More

    ನಮ್ಮ ಕಲಾ ಪ್ರತಿಭೆಗಳನ್ನು ಬೆಳೆಸೋಣ

    ಹುಬ್ಬಳ್ಳಿ: ಉತ್ತರ ಕರ್ನಾಟಕದ ಕಲಾ ಪ್ರತಿಭೆಗಳನ್ನು ಬೆಳೆಸಬೇಕು. ದೇಶದ ಚಿತ್ತ ನಮ್ಮತ್ತ ವಾಲುವಂತೆ ಮಾಡುವ ಜವಾಬ್ದಾರಿ ಕಲಾವಿದರಾದ ನಮ್ಮ ಮೇಲಿದೆ ಎಂದು ಕಲಾವಿದೆ ಹಾಗೂ ಸಂಶೋಧಕಿ ಡಾ. ಕರುಣಾ ವಿಜಯೇಂದ್ರ ಹೇಳಿದರು.
    ಅಭಿನಯ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮೂವರು ವಿದ್ಯಾರ್ಥಿನಿಯರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
    ನಮ್ಮ ಜವಾಬ್ದಾರಿ ನಾವೇ ನೋಡಿಕೊಳ್ಳಬೇಕು. ಹಾಗಾಗಿ ಕಲೆಯನ್ನು ಶಿಕ್ಷಣ ರೂಪದಲ್ಲಿ ನೀಡುವುದಲ್ಲದೇ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ಕಲಾವಿದರಿಗೆ ಜನರು ನೆರವಿನ ಹಸ್ತ ಚಾಚುತ್ತಿದ್ದರು. ಇಂದಿನ ದಿನಗಳಲ್ಲಿ ಕಲಾವಿದರು ಜೀವನೋಪಾಯಕ್ಕಾಗಿ ಬೇರೆ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
    ನೃತ್ಯ ಗುರು ವಿದುಷಿ ಕುಮುದಿನಿ ರಾವ್ ಮಾತನಾಡಿ, ಹಳೆಯ ಪದ್ಧತಿಯನ್ನು ಬಿಟ್ಟು ಕೊಡದೇ ಹೊಸತನ್ನು ರೂಢಿಸಿಕೊಳ್ಳುವ ಸಂಶೋಧಿಸುವ ಜಾಯಮಾನ ನಮ್ಮದಾಗಬೇಕು. ಅಂದಾಗ ಮಾತ್ರ ಕಲೆಗೆ ಮತ್ತಷ್ಟು ಮೆರಗು ಬರಲಿದೆ. ಸೀಮಾ ಉಪಾಧ್ಯಾಯ ಅವರು ಹೊಸತನ್ನು ಧಾರೆ ಎರೆಯುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ ಎಂದರು.
    ಕಾರ್ಯಕ್ರಮ ಪೂರ್ವದಲ್ಲಿ ರಂಗ ಪ್ರವೇಶ ಮಾಡಿದ ವಿದ್ಯಾರ್ಥಿನಿಯರಾದ ಶ್ವೇತಾ ಶಣೈ, ಲಕ್ಷ್ಮೀ ಕುಲಕರ್ಣಿ, ಸ್ನೇಹಾ ನಡಕಟ್ಟಿನ ಅವರಿಗೆ ನೃತ್ಯ ಗುರು ವಿದುಷಿ ಸೀಮಾ ಉಪಾಧ್ಯಾಯ ಅವರು ಗೆಜ್ಜೆ ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಭರತ ನಾಟ್ಯ ರಂಗಪ್ರವೇಶವು ನೋಡುಗರ ಕಣ್ಮನ ಸೆಳೆಯಿತು.
    ವಿದುಷಿ ಕುಮುದಿನಿ ರಾವ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ತಬಲಾ ವಿಷಯದಲ್ಲಿ ಪಿಎಚ್.ಡಿ. ಪಡೆದ ಕಲಾವಿದ ಡಾ. ನಾಗಲಿಂಗ ಮುರಗಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
    ಪ್ರಮುಖರಾದ ಪ್ರೊ. ಸುನೀಲ ವೆರ್ಣೇಕರ, ನರೇಶ ಪಾಟೀಲ, ಅರುಂಧತಿ ನಾಯಕ ಇತರರು ಇದ್ದರು. ಸತೀಶ ಮುರೂರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts