More

    ಮರೀಚಿಕೆಯಾದ ಕುಡಿವ ನೀರು ಶುದ್ಧತೆ

    ಗಂಗಾವತಿ: ಬೇಸಿಗೆಯಲ್ಲಿ ಕುಡಿವ ನೀರಿನ ಹಾಹಾಕಾರ ಶುರುವಾಗುತ್ತಿದ್ದಂತೆ ಖಾಸಗಿ ಆರ್‌ಒ ಪ್ಲಾಂಟ್‌ಗಳು ನೀರು ಅಕ್ರಮ ಮಾರಾಟಕ್ಕೆ ಮುಂದಾಗಿದ್ದು, ಬೆಲೆ ಮತ್ತು ಶುದ್ಧತೆ ಕಾಯ್ದುಕೊಳ್ಳುತ್ತಿಲ್ಲ.

    ನಗರದ ಒಂದು ಬದಿಯಲ್ಲಿ ತುಂಗಭದ್ರಾ ನದಿ, ಇನ್ನೊಂದು ಬದಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಆವರಿಸಿಕೊಂಡರೂ, ಕುಡಿವ ನೀರಿನ ಬವಣೆ ತಪ್ಪುತಿಲ್ಲ. ಒಂದು ಕಾಲದಲ್ಲಿ ದಿನದ 24 ಗಂಟೆಯೂ ಯಥೇಚ್ಛವಾಗಿ ನೀರು ಪೂರೈಸುತ್ತಿದ್ದ ನಗರಸಭೆಗೆ ಮಿತಿ ಮೀರಿದ ನೀರು ಪೊಲು ಮಾಡಿದ ಪರಿಣಾಮ 2 ದಿನಕ್ಕೊಮ್ಮೆ ನೀರು ಪಡೆಯುವ ಸ್ಥಿತಿ ಬಂದಿದೆ. ನಗರದ 35 ವಾರ್ಡ್‌ಗಳಿಗೆ ನೀರು ಪೂರೈಸುವ 1ನೇ ಹಂತದ ಶುದ್ಧೀಕರಣ ಘಟಕ ಸ್ಥಗಿತಗೊಂಡಿದ್ದರೆ, 2 ಮತ್ತು 3ನೇ ಘಟಕಗಳಿಂದಲೇ ನೀರು ಪಡೆಯಬೇಕಿದೆ. ಜಲಾಗಾರದಲ್ಲೂ ನೀರಿನ ಕೊರತೆಯಾಗುತ್ತಿದ್ದು, ನೀರೆತ್ತುವ ಜಾಕ್ವೆಲ್ ಪೈಪ್‌ಗಳು ನೀರಿನಿಂದ ಮೇಲಕ್ಕೆ ಬಂದಿವೆ. ಮಾರ್ಚ್‌ನಲ್ಲಿ ಇಂತಹ ಸ್ಥಿತಿಯಾದರೆ, ಇನ್ನೆರೆಡು ತಿಂಗಳು ನೀರು ನಿರ್ವಹಣೆ ಕಡುಕಷ್ಟವಾಗಿದೆ.

    ಪಾರದರ್ಶಕತೆ ಕಾಯ್ದುಕೊಳ್ಳಲಿ: ಕುಡಿವ ನೀರು ಪೂರೈಸುವ ಆರ್‌ಒ ಪ್ಲಾಂಟ್‌ಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿದ್ದು, ಶುದ್ಧತೆ ಮತ್ತು ಗುಣಮಟ್ಟದತ್ತ ಗಮನಹರಿಸುತ್ತಿಲ್ಲ. ನಗರಸಭೆ 8 ಆರ್‌ಒ ಪ್ಲಾಂಟ್‌ಗಳ ಪೈಕಿ 5 ನಿರ್ವಹಿಸುತ್ತಿದ್ದು, ಉಳಿದವು ಹಾಳಾಗುವ ಹಂತಕ್ಕೆ ಬಂದಿವೆ. ಸರ್ಕಾರಿ ಆರ್‌ಒ ಪ್ಲಾಂಟ್‌ಗಳ ಗುಣಮಟ್ಟ ಜವಾಬ್ದಾರಿ ಆರೋಗ್ಯ ಇಲಾಖೆಗಿದ್ದರೂ, ಒಂದೇ ಒಂದು ವರದಿ ನೀಡಿಲ್ಲ. ಖಾಸಗಿ ಆರ್‌ಒ ಪ್ಲಾಂಟ್‌ಗಳಂತೂ ಪರವಾನಗಿ ಪಡೆಯಲ್ಲ, ನಗರಸಭೆ ನೀಡುವ ಉದ್ಯಮ ಲೈಸೆನ್ಸ್ ಪರವಾನಗಿ ಎಂದು ನಂಬಿದ್ದಾರೆ. ನೀರಿನ ಶುದ್ಧತೆ, ತ್ಯಾಜ್ಯ ವಿಲೇವಾರಿ, ಸಾಗಣೆ ಸಂದರ್ಭದಲ್ಲಿ ಕ್ಯಾನ್‌ಗಳ ಸ್ವಚ್ಛತೆ, ಸಿಬ್ಬಂದಿ ಮಾಹಿತಿ ಸೇರಿ ಪ್ರತಿಯೊಂದನ್ನು ಪಾರದರ್ಶಕತೆ ಕಾಯ್ದುಕೊಳ್ಳಬೇಕಿದೆ. ಆರ್‌ಒ ಪ್ಲಾಂಟ್‌ಗಳ ಗುಣಮಟ್ಟದ ಬ್ರಾಂಡ್ ಪಡೆಯಬೇಕಿದ್ದು, ಕ್ಯಾನ್‌ಗಳ ಮೇಲೆ ಸಂಪೂರ್ಣ ಮಾಹಿತಿ ಒದಗಿಸಬೇಕು. ನಗರಾದ್ಯಂತ 40ಕ್ಕೂ ಹೆಚ್ಚು ಪ್ಲಾಂಟ್‌ಗಳಿದ್ದರೂ, ನಗರಸಭೆ ಕಡತದಲ್ಲಿರುವುದು 16 ಮಾತ್ರ.

    ಕಡಿವಾಣ ಬೀಳಲಿ: ನೀರಿನ ಹಾಹಾಕಾರ ಹಿನ್ನೆಲೆಯಲ್ಲಿ ಆರ್‌ಒ ಪ್ಲಾಂಟ್‌ಗಳದ್ದೇ ಕಾರುಬಾರು. ಬೆಲೆ ನಿಗದಿಯಲ್ಲೂ ವ್ಯತ್ಯಾಸವಿದ್ದು, 5ರೂ.ಗಳಿಂದ 25ರೂ.ಗಳವರೆಗೂ ವಸೂಲಿ ಮಾಡಲಾಗುತ್ತಿದೆ. ಕ್ಯಾನ್‌ಗಳ ಮೇಲೆ ಯಾವುದೇ ಲೇಬಲ್ ಇಲ್ಲ, ಗುಣಮಟ್ಟ ಪರೀಕ್ಷೆ ವರದಿಯಿಲ್ಲ. ವಾರಗಟ್ಟಲೇ ಸಂಗ್ರಹಿಸಿದ ನೀರನ್ನು ಮನೆಗಳಿಗೆ ಪೂರೈಕೆ ಮಾಡಲಾಗುತ್ತಿದ್ದು, ನಗರಸಭೆ ಮತ್ತು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಶುದ್ಧ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಬಗ್ಗೆ ಜಾಗೃತಿ ಮೂಡಿಸುವ ಆರೋಗ್ಯ ಇಲಾಖೆ ಆರ್‌ಒ ಪ್ಲಾಂಟ್‌ಗಳನ್ನು ಪರಿಶೀಲಿಸುತ್ತಿಲ್ಲ. ಪ್ಲಾಂಟ್ ಸುತ್ತಲೂ ಸ್ವಚ್ಛತೆ ಮಾಯವಾಗಿದ್ದು, ತ್ಯಾಜ್ಯವನ್ನು ರಸ್ತೆಗೆ ಹರಿಬಿಡಲಾಗುತ್ತಿದೆ. ನೀರು ಮಾರಾಟ ದಂಧೆಯಾಗಿದ್ದು, ಕಡಿವಾಣವಿಲ್ಲದಂತಾಗಿದೆ.

    ಸೂಕ್ತ ಬೆಲೆ ನಿಗದಿಯಾಗಲಿ…

    ಒಂದು ಲೀಟರ್ ನೀರು ಉಚಿತ, 2 ಲೀಟರ್‌ಗೆ 2 ರೂ. ಮತ್ತು 25 ಲೀಟರ್ ನೀರನ್ನು 5 ರೂ.ಗೆ ಮಾರಾಟ ಮಾಡಬೇಕೆಂಬ ನಿಯಮವಿದ್ದರೂ ಯಾರೂ ಪಾಲಿಸುತ್ತಿಲ್ಲ. ಮದುವೆ ಇತರ ಸಮಾರಂಭಗಳಿಗೂ ಪೂರೈಕೆಯಾಗುವ ನೀರಿನ ಗುಣಮಟ್ಟ ಖಚಿತ ಪಡಿಸುತ್ತಿಲ್ಲ. ಸಂಘಟನೆಗಳ ವೃತ್ತಗಳಲ್ಲಿ ಆರಂಭಿಸಿರುವ ನೀರಿನ ಅರವಟಿಗೆಗಳ ಬಗ್ಗೆ ನಗರಸಭೆ ನಿಗಾವಹಿಸಬೇಕಿದ್ದು, ನಿತ್ಯವೂ ಸ್ವಚ್ಛಗೊಳಿಸಿ, ಶುದ್ಧ ನೀರು ಪೂರೈಸುವಂತೆ ಸೂಚನೆ ನೀಡಬೇಕಿದೆ. ಪ್ರಚಾರಕ್ಕಾಗಿ ಆರಂಭಿಸುವ ಸಂಘಟನೆಗಳು ಶುದ್ಧತೆಯತ್ತ ಗಮನಿಸುತ್ತಿಲ್ಲ. ಅನಾಹುತ ಸಂಭವಿಸುವ ಮುನ್ನವೇ ನಗರಸಭೆ ಮತ್ತು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ.

    ಶುದ್ಧತೆ ಮತ್ತು ಬೆಲೆ ನಿಗದಿ ವಿಚಾರದಲ್ಲಿ ಖಾಸಗಿ ಆರ್‌ಒ ಪ್ಲಾಂಟ್‌ಗಳ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದ್ದು, ಶೀಘ್ರವೇ ಸಭೆ ಕರೆದು ಏಕರೂಪದ ಬೆಲೆ ನಿಗದಿ ಪಡಿಸಲಾಗುವುದು. ಗುಣಮಟ್ಟ ಹಾಗೂ ಪರೀಕ್ಷೆಯಿಲ್ಲದ ಪ್ಲಾಂಟ್‌ಗಳಿಗೆ ಮಾನ್ಯತೆ ನೀಡಲ್ಲ.

    ಆರ್.ವಿರೂಪಾಕ್ಷಮೂರ್ತಿ, ನಗರಸಭೆ ಪೌರಾಯುಕ್ತ

    ಬೇಸಿಗೆ ಅವಧಿಯಲ್ಲೂ ಕುಡಿವ ನೀರು ಪೂರೈಕೆಯಲ್ಲಿ ಖಾಸಗಿ ಸಂಸ್ಥೆಗಳು ಅನುಸರಿಸುತ್ತಿರುವ ಕ್ರಮ ಸರಿಯಲ್ಲ. ಈ ಬಗ್ಗೆ ನಗರಸಭೆ ಮತ್ತು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದ್ದು, ಗುಣಮಟ್ಟಕ್ಕೆ ಆದ್ಯತೆ ನೀಡಬೇಕಿದೆ.
    ಬಸವರಾಜ ಮ್ಯಾಗಳಮನಿ
    ಅಧ್ಯಕ್ಷ, ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts