More

    ಮುಂದಿನ ಪೀಳಿಗೆಗೆ ಶುದ್ಧ ಜೀವ ಜಲ ಉಳಿಯಲಿ

    ತಿ.ನರಸೀಪುರ: ಪಾಳು ಬಿದ್ದಿದ್ದ ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಕೆರೆಯನ್ನು ಜೀರ್ಣೋದ್ಧಾರಗೊಳಿಸುವ ಮೂಲಕ ಶುದ್ಧ ಜೀವ ಜಲವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಅವಕಾಶ ಕಲ್ಪಿಸಿಕೊಟ್ಟ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ ಎಂದು ಮಾಡ್ರಹಳ್ಳಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

    ತಾಲೂಕಿನ ಮೂಗೂರು ಹೋಬಳಿಯ ಮಾಡ್ರಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಅಭಿವೃದ್ಧಿಗೊಂಡ 469ನೇ ನಮ್ಮೂರು ನಮ್ಮ ಕೆರೆ, ನಾಮಫಲಕ ಅನಾವರಣ, ಬಾಗಿನ ಅರ್ಪಣೆ ಹಾಗೂ ಕೆರೆ ಹಸ್ತಾಂತರದಡಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ನಾಲ್ಕು ದಶಕಗಳಿಂದ ಗ್ರಾಮಾಭಿವೃದ್ಧಿ ಯೋಜನೆ ಸಮಾಜದ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿ ಸಹಕಾರ ನೀಡುತ್ತಿದೆ. ನಾವೆಲ್ಲರೂ ಕೆರೆಯನ್ನು ಜೋಪಾನವಾಗಿ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ. ಉತ್ತಮ ಸಂಸ್ಕಾರ, ಮೌಲ್ಯಯುತ ಜೀವನ ಹೇಗೆ ನಡೆಸಬೇಕೆಂದು ಶ್ರೀ ಕ್ಷೇತ್ರದ ಕಾರ್ಯವೈಖರಿಗಳನ್ನು ಗಮನಿಸಿ ಅವುಗಳಿಂದ ತಿಳಿವಳಿಕೆ ಪಡೆದು ಅದರಂತೆ ಮುನ್ನಡೆಯಬೇಕು ಎಂದರು.

    ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಮಾತನಾಡಿ, ಒಂದು ದಶಕಗಳಿಂದ 600ಕ್ಕೂ ಹೆಚ್ಚು ಕೆರೆಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ 600 ಗ್ರಾಮಗಳ ಜನರು ಮತ್ತು ಜಾನುವಾರುಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಅಂತರ್ಜಲ ಮಟ್ಟ ಸುಧಾರಿಸುವ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಬೇಡಿಕೆ ಇರುವ ಕೆರೆಗಳ ಪುನಶ್ಚೇತನ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಕೊತ್ತೆಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮಣಿ, ಉಪಾಧ್ಯಕ್ಷೆ ವನಜಾಕ್ಷಮ್ಮ, ಕೆರೆ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್, ರೈತ ಮುಖಂಡರಾದ ಶಂಕರ್ ಗುರು, ಶಿವಮೂರ್ತಿ, ಮರಿಸ್ವಾಮಿ, ಲಕ್ಷ್ಮಣ್, ಕ್ಷೇತ್ರ ಯೋಜನಾಧಿಕಾರಿ ಹನುಮಂತಪ್ಪ, ಕೃಷಿ ಮೇಲ್ವಿಚಾರಕ ಟಿ.ಆರ್.ಕುಮಾರ್, ವಲಯ ಮೇಲ್ವಿಚಾರಕಿ ಕುಮಾರಿ, ಟಿಎನ್‌ಒ ಪುಟ್ಟರಾಜು, ಸೇವಾ ಪ್ರತಿನಿಧಿ ಗಳಾದ ನಿರ್ಮಲಾ, ಮಮತಾ, ಪವನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts