More

    ಸೇವೆಗೆ ಮೀಸಲಾದ ಬದುಕು; ಹಿಂದೂ ಧರ್ಮದ ವಿಶ್ವಕೋಶದ ಕೊಡುಗೆ ನೀಡಿದ ಯತಿ

    ಹಿಂದೂಧರ್ಮದ ಅರಿವು – ಪ್ರಸಾರದ ಕಾಯಕವನ್ನು ದಶಕಗಳ ಕಾಲ ವ್ರತದಂತೆ ನಡೆಸಿಕೊಂಡು ಬಂದವರು ಸ್ವಾಮಿ ಹರ್ಷಾನಂದಜೀ. ಹಿಂದೂಧರ್ಮದ ಕುರಿತು ವಿಶ್ವಕೋಶವನ್ನೇ ರಚಿಸಿದ ವಿದ್ವಾಂಸ. ಆಕರ್ಷಕ ಪ್ರವಚನ, ಹಾಡುಗಾರಿಕೆ ಹಾಗೂ ಬರಹಗಳ ಮೂಲಕ ಅಧ್ಯಾತ್ಮದ ರುಚಿಯನ್ನು ಜನರಿಗೆ ಉಣಬಡಿಸಿದವರು. ಅವರ ಬಹುಮುಖ ವ್ಯಕ್ತಿತ್ವ, ಕಾರ್ಯದ ಅವಲೋಕನ ಇಲ್ಲಿದೆ.

    ರಾಮಕೃಷ್ಣ ಮಹಾಸಂಘದ ಹಿರಿಯ ಯತಿಗಳಲ್ಲೊಬ್ಬರಾಗಿದ್ದ ಸ್ವಾಮಿ ಹರ್ಷಾನಂದಜೀ ಇನ್ನಿಲ್ಲ. ಅವರು ವಿದ್ಯಾರ್ಥಿ ದಿಸೆಯಿಂದಲೇ ಅಧ್ಯಾತ್ಮದತ್ತ ಅಪಾರ ಒಲವು ಹೊಂದಿದ್ದರು. ಶಾಲಾ ಶಿಕ್ಷಣದಲ್ಲೂ ಅಗ್ರಮಾನ್ಯರಾಗಿದ್ದರು. ಬೆಂಗಳೂರು ಮಲ್ಲೇಶ್ವರ ಮೂಲದ ಸ್ವಾಮೀಜಿ ಬೆಂಗಳೂರಿನ ಯುವಿಸಿಇ ಕಾಲೇಜಿನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ (ಚಿನ್ನದ ಪದಕದೊಂದಿಗೆ) ಪಡೆದಿದ್ದರು. ನಂತರ ತಮ್ಮ ಜೀವನವನ್ನು ರಾಮಕೃಷ್ಣ ಮಠದ ಸೇವೆಗಾಗಿ ಮೀಸಲಿಡಲು ನಿಶ್ಚಯಿಸಿದರು.

    1930ರಲ್ಲಿ ಜನಿಸಿದ ಸ್ವಾಮಿ ಹರ್ಷಾನಂದ 1954ರಲ್ಲಿ ರಾಮಕೃಷ್ಣ ಮಠದೊಂದಿಗೆ ಸಂಪರ್ಕ ಬೆಳೆಸಿ ಅಧ್ಯಾತ್ಮಜೀವನವನ್ನು ಆರಂಭಿಸಿದರು. ಬೆಂಗಳೂರು, ಮೈಸೂರು, ಮಂಗಳೂರು, ಅಲಹಾಬಾದ್​ನ ಶಾಖೆಗಳಲ್ಲಿ ಹಾಗೂ ಮಹಾಸಂಘದ ಮೂಲ ಕೇಂದ್ರವಾದ ಕೋಲ್ಕತದ ಬೇಲೂರು ಮಠದಲ್ಲಿ ಸೇವೆ ಸಲ್ಲಿಸಿದ್ದರು. 1962ರಲ್ಲಿ ರಾಮಕೃಷ್ಣ ಮಹಾಸಂಘದ ಎಂಟನೇ ಅಧ್ಯಕ್ಷ ಮತ್ತು ಸ್ವಾಮಿ ವಿವೇಕಾನಂದರ ಶಿಷ್ಯರಾದ ಸ್ವಾಮಿ ವಿಶುದ್ಧಾನಂದ ಅವರಿಂದ ಸಂನ್ಯಾಸದೀಕ್ಷೆ ಸ್ವೀಕರಿಸಿದರು. 1989ರಿಂದ ಬೆಂಗಳೂರಿನ ಬಸವನಗುಡಿ ರಸ್ತೆಯಲ್ಲಿರುವ ರಾಮಕೃಷ್ಣಮಠದ ಅಧ್ಯಕ್ಷರಾಗಿ ಸೇವೆ ಆರಂಭಿಸಿದ ಹರ್ಷಾನಂದಜೀ ಕೊನೆಯುಸಿರಿನ ತನಕವೂ ಆಶ್ರಮದ ಜವಾಬ್ದಾರಿ ನಿರ್ವಹಿಸಿದರು. ರಾಮಕೃಷ್ಣ ಮಠದ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿ ಎಂದರೆ 31 ವರ್ಷಗಳ ಕಾಲ ಒಂದು ಮಠದ ಜವಾಬ್ದಾರಿ ನಿರ್ವಹಿಸಿದ ಹಿರಿಮೆ ಅವರದು.

    ಪ್ರವಚನ ಪಟುತ್ವ: ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಸುಲಲಿತವಾಗಿ ಪ್ರವಚನ ನೀಡುತ್ತಿದ್ದ ಸ್ವಾಮೀಜಿ, ರಾಮಾಯಣ ಮತ್ತು ಮಹಾಭಾರತದ ಬಗ್ಗೆ ನಿರರ್ಗಳವಾಗಿ ವ್ಯಾಖ್ಯಾನ ಮಾಡುತ್ತಿದ್ದರು. ಉತ್ತಮ ಗಾಯಕರೂ ಆಗಿದ್ದ ಸ್ವಾಮೀಜಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಭಜನ್​ಗಳನ್ನು ಹಾಡುತ್ತಿದ್ದರು.

    ಭಗವದ್ಗೀತೆಯ ಬಗ್ಗೆ ವಿಜಯವಾಣಿಯಲ್ಲಿ ಅಂಕಣ ಭಗವದ್ಗೀತೆಯ ಬಗ್ಗೆ ವಿಜಯವಾಣಿಯ ಸಂಸ್ಕೃತಿ ಪುರವಣಿಯಲ್ಲಿ ಮತ್ತು ಹಿಂದೂಧರ್ಮದ ಬಗ್ಗೆ, ಹಿಂದೂ ದೇವದೇವಿಯರ ಬಗ್ಗೆ ಸುದಿನ ಪುಟದಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು.

    ಸಂಸ್ಕಾರಕ್ಕೆ ಆದ್ಯತೆ: ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ನೀಡಬೇಕು ಎಂಬ ಉದ್ದೇಶದಿಂದ ರಾಮಕೃಷ್ಣ ಮಠದಲ್ಲಿ ಬಾಲಕ ಸಂಘ ಮತ್ತು ಯುವಕ ಸಂಘದ ಚಟುವಟಿಕೆಗೆ ಸ್ವಾಮೀಜಿ ವಿಶೇಷ ಆದ್ಯತೆ ನೀಡಿದ್ದರು. ಪ್ರತಿ ವರ್ಷವೂ ವಸಂತ ವಿಹಾರ ಎಂಬ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದ್ದರು. ಇವರಿಂದ ಪ್ರಭಾವಿತರಾದ ಸಾವಿರಾರು ಯುವಕರು ಲೌಕಿಕ ಜೀವನದಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದ್ದಾರೆ. ನೂರಾರು ಯುವಕರು ಸಂನ್ಯಾಸ ದೀಕ್ಷೆ ಪಡೆಯಲು ಸ್ವಾಮಿ ಹರ್ಷಾನಂದರು ಪ್ರೇರಣೆ ನೀಡಿರುವುದು ದಾಖಲಾರ್ಹ ಸಂಗತಿಯಾಗಿದೆ.

    ಸೇವೆಗೆ ಮೀಸಲಾದ ಬದುಕು; ಹಿಂದೂ ಧರ್ಮದ ವಿಶ್ವಕೋಶದ ಕೊಡುಗೆ ನೀಡಿದ ಯತಿ
    ರಾಮಕೃಷ್ಣ ಮಠಕ್ಕೆ ಆಗಮಿಸಿ ಪಾರ್ಥಿವ ಶರೀರದ ದರ್ಶನ ಪಡೆದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್

    ಹಿಂದೂಧರ್ಮ ಕುರಿತ ವಿಶ್ವಕೋಶ: ಹಿಂದೂಧರ್ಮದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು ಸ್ವಾಮಿ ಹರ್ಷಾನಂದ. ಸತತ 30 ವರ್ಷಗಳ ಅಧ್ಯಯನ ಮತ್ತು ಬರವಣಿಗೆಯ ನಂತರ 2008ರಲ್ಲಿ ನಾಲ್ಕು ಸಂಪುಟಗಳ ವಿಶ್ವಕೋಶವನ್ನು ಬಿಡುಗಡೆ ಮಾಡಲಾಯಿತು. ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ವಿಶ್ವಕೋಶವನ್ನು ಲೋಕಾರ್ಪಣೆ ಮಾಡಿದ್ದರು. ಹರ್ಷಾನಂದರು ಇಂಗ್ಲಿಷ್, ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಸ್ವಾಮೀಜಿ ಈ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಕನ್ನಡ, ಸಂಸ್ಕೃತ, ತೆಲುಗು, ಹಿಂದಿ, ಬಂಗಾಳಿ, ಆಂಗ್ಲ ಭಾಷೆಗಳಲ್ಲಿ ಅವರು ಪ್ರಭುತ್ವ ಹೊಂದಿದ್ದರು.

    ಸ್ವಾಮಿ ವಿವೇಕಾನಂದರನ್ನು ನೆನೆದರು: ಮಂಗಳವಾರ ಬೆಳಗ್ಗೆಯಿಂದ ಉಲ್ಲಸಿತರಾಗಿದ್ದ ಸ್ವಾಮಿ ಹರ್ಷಾನಂದಜೀ, ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ವೀಕ್ಷಿಸಿದ್ದರು. ಮಧ್ಯಾಹ್ನ 12.30ಕ್ಕೆ ಭೋಜನ ಸೇವಿಸಿ ನಂತರ ಕೊಠಡಿಗೆ ತೆರಳುವ ವೇಳೆ ಹೃದಯಾಘಾತವಾಗಿ ಕೊನೆಯುಸಿರೆಳೆದರು.

    ರಾಮಕೃಷ್ಣ ಪರಮಹಂಸ, ವಿವೇಕಾನಂದರ ತತ್ವ-ಆದರ್ಶಗಳನ್ನು ಎತ್ತಿ ಹಿಡಿದ ವಿದ್ವಾಂಸರನ್ನು ನಾವು ಕಳೆದುಕೊಂಡಿದ್ದೇವೆ. ಉತ್ತಮ ವಾಗ್ಮಿಗಳಾಗಿದ್ದರು. ಭಗವಂತ ಅವರಿಗೆ ಮೋಕ್ಷ ಕರುಣಿಸಲಿ.

    | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts