More

    ಮಹಿಳೆಯರು ಸಿಕ್ಕ ಅವಕಾಶ ಬಳಸಿಕೊಳ್ಳಲಿ

    ಹಾನಗಲ್ಲ: ಹೆಣ್ಣು ಮಕ್ಕಳ ಸಬಲೀಕರಣಗೊಂಡು ಸಮುದಾಯದಲ್ಲಿ ಮುಂಚೂಣಿಗೆ ಬರಬೇಕೆಂಬುದು ರೋಶನಿ ಸಮಾಜ ಸೇವಾ ಸಂಸ್ಥೆಯ 25 ವರ್ಷಗಳ ಕನಸು. ಮಹಿಳೆಯರು ಸಿಕ್ಕ ಅವಕಾಶ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ರೋಶನಿ ಸಮಾಜ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಹೇಳಿದರು.

    ತಾಲೂಕಿನ ಕೊಂಡೋಜಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳೆಯರ ಹೊಲಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಹೆಣ್ಣು ಸಮಾಜದಲ್ಲಿ ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ಎಲ್ಲ ಹಂತದಲ್ಲೂ ಕುಟುಂಬದಲ್ಲಿ ಸಹಕಾರಿಯಾಗಿರುತ್ತಾಳೆ. ಇತ್ತೀಚೆಗೆ ತನ್ನನ್ನು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾಳೆ. ಆದರೂ, ಕೆಲವೊಮ್ಮೆ ತನ್ನ ಸಾಮರ್ಥ್ಯ ಅರಿಯದೆ ಬೇರೆಯವರನ್ನೆ ಅವಲಂಬಿಸುವ ಅನಿವಾರ್ಯತೆ ಎದುರಾಗುತ್ತದೆ. ಜೀವನವಿಡೀ ತನ್ನವರಿಗಾಗಿ ಬದುಕಿ, ಬೆಳಕಾಗಿ ತನ್ನ ಜೀವನವನ್ನು ಕತ್ತಲೆಯಲ್ಲೇ ಕಳೆಯುತ್ತಾಳೆ. ಇದನ್ನೆಲ್ಲ ಮೆಟ್ಟಿನಿಂತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸಿ, ಸ್ವಉದೋಗದಲ್ಲಿ ತೋಡಗಿಸುವುದೇ ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದರು.

    ಶಾಡಗುಪ್ಪಿ ಗ್ರಾಪಂ ಉಪಾಧ್ಯಕ್ಷ ಸತೀಶ ಅಂಕೋಲಾ ಮಾತನಾಡಿ, ಮಹಿಳೆಯರು ಸಂಘಟನೆಗೊಂಡು ತಮ್ಮ ಹಕ್ಕು ಮತ್ತು ಕರ್ತವ್ಯ ಅರಿತುಕೊಳ್ಳಬೇಕು. ಸಮಾನ ಬದುಕಿಗೆ ಮುಂದಾಗಬೇಕು ಎಂದರು.

    ವಡಗೇರಿ ಗ್ರಾಮದ ಹಳ್ಳಿ ಅಭಿವೃದ್ಧಿ ಸಮಿತಿ ಸದಸ್ಯ ರಾಮಣ್ಣ ಬುಡ್ಡನವರ ಮಾತನಾಡಿ, ಹಳ್ಳಿಗಳಲ್ಲಿ ಮಹಿಳೆಯರು ಸಾಕಷ್ಟು ಅವಕಾಶಗಳು ಇದ್ದರೂ ಮಾಹಿತಿ ಕೊರತೆಯಿಂದ ಬಳಸಿಕೊಳ್ಳುವಲ್ಲಿ ವಿಫಲರಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿಯುತ್ತಿದ್ದಾರೆ. ಕೌಶಲ ತರಬೇತಿ ನೀಡಿ ಸಮುದಾಯದ ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯಬೇಕು ಎಂದರು.

    ಗ್ರಾಮ ಪಂಚಾಯಿತಿ ಸದಸ್ಯೆ ಶೈಲಾ ನಾರನವರ, ಕಳಸವ್ವ ಗೌರಕ್ಕನವರ, ಮಹಿಳಾ ಸಬಲೀಕರಣ ಸಂಯೋಜಕ ಡಿಗ್ಗಪ್ಪ ಲಮಾಣಿ, ಶಿವಕುಮಾರ ಮಾಂಗ್ಲೇನವರ, ಲಕ್ಷ್ಮವ್ವ ನಾಗಪ್ಪನವರ ಮತ್ತು ಹೊಲಿಗೆ ತರಬೇತಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಶೀಲಾ ಮ್ಯಾಗಳಮನಿ ನಿರೂಪಿಸಿದರು. ಶಿಲ್ಪಾ ಭಜಂತ್ರಿ ಸ್ವಾಗತಿಸಿದರು. ರಾಜೇಶ್ವರಿ ಸಾಲಿಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts