More

    ನುಡಿದಂತೆ ನಡೆಯುವ ಆದರ್ಶ ಪಾಲಿಸೋಣ

    ವಿಜಯಪುರ: ನುಡಿದಂತೆ ನಡೆದವರು ಲಿಂ. ಸಿದ್ಧೇಶ್ವರ ಶ್ರೀಗಳು. ಹೀಗಾಗಿ ಸಿದ್ಧೇಶ್ವರ ಶ್ರೀಗಳ ನಡೆನುಡಿ ನಮಗೆಲ್ಲರಿಗೂ ಸ್ಫೂರ್ತಿ. ಅವರ ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ಜವಳಿ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

    ನಗರದ ಜ್ಞಾನ ಯೋಗಾಶ್ರಮದಲ್ಲಿ ಜ್ಞಾನಯೋಗಿ ಲಿಂ. ಸಿದ್ಧೇಶ್ವರ ಶ್ರೀಗಳ ಗುರುನಮನ ಮಹೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ‘ಗ್ರಾಮೀಣ ಜನರ ಬದುಕು’ ವಿಷಯ ಕುರಿತ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

    ಜನ ಗೋಳಗುಮ್ಮಟ ನೋಡುವ ಬದಲು ಜ್ಞಾನ ಗುಮ್ಮಟ ನೋಡಲು ವಿಜಯಪುರಕ್ಕೆ ಬರುತ್ತಿದ್ದಾರೆ ಎಂದರೆ ಶ್ರೀಗಳ ವ್ಯಕ್ತಿತ್ವದ ಶಕ್ತಿ ನಮಗೆ ಅರ್ಥವಾಗುತ್ತದೆ. ಅವರ ಬದುಕು ಇಡೀ ಜಗತ್ತಿಗೆ ಒಂದು ಮಾರ್ಗದರ್ಶಕ. ಎಲ್ಲ ತತ್ವಜ್ಞಾನಿಗಳನ್ನು ನಾವು ನೋಡಲು ಸಾಧ್ಯವಾಗಲಿಲ್ಲ. ಬದಲಿಗೆ ಎಲ್ಲ ತತ್ವಜ್ಞಾನಿಗಳ ಕುರಿತು ಸಿದ್ಧೇಶ್ವರ ಅಪ್ಪನವರ ಮಾತಿನ ಮೂಲಕ ನಾವು ಕಂಡಿದ್ದೇವೆ ಎಂದು ಹೇಳಿದರು.

    ವಿಪ ಮಾಜಿ ಸದಸ್ಯ ಅರುಣ ಶಹಪೂರ ಮಾತನಾಡಿ, ತತ್ವಜ್ಞಾನಿ ಸಿದ್ಧೇಶ್ವರ ಸ್ವಾಮೀಜಿಯವರ ಬಗ್ಗೆ ಅಧ್ಯಯನವಾಗಬೇಕು ಮತ್ತು ಪಠ್ಯಕ್ರಮದಲ್ಲಿ ಅವರ ಪ್ರವಚನಗಳು ಸೇರಿಸುವ ಕೆಲಸವಾಗಬೇಕು. ಪ್ಲೇಟೊ ಮತ್ತು ಅರಿಸ್ಟಾಟಲ್ ಅವರ ಮಾದರಿಯಲ್ಲಿ ಅಪ್ಪನವರ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ವಿನಂತಿ ಮಾಡುತ್ತೇನೆ ಎಂದರು.

    ಬೆಳಗಾವಿಯ ನಿವೃತ್ತ ಪ್ರಾಧ್ಯಾಪಕ ಡಾ. ಬಸವರಾಜ ಜಿಗಜಿಂಪಿ ಮಾತನಾಡಿ, ಜಗತ್ತಿನಲ್ಲಿ ಇಂದು ಎಲ್ಲ ಹಳ್ಳಿಗಳು ಬದಲಾಗಿವೆ. ಆದರೆ ಆ ಸ್ವಚ್ಛ, ಸುಂದರ, ಸಂತೋಷದ ಬದುಕನ್ನು ನಾವು ಇಂದಿಗೂ ಹಳ್ಳಿಗಳಲ್ಲಿ ನೋಡುತ್ತಿದ್ದೇವೆ ಎಂದರು.

    ಗದಗ ನಗರದ ಜಗದ್ಗುರು ಶಿವಾನಂದ ಮಠದ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಲಕ್ಷಾಂತರ ಜನರಿಗೆ ದೀಪವಾಗಿ ಬೆಳಕು ನೀಡುತ್ತಿದ್ದ ನಕ್ಷತ್ರ ಒಂದನ್ನು ಕಳೆದುಕೊಂಡು ಇಂದು ನಾವೆಲ್ಲರೂ ಅಂಗಳದಲ್ಲಿ ಕುಳಿತುಕೊಂಡು ಹುಡುಕುವಂತಾಗಿದೆ ಎಂದು ಹೇಳಿದರು.

    ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಮಲಕನದೇವರ ಹಟ್ಟಿಯ ಮಲ್ಲಿಕಾರ್ಜುನ ಭಜನಾ ಮಂಡಳಿಯಿಂದ ಪ್ರಾರ್ಥನೆ ನೆರವೇರಿತು. ಕಾಖಂಡಕಿಯ ಚನ್ನಪ್ಪ ತೋಟಕರ್ ಹಳ್ಳಿಯ ಹಾಡು ಹಾಡಿದರು. ಡಾ. ಸೋಮಶೇಖರ ವಾಲಿ ಸ್ವಾಗತಿಸಿ, ಪರಿಚಯಿಸಿದರು. ಪ್ರಭುಲಿಂಗ ಮಹಾಸ್ವಾಮೀಜಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts