More

    ಲಿಡ್ಕರ್ ಕಾಲನಿ ನಿವಾಸಿಗಳ ಬದುಕು ಅತಂತ್ರ

    ಶಿರಸಿ: ನಗರದ ಹೊರವಲಯದಲ್ಲಿರುವ ಲಿಡ್ಕರ್ ಕಾಲನಿಯ ನಿವಾಸಿಗಳು ಅತ್ತ ಗ್ರಾಮ ಪಂಚಾಯಿತಿಗೂ ಸೇರದೆ, ಇತ್ತ ನಗರಸಭೆಗೂ ಸಲ್ಲದೆ ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ಸಿದ್ಧತೆ ನಡೆಸಿದ್ದಾರೆ.

    ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಡಿಯ ಈ ಲಿಡ್ಕರ್ ಕಾಲನಿಯ ನಿವಾಸಿಗಳು ಮೂರೂವರೆ ದಶಕಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಹೇಳುವ ಪ್ರಕಾರ, 1983-84ರಲ್ಲಿ ಡಚ್ ಸರ್ಕಾರದ ಸಹಾಯಧನದಲ್ಲಿ ಕಡುಬಡತನದಲ್ಲಿದ್ದ 24 ಕುಟುಂಬಗಳಿಗೆ ವಸತಿಸಹಿತ ನಿವೇಶನ ಒದಗಿಸಿ, 10*12 ಚದರಡಿ ಅಳತೆಯ ಮೂರು ಕೊಠಡಿಗಳನ್ನು ನಿರ್ವಿುಸಿಕೊಟ್ಟಿತ್ತು. ಜೀವನೋಪಾಯಕ್ಕಾಗಿ ಚರ್ಮ ಉದ್ಯಮಕ್ಕೆ ಅವಕಾಶ ಮಾಡಿಕೊಟ್ಟಿತ್ತು. ನಂತರದ ವರ್ಷಗಳಲ್ಲಿ ಉದ್ದಿಮೆ ನಡೆಸುತ್ತಿದ್ದ ಕೇಂದ್ರಗಳು ಬಾಗಿಲು ಮುಚ್ಚಿದ ಮೇಲೆ, ನಿವಾಸಿಗಳು ಕೂಲಿ ಕೆಲಸ ಮಾಡಿ ಬದುಕುತ್ತಿದ್ದಾರೆ.

    ಮೂಲಸೌಲಭ್ಯದ ಕೊರತೆ: ಈ ಹಿಂದೆ ನಿರ್ವಿುಸಿರುವ ಮನೆಗಳು ಈಗ ಶಿಥಿಲಗೊಂಡಿವೆ. ಬಡತನದಲ್ಲಿ ಜೀವನ ನಡೆಸುತ್ತಿರುವ ನಮಗೆ ಹೊಸದಾಗಿ ಮನೆ ನಿರ್ವಿುಸಿಕೊಳ್ಳಲು ಆಗುತ್ತಿಲ್ಲ. ಅಲ್ಲದೆ, ನಿವೇಶನವೇ ನಿವಾಸಿಗಳ ಹೆಸರಿಗಿಲ್ಲದ ಕಾರಣ, ಮನೆ ದುರಸ್ತಿಗೂ ಹಿಂದೇಟು ಹಾಕುವಂತಾಗಿದೆ. ಕೆಲವು ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ತುದಿಯಲ್ಲಿರುವ ನೀರಿನ ಟ್ಯಾಂಕ್, ಪಕ್ಕದಲ್ಲಿರುವ ವಿದ್ಯುತ್ ಪರಿವರ್ತಕ ಅಪಾಯಕಾರಿ ಸ್ಥಿತಿಯಲ್ಲಿದೆ. ಮನೆಗಳು ಆಯಾ ಮನೆ ಮಾಲೀಕರ ಹೆಸರಿಗೆ ಇಲ್ಲದ ಕಾರಣ ಎಲ್ಲಿಯೂ ಸಾಲ ಸಿಗುತ್ತಿಲ್ಲ. ಸ್ವ ಸಹಾಯ ಸಂಘದಲ್ಲಿ ಅಧಿಕ ಬಡ್ಡಿ ಹಣ ಕೊಟ್ಟು ಸಾಲ ಪಡೆಯಬೇಕು. ಗರ್ಭಿಣಿಯರು, ಶಾಲಾ ಮಕ್ಕಳಿಗೆ ವಾಸ್ತವ್ಯ ಪ್ರಮಾಣಪತ್ರ ಕೇಳಿದರೆ ನೀಡಲು ದಾಖಲೆಯಿಲ್ಲ. ನಗರಸಭೆಗೆ ತುಂಬಿರುವ ತೆರಿಗೆ ಪಾವತಿಯ ದಾಖಲೆಯನ್ನೇ ನೀಡಬೇಕು. ಹಲವಾರು ವರ್ಷಗಳಿಂದ ನಗರಸಭೆಗೆ ತೆರಿಗೆ ತುಂಬಲಾಗುತ್ತಿದೆ. ಅದರಲ್ಲೂ ಇವರ ಹೆಸರಿಲ್ಲ. ಕೇವಲ ಮನೆ ಸಂಖ್ಯೆ ಇದೆ. ಹೀಗಾಗಿ, ಸರ್ಕಾರಿ ಸೌಲಭ್ಯಗಳು ಕೈತಪ್ಪುತ್ತಿರುವುದರ ಜತೆಗೆ ಪಂಚಾಯಿತಿ, ನಗರಸಭೆಯಿಂದಲೂ ಮೂಲಸೌಕರ್ಯ ಒದಗಿಸುವ ಕಾರ್ಯವಾಗುತ್ತಿಲ್ಲ. ಇದರಿಂದ ಮತದಾನ ಬಹಿಷ್ಕರಿಸಲು ತೀರ್ವನಿಸಲಾಗಿದೆ ಎಂದು ಮುಖೇಶ ನೇತ್ರೆಕರ, ರಾಜೇಶ ಪಾವಸ್ಕರ ಇತರರು ಅಳಲು ತೋಡಿಕೊಂಡರು.

    ನುಣುಚಿಕೊಳ್ಳುವ ಪಂಚಾಯಿತಿ ಅಧಿಕಾರಿಗಳು: 52 ಮನೆಗಳಿಗೆ ಸೇರಿ ಒಂದು ತೆರೆದ ಬಾವಿಯಿದೆ. ಎಲ್ಲ ಮನೆಗಳೂ ಅದರ ನೀರನ್ನೇ ಬಳಸುತ್ತಿವೆ. ನಿತ್ಯವೂ ನೀರನ್ನು ಸೇದಬೇಕು. ಗಂಗಾ ಕಲ್ಯಾಣ ಯೋಜನೆಯಡಿ ನಗರಸಭೆ ನೀರಿನ ಸಂಪರ್ಕ ಕಲ್ಪಿಸಿತ್ತು. ಅದಕ್ಕೆ ಹಣ ತುಂಬಬೇಕೆಂಬ ಅರಿವಿರಲಿಲ್ಲ. ನಾಲ್ಕೈದು ವರ್ಷಗಳ ನಂತರ ಅಧಿಕ ಮೊತ್ತದ ಬಿಲ್ ಬಂತು. ನಮ್ಮ ಬಳಿ ಭರಣ ಮಾಡಲು ಆಗಲಿಲ್ಲ. ಹೀಗಾಗಿ, ನಗರಸಭೆ ಅಧಿಕಾರಿಗಳು ನೀರಿನ ಸಂಪರ್ಕ ಕಡಿತಗೊಳಿಸಿದರು. ರಾಜೀವ ಗಾಂಧಿ ಆಶ್ರಯ ಯೋಜನೆಯಡಿ ನಮ್ಮ ಎದುರಿನ 32 ಮನೆಗಳಿಗೆ ನಗರಸಭೆ ಪಟ್ಟಾ ನೀಡಿದೆ. ಆದರೆ, ಅಲ್ಲಿಯೂ ಮೂಲಸೌಕರ್ಯದ ಕೊರತೆಯಿದೆ. ನಮಗೆ ನೆಲದ ಹಕ್ಕು ಕೂಡ ದೊರೆತಿಲ್ಲ. ಲಿಡ್ಕರ್ ನಿಗಮದವರು ಆಗ ಇಲ್ಲಿಗೆ ಕರೆತಂದರು. ಈಗ ನಾವು ಅತಂತ್ರರಾಗಿದ್ದೇವೆ. ನಮ್ಮ ಮತದಾನದ ಹಕ್ಕು ದೊಡ್ನಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದೆ. ಆದರೆ, ಸೌಲಭ್ಯ ಒದಗಿಸಲು ಅವರು ತಮ್ಮ ಜಾಗವಲ್ಲವೆಂದು ನುಣುಚಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಿತ್ಯ ಬೆಳಗ್ಗೆ ಸರದಿಯಲ್ಲಿ ನಿಂತು ನೀರು ಸೇದಬೇಕು. ಬೇಸಿಗೆಯಲ್ಲಿ ಬಾವಿಯಲ್ಲಿ ನೀರಿಲ್ಲದಾಗ, ಕುಡಿಯುವ ನೀರಿಗೆ ಅಲೆದಾಡಬೇಕು. ಒಮ್ಮೆ ಮಳೆ ಬಂದರೆ ಎದುರಿನ ರಸ್ತೆಯ ತಗ್ಗಿನಲ್ಲಿ ನೀರು ನಿಲ್ಲುತ್ತದೆ. ಕೊಳಚೆ ವಾಸನೆ, ಸೊಳ್ಳೆ ಕಾಟ ಅನುಭವಿಸಬೇಕು. ಸಮಸ್ಯೆ ಬಗೆಹರಿಯದಿದ್ದರೆ ನಾವು ಹೋರಾಟ ಮಾಡುವುದು ಅನಿವಾರ್ಯ. ಪ್ರಸ್ತುತ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿದರೂ ಚುನಾವಣೆ ಪೂರ್ವ ಅಭಿವೃದ್ಧಿ ಆಗದಿದ್ದರೆ ಜನವರಿ 1ರಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತೇವೆ.
    | ಲಕ್ಷ್ಮಣ ಮಾಳಕ್ಕನವರ, ಸ್ಥಳೀಯ ನಿವಾಸಿ

    ಲಿಡ್ಕರ್ ಕಾಲನಿ ನಿವಾಸಿಗಳು ನಿಯಮಿತವಾಗಿ ತೆರಿಗೆ ಪಾವತಿಸುತ್ತಿರುವುದರಿಂದ ನಿಗಮದಿಂದ ಸ್ಪಷ್ಟೀಕರಣ ಪಡೆದು ಅಲ್ಲಿನ ಅಭಿವೃದ್ಧಿಗೆ ಯೋಚಿಸಲಾಗುವುದು. ಇಲ್ಲಿನ ಸ್ಥಿತಿಗತಿಯ ಬಗ್ಗೆ ಲಿಡ್ಕರ್ ನಿಗಮಕ್ಕೆ ಪತ್ರ ಬರೆದು ಗಮನಕ್ಕೆ ತರಲಾಗುವುದು. ಅಭಿವೃದ್ಧಿ ಕಾರ್ಯ ನಡೆಸುವಂತೆ ನಗರಾಡಳಿತ ಹಾಗೂ ಪಂಚಾಯಿತಿಗಳಿಗೆ ಸೂಚಿಸಲಾಗುವುದು. ಪ್ರಸ್ತುತ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡುವಂತೆ ಸ್ಥಳೀಯ ನಾಗರಿಕರಲ್ಲಿ ವಿನಂತಿಸಲಾಗಿದೆ.
    | ಎಂ.ಆರ್. ಕುಲಕರ್ಣಿ, ತಹಸೀಲ್ದಾರ್

    ಹಕ್ಕುಪತ್ರದ ಭರವಸೆ: ನಿಗಮಕ್ಕೆ ವಾರ್ಷಿಕವಾಗಿ 50 ಕೋಟಿ ರೂ. ಅನುದಾನ ಸಿಗುತ್ತಿದೆ. ಇದನ್ನು ಇಡೀ ರಾಜ್ಯದಲ್ಲಿರುವ ಲಿಡ್ಕರ್ ಕಾಲನಿಗಳ ಅಭಿವೃದ್ಧಿಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುತ್ತಿದೆ. ಶಿರಸಿ ಲಿಡ್ಕರ್ ಕಾಲನಿ ನಿವಾಸಿಗಳು ವಾಸಿಸುವ ಜಾಗ ಇನ್ನೂ ನಿಗಮದ ಹೆಸರಿಗೆ ನೋಂದಣಿಯಾಗಿಲ್ಲ. ನಿಗಮದ ಹೆಸರಿಗೆ ದೊರೆತರೆ, ನಿಯಮ ರೂಪಿಸಿ, ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗುತ್ತದೆ ಎನ್ನುತ್ತಾರೆ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧಿಕಾರಿಗಳು.

    ತಹಸೀಲ್ದಾರ್ ಭರವಸೆ: ಹಲವು ವರ್ಷಗಳಿಂದ ಬೇಸತ್ತ ಇಲ್ಲಿನ ನಿವಾಸಿಗಳು ಲಿಡ್ಕರ್ ಕಾಲನಿ ಬಳಿ ಗುರುವಾರ ಮತದಾನ ಬಹಿಷ್ಕರಿಸುವುದಾಗಿ ನಾಮಫಲಕ ಅಳವಡಿಸಿದ್ದರು. ವಿಷಯ ತಿಳಿದ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ನಾಮಫಲಕ ತೆಗೆಯಲಾಯಿತು. ಆದರೆ, ಕಾರ್ಯವಾಗದಿದ್ದರೆ ನಿಶ್ಚಿತವಾಗಿ ಹೋರಾಟ ಮುಂದುವರಿಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts