More

    ವಚನ ಸಾಹಿತ್ಯ ಜೀವನದ ಅವಿಭಾಜ್ಯ ಅಂಗವಾಗಲಿ

    ಸೋಮವಾರಪೇಟೆ: ವಚನ ಸಾಹಿತ್ಯ ಜೀವನದ ಅವಿಭಾಜ್ಯ ಅಂಗವಾದಲ್ಲಿ ಪ್ರತಿಯೊಬ್ಬರ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ ಎಂದು ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕೆ.ಎನ್.ಧನಲಕ್ಷ್ಮೀ ಹೇಳಿದರು.

    ಯಜಮಾನ್ ಪುಟ್ಟಮಲ್ಲಪ್ಪ ಚೆನ್ನವೀರಮ್ಮ ಸ್ಮರಣಾರ್ಥ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕಾಫಿ ಬೆಳೆಗಾರ ಸೋಮವಾರಪೇಟೆಯ ಎ.ಪಿ.ಶಂಕರಪ್ಪ ಅವರು ಸ್ಥಾಪಿಸಿರುವ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದೊಂದಿಗೆ ವಚನ ಸಾಹಿತ್ಯವನ್ನು ತಪ್ಪದೇ ಅಧ್ಯಯನ ಮಾಡುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗಬೇಕೆಂದು ಸಲಹೆ ನೀಡಿದರು.

    ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೋಮವಾರಪೇಟೆ ಜಾನಪದ ಪರಿಷತ್‌ನ ಕಾರ್ಯದರ್ಶಿ ವಿಜಯ ಹಾನಗಲ್, ಮನುಷ್ಯನ ಬದುಕಿಗೆ ದಾರಿದೀಪವಾಗಿರುವ ವಚನ ಸಾಹಿತ್ಯವನ್ನು ಇಂದಿನ ಪೀಳಿಗೆಗೆ ಹೆಚ್ಚಾಗಿ ತಿಳಿಸುವ ಕೆಲಸವಾಗಬೇಕಿದೆ. ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಕೂಡ, ನಿಸರ್ಗ ನಮಗೆ ನೀಡಿರುವ ನೀರು, ಗಾಳಿ, ಮಣ್ಣು ಮೊದಲಾದ ಅಮೂಲ್ಯ ಸಂಪತ್ತನ್ನು ಸಂರಕ್ಷಣೆ ಮಾಡಿದಲ್ಲಿ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ. ವಿದ್ಯಾರ್ಥಿಗಳು ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ಉತ್ತಮ ಸಂಸ್ಕಾರದೊಂದಿಗೆ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ಕೊಟ್ಟರು.

    ದತ್ತಿ ಉಪನ್ಯಾಸ ನೀಡಿದ ಐಗೂರು ಪಿಯು ಕಾಲೇಜು ಕನ್ನಡ ಉಪನ್ಯಾಸಕ ನಿಶ್ಚಯ್, 12ನೇ ಶತಮಾನದಲ್ಲಿ ನೊಂದ ಜನರ ಧ್ವನಿಯಾದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ, ಅಂಬಿಗರ ಚೌಡಯ್ಯ ಮೊದಲಾದ ಬಸವಾದಿ ಶರಣರ ಹೋರಾಟ ಹಾಗೂ ಕಾಯಕ ಅವಿಸ್ಮರಣೀಯ ಎಂದರು.

    ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜವರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾಲೇಜಿನ ಪ್ರಾಧ್ಯಾಪಕರಾದ ಡಾ.ಕೆ.ಎನ್.ಕುಸುಮಾ, ಡಾ.ಗೀತಾ, ಎಂ.ಎಂ.ಸುನೀತಾ, ಎಂ.ಎಸ್.ಶಿವಮೂರ್ತಿ, ಕೋಮಲ, ಗಾಯತ್ರಿ ಇದ್ದರು. ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜು ಪ್ರಾಂಶುಪಾಲರಾದ ಧನಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts