ್ಕ ಬರಹಗಳನ್ನು ಓದಿ. ಅಲ್ಲಿಂದ ನಿಧಾನವಾಗಿ ಓದುವ ಅಭ್ಯಾಸ ರೂಢಿಸಿಕೊಳ್ಳಬಹುದು.
ಆರಂಭದಲ್ಲೇ ಕಷ್ಟವಾದ ಪುಸ್ತಕಗಳನ್ನು ಓದಲು ಹೋಗಬೇಡಿ. ಸಸ್ಪೆನ್ಸ್, ಸಾಹಸ, ಆತ್ಮಕಥೆ ಅಥವಾ ಕುತೂಹಲ ಮೂಡಿಸುವ ಕಥೆಗಳಂತಹ ನಿಮಗೆ ಇಷ್ಟವಾಗುವ ವಿಷಯದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಿ. ಹೀಗೆ ಮಾಡಿದ್ರೆ ಓದುವ ಆಸಕ್ತಿ ಮುಂದುವರಿಯುವ ಸಾಧ್ಯತೆ ಹೆಚ್ಚು.
ಓದುವ ಅಭ್ಯಾಸ ಸ್ವಲ್ಪ ಬೆಳೆದ ಬಳಿಕ ಸರಳ ಭಾಷೆ, ರೋಚಕ ಕಥೆ ಮತ್ತು ಹೆಚ್ಚು ಉದ್ದವಿಲ್ಲದ ಪುಸ್ತಕಗಳಿಂದ ಮುಂದುವರಿಯಬಹುದು.
ಸಾಹಸ, ಕುತೂಹಲ ಹಾಗೂ ಸಸ್ಪೆನ್ಸ್ ಕಥೆಗಳು ಇಷ್ಟವಾಗುವವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ‘ಕಾರ್ವಾಲೊ’ ಮತ್ತು ‘ಜುಗಾರಿ ಕ್ರಾಸ್’ ಕೃತಿಗಳಿಂದ ಓದಲು ಶುರು ಮಾಡಬಹುದು. ‘ಕಾರ್ವಾಲೊ’ದಲ್ಲಿ ಹಾರುವ ಓತಿಯನ್ನು ಹುಡುಕುವ ವಿಜ್ಞಾನಿ ಹಾಗೂ ಕಾಡಿನ ಸುತ್ತ ನಡೆಯುವ ಘಟನೆಗಳ ಕಥೆಯಿದ್ದು, ಸರಳ ಭಾಷೆ ಮತ್ತು ಕುತೂಹಲಕಾರಿ ನಿರೂಪಣೆ ಓದುಗರನ್ನು ಸೆಳೆಯುತ್ತದೆ. ಇನ್ನು ‘ಜುಗಾರಿ ಕ್ರಾಸ್’ ಕೇವಲ 24 ಗಂಟೆಗಳ ಅವಧಿಯಲ್ಲಿ ನಡೆಯುವ ಸಸ್ಪೆನ್ಸ್ ಕಥೆಯಾಗಿದ್ದು, ಪ್ರಕೃತಿ ಮತ್ತು ಹಳ್ಳಿಯ ಬದುಕಿನ ಹಿನ್ನೆಲೆಯೂ ಕಥೆಯಲ್ಲಿದೆ.
ಸರಳ ಕಥೆಗಳು ಇಷ್ಟವಾದ್ರೆ ವಸುಧೇಂದ್ರ ಅವರ ‘ಚೇಳು’, ‘ಮೋಹನಸ್ವಾಮಿ’ ಓದಬಹುದು. ಸಮಕಾಲೀನ ಕಾದಂಬರಿ ಇಷ್ಟವಾದ್ರೆ ವಿವೇಕ್ ಶಾನಭಾಗ್ ಅವರ ‘ಘಾಚರ್ ಘೋಚರ್’ ಉತ್ತಮ ಆಯ್ಕೆ. ಇತಿಹಾಸ, ರಹಸ್ಯ ಇಷ್ಟಪಡುವವರು ಕೆ.ಎನ್. ಗಣೇಶಯ್ಯ ಅವರ ‘ಕಲ್ದವಸಿ’, ‘ಕರಿಸಿರಿಯಾನ’, ‘ಚಿತಾ ದಂತ’ ಓದಬಹುದು.
ಇದನ್ನೂ ಓದಿ: ಕಳ್ಳತನ ಆರೋಪದ ಬಳಿಕವೂ ಬಾಕಿ ಸಂಬಳ? ‘ಡ್ರಾಮಾ ಮಾಡಬೇಡ’ ಎಂದ ಮನೆ ಯಜಮಾನಿ! | Maid Allegedly Stealing
ಓದುವ ಅಭ್ಯಾಸ ಒಂದೇ ದಿನದಲ್ಲಿ ಬೆಳೆಯಲ್ಲ. ಮೊದಲು ಸರಳ ಕಥೆ-ಪದ್ಯಗಳಿಂದ ಶುರು ಮಾಡಿ, ದಿನಕ್ಕೆ ಸ್ವಲ್ಪ ಸಮಯ ಓದುವುದನ್ನು ರೂಢಿಸಿಕೊಳ್ಳಿ. ನಿಮಗೆ ಇಷ್ಟವಾಗುವ ಪುಸ್ತಕ ಸಿಕ್ಕರೆ, ಓದಿನ ಮೇಲಿನ ಆಸಕ್ತಿಯೂ ನಿಧಾನವಾಗಿ ಹೆಚ್ಚಾಗುತ್ತದೆ.