More

    ನರೇಗಾ ಕಾರ್ಮಿಕರಿಂದ ಪ್ರಧಾನಿಗೆ ಪತ್ರ ಚಳವಳಿ; ಕೂಲಿ ಹಣ ಹೆಚ್ಚಿಸಿ, ಬಾಕಿ ವೇತನ ಪಾವತಿಸಿ

    ಮಂಜುನಾಥ ಎಸ್. ಅಂಗಡಿ ಧಾರವಾಡ
    ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ವರದಾನವಾಗಿದೆ. ಸ್ವಂತ ಗ್ರಾಮದಲ್ಲೇ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಧ್ಯೇಯ. ಆದರೆ, ಒಂದೆಡೆ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲಾ ಪಂಚಾಯಿತಿ ಅಽಕಾರಿಗಳು ನಿಷ್ಕಾಳಜಿ ವಹಿಸಿದರೆ, ಮತ್ತೊಂದೆಡೆ ಕೂಲಿಕಾರರು ದುಡಿಮೆಗೆ ತಕ್ಕ ಕೂಲಿ ಹಣಕ್ಕಾಗಿ ಪ್ರಧಾನಮಂತ್ರಿ ಮೊರೆ ಹೋಗುವ ದುಸ್ಥಿತಿ ಬಂದಿದೆ.
    ಜಿ.ಪ೦.ನಿ೦ದ ಅನುಮೋದನೆಗೊಂಡು ಗ್ರಾಮ ಪಂಚಾಯಿತಿಗಳಿ೦ದ ಅನುಷ್ಠಾನಗೊಳ್ಳುವ ಯೋಜನೆಗಳಿಗೆ ಗ್ರಾಮೀಣ ಪ್ರದೇಶದ ಕೂಲಿಕಾರರನ್ನು ಬಳಸಿಕೊಳ್ಳಬೇಕು. ಗ್ರಾ.ಪಂ.ಗಳಲ್ಲಿ ಹೆಸರು ನೋಂದಾಯಿಸಿಕೊ೦ಡು ಉದ್ಯೋಗ ಚೀಟಿ (ಜಾಬ್ ಕಾರ್ಡ್) ಹೊಂದಿರುವ ಕೂಲಿಕಾರರನ್ನು ಗ್ರಾಮೀಣ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು ಎಂಬ ನಿರ್ದೇಶನವಿದೆ. ಕೂಲಿಕಾರರಿಗೆ ಪ್ರತಿದಿನಕ್ಕೆ 316 ರೂ. ವೇತನ ನಿಗದಿಯಾಗಿದ್ದು, ಅವರ ಬ್ಯಾಂಕ್ ಖಾತೆಗೆ ನೇರ ಜಮೆಯಾಗುತ್ತದೆ.

    ಕೆರೆಗಳ ಹೂಳೆತ್ತುವುದು, ಬದುವು- ಕೃಷಿ ಹೊಂಡ ನಿರ್ಮಾಣ, ಚರಂಡಿ, ಮನೆ, ದನದ ಕೊಟ್ಟಿಗೆ ನಿರ್ಮಾಣ, ಶೌಚಗೃಹ, ಸಸಿ ನೆಡುವುದು, ಶಾಲೆ- ಅಂಗನವಾಡಿಗಳಿಗೆ ಕಾಂಪೌ೦ಡ್ ಹಾಗೂ ಅಡುಗೆ ಕೋಣೆ ನಿರ್ಮಾಣ ಕಾಮಗಾರಿಗಳಿಗೆ ನರೇಗಾ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲಾಗುತ್ತಿದೆ. ಕೂಲಿಕಾರರು ಗ್ರಾ.ಪಂ.ಗಳಿಗೆ ಸಲ್ಲಿಸುವ ಉದ್ಯೋಗ ಬೇಡಿಕೆ ಅರ್ಜಿ ಆಧರಿಸಿ 15 ದಿನಗಳಲ್ಲಿ ಕೆಲಸ ನೀಡಬೇಕು. ಆದರೆ, ಬಹುತೇಕ ಪಂಚಾಯಿತಿಗಳಲ್ಲಿ ಉದ್ಯೋಗ ನೀಡುವಲ್ಲೂ ವಿಳಂಬ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ಜರುಗಿಸಬೇಕಾದ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಆಯಾ ತಾ.ಪಂ. ಇಒಗಳು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕೇವಲ ಸಭೆ- ಸಮಾರಂಭಗಳಲ್ಲಿ ಬ್ಯುಸಿಯಾಗಿರುವುದು ವಿಪರ್ಯಾಸ.
    ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನರೇಗಾ ಉದ್ಯೋಗಕ್ಕೆ ಬಹು ಬೇಡಿಕೆ ಇದೆ. ನಿರಂತರ ಕೆಲಸಕ್ಕೆ ಆಗ್ರಹಿಸಿ ಕೂಲಿಕಾರರು ವಿವಿಧ ಸಂಘಟನೆಗಳ ಮೂಲಕ ಮೇಲಿಂದ ಮೇಲೆ ಬೀದಿಗಿಳಿಯುವುದು ತಪ್ಪುತ್ತಿಲ್ಲ. ಜಿ.ಪಂ., ತಾ.ಪಂ., ಗ್ರಾ.ಪಂ.ಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರೂ ಅಧಿಕಾರಿಗಳ ಬೇಜವಾಬ್ದಾರಿ ಮುಂದುವರಿದಿದೆ. ಈ ಕುರಿತು ಸಿಇಒ ಸ್ವರೂಪ ಹಾಗೂ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಕರೆ ಸ್ವೀಕರಿಸಲಿಲ್ಲ.

    ಪ್ರಧಾನಿಗೆ ಮೊರೆ
    ಬಾಕಿ ಕೂಲಿ ಪಾವತಿಗೆ ಆಗ್ರಹಿಸಿ ಕೂಲಿಕಾರರು ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ತಾವರಗೇರಿ, ದಾಸ್ತಿಕೊಪ್ಪ, ಸೂಳಿಕಟ್ಟಿ, ತಂಬೂರ ಸುತ್ತಲಿನ ಗ್ರಾಮಗಳ ಕೂಲಿಕಾರರು ಪ್ರಧಾನಿಗೆ ಪತ್ರ ಬರೆದು ಕೂಲಿ ಹಣ ಬಿಡುಗಡೆಗೆ ವಿನಂತಿಸಿದ್ದಾರೆ.

    ಒಂದು ಕುಟುಂಬಕ್ಕೆ ವರ್ಷಕ್ಕೆ ೧೦೦ ದಿನಗಳ ಉದ್ಯೋಗ ನಿಗದಿಯಾಗಿದ್ದು, ಇನ್ನೂ ೫೦ ದಿನ ಹೆಚ್ಚಳ ಮಾಡಬೇಕು. ಈಗಾಗಲೇ ಬಾಕಿ ಇರುವ ೨ ತಿಂಗಳ ಕೂಲಿ ಪಾವತಿಸಬೇಕು. ನಿಗದಿತ ೩೧೬ ರೂ. ವೇತನವನ್ನು ಹೆಚ್ಚಳ ಮಾಡಬೇಕು. ಉದ್ಯೋಗ ಬಯಸಿ ಸಲ್ಲಿಸುವ ಅರ್ಜಿಗಳನ್ನು ಪಿಡಿಒಗಳು ಸ್ವೀಕರಿಸುವುದಿಲ್ಲ. ಈ ಕುರಿತು ಪ್ರಧಾನಮಂತ್ರಿಗೆ ಪತ್ರ ಚಳವಳಿ ಮೂಲಕ ಮಾಹಿತಿ ರವಾನಿಸಿದ್ದೇವೆ.

    • ನಿಂಗಮ್ಮ ಸವಣೂರ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts