More

    ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಕೈಜೋಡಿಸೋಣ

    ಕೋಲಾರ: ಮಹಿಳೆಯರು ಸಮಾಜದ ಎಲ್ಲ ರಂಗಗಳಲ್ಲೂ ಮಹತ್ವದ ಪಾತ್ರ ವಹಿಸಿದ್ದು, ಅಬಲೆಯಲ್ಲ ನಾನು ಸಬಲೆ ಎಂದು ಸಾಬೀತುಪಡಿಸಿದ್ದಾರೆ. ಆದ್ದರಿಂದ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿಸದೇ ಲಿಂಗ ಸಮಾನತೆ ಒದಗಿಸುವ ಮೂಲಕ ಅವರ ಸಬಲೀಕರಣಕ್ಕೆ ಕೈಜೋಡಿಸೋಣ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್​ ಎಸ್​.ಹೊಸಮನಿ ತಿಳಿಸಿದರು.

    ನಗರ ಹೊರವಲಯದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು-&ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾಜದಲ್ಲಿ ಮಹಿಳೆಯ ಸಾಧನೆ ಗುರುತಿಸುವ ಮೂಲಕ ಒಳ್ಳೆಯ ಸಮಾಜ ನಿಮಾರ್ಣ ಮಾಡೋಣ. ಭವಿಷ್ಯದ ಸಾಧನೆಗಳಿಗಾಗಿ ಅವರನ್ನು ಪ್ರೇರೇಪಿಸೋಣ. ಯಾವ ಸಮಾಜ ಮಹಿಳೆಯನ್ನು ಗೌರವಿಸುತ್ತದೆಯೋ ಆ ಸಮಾಜ ಉತ್ತಮವಾಗಿರುತ್ತದೆ ಎಂದು ಹೇಳಿದರು.

    ಈ ವರ್ಷದ ಮಹಿಳಾ ದಿನದ ಘೋಷವಾಕ್ಯ “ಮಹಿಳೆಯರಲ್ಲಿ ಶಿಕ್ಷಣವನ್ನು ನೀಡಿ ಅಭಿವೃದ್ಧಿ ವೇಗವನ್ನು ಪ್ರಗತಿಗೊಳಿಸುವುದು’ ಎಂಬುದಾಗಿದ್ದು, ಯಾವುದೇ ಹೆಣ್ಣು ಮಗು ಶಿಕ್ಷಣದಿಂದ ವಂಚಿತವಾಗದಂತೆ ಸಮಾಜದ ಪ್ರತಿಯೊಬ್ಬರು ಗಮನಹರಿಸಬೇಕು. ಶಿಕ್ಷಣದ ಹಕ್ಕಿನಿಂದ ವಂಚಿಸಿ ಬಾಲ್ಯವಿವಾಹ ಮಾಡುವ ಪ್ರಕರಣಗಳು ಕಂಡು ಬಂದರೆ ಸಹಾಯವಾಣಿಗೆ ದೂರು ನೀಡಿ ಎಂದು ಕೋರಿದರು.

    ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್​ಕುಮಾರ್​ ಮಾತನಾಡಿ, ಮಹಿಳೆಯರಿಗೆ ಸಮಾನತೆ ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಮೀಸಲಾತಿ ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು. ತಮಗೆ ಸಿಕ್ಕಿರುವ ಅವಕಾಶವನ್ನು ಪುರುಷರು ಚಲಾಯಿಸುವಂತೆ ಅವಕಾಶ ನೀಡಬಾರದು ಎಂದು ತಿಳಿಸಿದರು.

    ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಮಾತನಾಡಿ, ಸಮಾಜದ ಎಲ್ಲ ರಂಗಗಳಲ್ಲೂ ಇಂದು ಮಹಿಳೆ ತನ್ನ ಶಕ್ತಿ ಸಾಬೀತು ಮಾಡಿದ್ದಾಳೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಎಎಸ್​, ಕೆಎಎಸ್​ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಯಾವುದೇ ಪರೀಕ್ಷಾ ಫಲಿತಾಂಶ ಗಮನಿಸಿದರೂ ಮಹಿಳೆಯರೇ ಮೇಲುಗೈ ಸಾಧಿಸುತ್ತಿರುವುದನ್ನು ಕಂಡಿದ್ದೇವೆ ಎಂದರು.

    ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗೆ ಸರ್ಕಾರ ಕಠಿಣ ಕಾಯ್ದೆ ಜಾರಿಗೊಳಿಸಿದೆ. ಮಹಿಳೆ ತಾನು ಅಡುಗೆ ಮನೆಗೆ ಸೀಮಿತ ಎಂಬ ಭಾವನೆಯಿಂದ ಹೊರಬರಬೇಕು. ಸಿಕ್ಕಿರುವ ಅಧಿಕಾರ, ಅವಕಾಶ ಬಳಸಿಕೊಳ್ಳಬೇಕು ಎಂದು ಕೋರಿದರು. ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್​ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನಾಗರತ್ನಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts