More

    ಹಳ್ಳಿಗೆ ಕರೊನಾ ಬರದಂತೆ ತಡೆಯೋಣ: ರಾಜ್ಯವ್ಯಾಪಿ ಸೋಂಕು ಹರಡಲು ಅವಕಾಶ ನೀಡುವುದಿಲ್ಲ

    ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿಗಳು

    ಒಲೆ ಹೊತ್ತಿ ಉರಿದೊಡೆ, ನಿಲಬಹುದಲ್ಲದೆ / ಧರೆ ಹೊತ್ತಿ ಉರಿದೊಡೆ ನಿಲಲುಬಹುದೆ..? / ಏರಿ ನೀರುಂಬೊಡೆ, ಬೇಲಿ ಕಯ್ಯ (ಬೆಳೆ) ಮೆಯ್ಯುವೊಡೆ / ನಾರಿ ಮನೆಯಲ್ಲಿ ಕಳುವೊಡೆ / ಇನ್ನಾರಿಗೆ ದೂರುವೆನಯ್ಯಾ / ಕೂಡಲ ಸಂಗಮ ದೇವಾ!?

    ಹನ್ನೆರಡನೆಯ ಶತಮಾನದ ಮಹಾನ್ ಸಮಾಜ ಸುಧಾರಕ ಬಸವಣ್ಣನವರ ವಚನ ಈಗ ಎಷ್ಟು ಸಾಂರ್ದಭಿಕವಾಗಿದೆ ನೋಡಿ. ಧರೆ ಈಗ ಕರೊನಾ ವೈರಸ್ ಎನ್ನುವ ಮಾರಣಾಂತಿಕ ರೋಗದಿಂದ ಹೊತ್ತಿ ಉರಿಯುತ್ತಿದೆ. ಚೀನಾದ ವುಹಾನ್​ನಲ್ಲಿ ಕಾಣಿಸಿಕೊಂಡು ಅಲ್ಲಿನ ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡ ಈ ವೈರಸ್ ಒಂದೂವರೆ ತಿಂಗಳ ಅವಧಿಯಲ್ಲಿ ಇಡೀ ಜಗತ್ತನ್ನು ಆವರಿಸಿದೆ. ಅಮೆರಿಕ, ಇಟಲಿ, ಫ್ರಾನ್ಸ್, ಸ್ಪೇನ್, ಜಪಾನ್, ಜರ್ಮನಿ, ಇಂಗ್ಲೆಂಡ್, ಇರಾನ್, ದಕ್ಷಿಣ ಕೊರಿಯಾ, ಸ್ವಿಜರ್ಲ್ಯಾಂಡ್, ಬೆಲ್ಜಿಯಂ, ನೆದರ್​ಲ್ಯಾಂಡ್, ಸ್ವೀಡನ್, ಕೆನಡಾ, ಡೆನ್ಮಾರ್ಕ್, ಆಸ್ಟ್ರೇಲಿಯಾ, ಬ್ರೆಜಿಲ್, ಥಾಯ್ಲೆಂಡ್, ಭಾರತ, ಪಾಕಿಸ್ತಾನ.. ಹೀಗೆ ಕರೊನಾ ವೈರಸ್ಸಿನ ಮರಣ ಮೃದಂಗಕ್ಕೆ ಬಲಿಯಾಗಿರುವ ದೇಶಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈವರೆಗೆ ಜಗತ್ತಿನಾದ್ಯಂತ ಸಾವಿಗೀಡಾಗಿರುವವರ ಒಟ್ಟು ಕರೊನಾ ಪೀಡಿತರ ಸಂಖ್ಯೆ 13,071. ಇವರಲ್ಲಿ ಅತ್ಯಧಿಕ 4825 ಜನರು ಇಟಲಿಯಲ್ಲಿ ಸಾವನ್ನಪ್ಪಿದರೆ, ಕರೊನಾಗೆ ಜನ್ಮ ನೀಡಿದ ಚೀನಾದಲ್ಲಿ ಈ ರೋಗಕ್ಕೆ ಬಲಿಯಾಗಿರುವವರ ಸಂಖ್ಯೆ 3261.

    ಚೀನಾದಲ್ಲಿ 81054 ಮಂದಿ ಕರೊನಾ ಶಂಕಿತರಾಗಿದ್ದರೆ, ಅವರಲ್ಲಿ 72440 ಮಂದಿ ಚೇತರಿಸಿಕೊಂಡಿದ್ದಾರೆ. 5353 ಮಂದಿ ಕರೊನಾ ಮಾರಿಯ ದಾಳಿಯಿಂದ ಚೇತರಿಸಿಕೊಳ್ಳಬಹುದು. ಸಾವು ಬದುಕಿನ ನಡುವೆ ಹೋರಾಡುತ್ತಿರುವವರ ಸಂಖ್ಯೆ ಕೇವಲ 1845 ಮಾತ್ರ. ಇದೇ ಪರಿಸ್ಥಿತಿ ಇಟಲಿಯಲ್ಲಿಯೂ ಇದೆ. ಇಲ್ಲಿ ಕರೊನಾ ಪೀಡಿತರ ಸಂಖ್ಯೆ 53,578. ಇವರಲ್ಲಿ ಸಂಪೂರ್ಣ ಗುಣಮುಖರಾಗಿರುವವರ ಸಂಖ್ಯೆ 6072, ಕರೊನಾದ ತೀವ್ರ ಸುಳಿಯಿಂದ ಪಾರಾಗುವ ಸಾಧ್ಯತೆ ಇರುವವರ ಸಂಖ್ಯೆ 42,681. ಸಾವು ಬದುಕಿನ ನಡುವೆ ಹೋರಾಡುತ್ತಿರುವವರ ಸಂಖ್ಯೆ 2857. ಈ ಎರಡೂ ರಾಷ್ಟ್ರಗಳನ್ನು ಹೊರತುಪಡಿಸಿದರೆ ವಿಶ್ವದ ಬಹುತೇಕ ರಾಷ್ಟ್ರಗಳು ಕರೊನಾ ಎನ್ನುವ ಈ ಮಾರಣಾಂತಿಕ ರೋಗವನ್ನು ತಡೆಗಟ್ಟುವ ಹಾದಿಯಲ್ಲಿ ಸಮರೋಪಾದಿಯಲ್ಲಿ ಸಜ್ಜಾಗಿವೆ.

    ಭಾರತದಲ್ಲಿ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಕ್ಷ ನೇತೃತ್ವದಲ್ಲಿ ಕರೊನಾ ಪಿಡುಗನ್ನು ಮೂಲೋತ್ಪಾಟನೆ ಮಾಡಲು ಸಂಕಲ್ಪ ಮಾಡಿದ್ದೇವೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಈ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಹಿತ ಕಾಪಾಡುವುದು ನನ್ನ ಗುರುತರ ಹೊಣೆಗಾರಿಕೆ. ಯಾವುದೇ ಕಾರಣಕ್ಕೆ ಕರೊನಾ ವೈರಸ್ ರಾಜ್ಯವ್ಯಾಪಿ ಹರಡಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ಕಳೆದ ಎರಡು ಮೂರು ದಶಕಗಳ ಅವಧಿಯಲ್ಲಿ ಘಟಿಸಿದ ತೀವ್ರ ನಗರೀಕರಣ ಮತ್ತು ಕೈಗಾರಿಕೀಕರಣದ ಪರಿಣಾಮವಾಗಿ ಲಕ್ಷಾಂತರ ಜನರು ಹಳ್ಳಿಗಳನ್ನು ಬಿಟ್ಟು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರ ಬದುಕಿನ ಬೇರಿರುವುದು ಹಳ್ಳಿಗಳಲ್ಲಿ. ಅತಿವೃಷ್ಟಿ-ಅನಾವೃಷ್ಟಿಯಂತಹ ಪ್ರಕೃತಿ ವೈಪರೀತ್ಯಗಳ ಜತೆಗೆ ಎಲ್ಲ ರೀತಿಯ ನೋವು, ಸಮಸ್ಯೆ ಸಂಕಷ್ಟಗಳನ್ನು ಅನುಭವಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ತಂದೆ-ತಾಯಿಗಳು ಅವರನ್ನು ಆಶ್ರಯಿಸಿದವರು ಹಳ್ಳಿಗಳಲ್ಲಿ ನೆಲೆಸಿದ್ದಾರೆ. ಮಾಲಿನ್ಯ ಮುಕ್ತ ಶುದ್ಧ ಪರಿಸರದಲ್ಲಿ ಅವರು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಕರ್ನಾಟಕದ 27,028 ಹಳ್ಳಿಗಳಲ್ಲಿ, 3 ಕೋಟಿ 74 ಲಕ್ಷ 69 ಸಾವಿರದ 335 ಜನರು ವಾಸ ಮಾಡುತ್ತಿದ್ದಾರೆ. ಅದರಲ್ಲಿ 1ಕೋಟಿ 89 ಲಕ್ಷ 29 ಸಾವಿರದ 354 ಪುರುಷರಿದ್ದರೆ, 1 ಕೋಟಿ 85 ಲಕ್ಷ 39 ಸಾವಿರದ 981 ಮಂದಿ ಮಹಿಳೆಯರಿದ್ದಾರೆ.

    ಅಂದರೆ ಕರ್ನಾಟಕದ ಶೇ. 60ಕ್ಕೂ ಹೆಚ್ಚು ಮಂದಿ ಹಳ್ಳಿಗಳಲ್ಲಿ ವಾಸವಿದ್ದರೆ, ಶೇ.35ಕ್ಕೂ ಹೆಚ್ಚು ಮಂದಿ ನಗರ ಮತ್ತು ಅರೆನಗರಗಳಲ್ಲಿ ವಾಸಿಸುತ್ತಿದ್ದಾರೆ. ಪರಿಶುದ್ಧ ಪರಿಸರ, ಯಾವುದೇ ರೋಗರುಜಿನಗಳಿಲ್ಲದ ನೆಮ್ಮದಿಯ ನೆಲೆಯಾಗಿರುವ ಹಳ್ಳಿಗಳನ್ನು ಕರೊನಾ ಎನ್ನುವ ಈ ಮಾರಣಾಂತಿಕ ವೈರಸ್ ತಲುಪಲೇ ಕೂಡದು. ಹಳ್ಳಿಗಳು ಭಾರತದ ಬೆನ್ನೆಲುಬು. ಕೃಷಿ, ಹೈನುಗಾರಿಕೆ, ಮುಂತಾದ ಜೀವನೋಪಯೋಗಿ ಚಟುವಟಿಕೆಗಳು ಇಡೀ ರಾಜ್ಯದ ನೆಮ್ಮದಿಯ ಬದುಕಿನ ಜೀವನಾಡಿ. ಅತ್ಯಧಿಕ ಸಂಖ್ಯೆ ಶ್ರಮಿಕರು ನೆಲೆಸಿರುವುದೇ ಹಳ್ಳಿಗಳಲ್ಲಿ. ಈ ಕಾರಣದಿಂದಲೇ ಹಳ್ಳಿಗಳಿಗೆ ಕರೊನಾ ವೈರಸ್ ಪ್ರವೇಶಿಸಬಾರದು ಎನ್ನುವುದು ನನ್ನ ಅಭಿಮತ. ನಗರ ಪ್ರದೇಶಗಳಲ್ಲಿ ತುರ್ತು ಚಿಕಿತ್ಸೆಗಳಿಗೆ ಎಲ್ಲ ರೀತಿಯ ಸವಲತ್ತುಗಳಿರುತ್ತದೆ. ಸಾಕಷ್ಟು ಪ್ರಮಾಣದ ಪರಿಣತ ವೈದ್ಯಕೀಯ ಸಿಬ್ಬಂದಿ ಇರುತ್ತದೆ. ದೊಡ್ಡ ಪ್ರಮಾಣದಲ್ಲಿ ರೋಗ ತಪಾಸಣಾ ಕೇಂದ್ರಗಳಿವೆ. ಕರೊನಾ ತಡೆಯುವ ನಿಟ್ಟಿನಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1700 ಹಾಸಿಗೆ ಸಮುಚ್ಛಯವನ್ನು ಮೀಸಲಿಟ್ಟಿದ್ದೇವೆ. ಆದರೆ ಇಂಥ ವೈದ್ಯಕೀಯ ಸವಲತ್ತುಗಳು ಹಳ್ಳಿಗಳಲ್ಲಿ ಇಲ್ಲ.

    ಬೆಂಗಳೂರು ಸೇರಿದಂತೆ ನಗರಕ್ಕೆ ಹತ್ತಿರವಿರುವ ಹಳ್ಳಿಗಳ ಜನರು ಕರೊನಾ ಸೋಂಕು ಪೀಡಿತರನ್ನು ನಗರ ಪ್ರದೇಶಗಳಿಗೆ ಕರೆದುಕೊಂಡು ಬರಬಹುದು. ಆದರೆ ಕುಗ್ರಾಮಗಳಲ್ಲಿ ನೆಲೆಸಿರುವವರು ತಕ್ಷಣ ಚಿಕಿತ್ಸೆಗಾಗಿ ನಗರ ಪ್ರದೇಶಗಳಿಗೆ ಬರಲು ಕಷ್ಟಸಾಧ್ಯ. ಇದನ್ನು ಮನಗಂಡು ಹಳ್ಳಿಗಳಲ್ಲಿ ನೆಲೆಸಿರುವ ಕೃಷಿಕರು, ಕೃಷಿ ಕರ್ವಿುಕರು ದಲಿತರು, ಹಿಂದುಳಿದವರು, ನಿರಕ್ಷರಿಗಳು ಅಸಹಾಯಕರು, ವಯೋವೃದ್ಧ ತಂದೆ-ತಾಯಿ, ಅಕ್ಕತಂಗಿ, ಅಣ್ಣತಮ್ಮ ಬಂಧುಬಳಗ ಇವರು ಯಾವುದೇ ಕಾರಣಕ್ಕೆ ಕೊರೋನಾ ವೈರಸ್ಸಿಗೆ ಬಲಿ ಆಗಲೇ ಕೂಡದು. ಈ ಹಿನ್ನೆಲೆಯಲ್ಲಿ ರೋಗ ಗುಣಪಡಿಸುವುದಕ್ಕಿಂತ, ರೋಗ ತಡೆಗಟ್ಟುವುದು ಜಾಣತನ ಎನ್ನುವ ಗಾದೆಯ ಮಾತಿನ ಹಾಗೆ ಬೆಂಗಳೂರು ನಗರ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿ ಯಾವುದೇ ಕಾರಣಕ್ಕೆ ಹಳ್ಳಿಗಳಿಗೆ ಭೇಟಿ ನೀಡಕೂಡದು. ಎರಡು ಮೂರು ದಿನಗಳಲ್ಲಿ ಯುಗಾದಿ ಹಬ್ಬವಿದೆ. ಗ್ರಾಮೀಣ ಪ್ರದೇಶದಿಂದ ಬಂದು ಬೆಂಗಳೂರೂ ಸೇರಿದಂತೆ ನಗರ ಪ್ರದೇಶಗಳಲ್ಲಿ ನೆಲೆಸಿರುವವರಿಗೆ ಯುಗಾದಿ ಹಬ್ಬದ ಜತೆಗೆ ಭಾವನಾತ್ಮಕ ಬಂಧವಿದೆ. ಈ ಭಾವನಾತ್ಮಕ ಬಂಧದ ಸೆಳೆತಕ್ಕೆ ಬಲಿಯಾದರೆ ಹಳ್ಳಿಗಳ ನೆಮ್ಮದಿ ನಾಶ ಆಗುತ್ತದೆ. ಹರ್ಷದ ಕೂಳಿಗಿಂತಲೂ ವರ್ಷದ ಕೂಳು ಮುಖ್ಯ ಎನ್ನುವ ಕಟು ವಾಸ್ತವವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಹಳ್ಳಿಗಳನ್ನು ಕರೊನಾ ಪ್ರವೇಶಿಸದಂತೆ ತಡೆಗಟ್ಟಿದರೆ ನಾವು ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಶೇಕಡ ಅರವತ್ತರಷ್ಟು ಗೆಲುವು ಸಾಧಿಸಿದ ಹಾಗೆ. ಕರ್ನಾಟಕದ ಪ್ರತಿಯೊಂದು ಹಳ್ಳಿಗಳನ್ನು ಕರೊನಾ ವೈರಸ್ ಮುಕ್ತವಾಗಿಸಬೇಕು ಎನ್ನುವ ನನ್ನ ಸರ್ಕಾರದ ಸದಾಶಯದೊಂದಿಗೆ ನೀವೆಲ್ಲಾ ಭಾಗಿಗಳಾಗಬೇಕೆಂದು ನಾನು ಕೈಜೋಡಿಸಿ ವಿನಂತಿ ಮಾಡಿಕೊಳ್ಳುತ್ತೇನೆ.

    ಇನ್ನು ಕರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ದಿಸೆಯಲ್ಲಿ ನನ್ನ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದೆ. ಕರ್ನಾಟಕದ ಎಲ್ಲಾ ಗಡಿಗಳನ್ನು ಮುಚ್ಚಿದ್ದೇವೆ. ಸಾಮಾಜಿಕ ಒಗ್ಗೂಡುವಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕರೊನಾ ವೈರಾಣುಗಳನ್ನು ಪತ್ತೆ ಮಾಡುವ ಲ್ಯಾಬ್​ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಕನಿಷ್ಠ ಇನ್ನೂರು ಮಂದಿಗೆ ವೈದ್ಯಕೀಯ ತಪಾಸಣೆ ನಡೆಸುವ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಐಸಿಎಂಆರ್ ಮತ್ತು ಎನ್​ಐವಿ ಸಹಯೋಗದಲ್ಲಿ ಸಾಕಷ್ಟು ಸಂಖ್ಯೆಯ ಸರ್ಕಾರಿ ಮತ್ತು ಸರ್ಕಾರೇತರ ಲ್ಯಾಬ್​ಗಳಿಗೆ ಕೋವಿಡ್ ಅರ್ಥಾತ್ ಕರೊನಾ ತಪಾಸಣಾ ಪರವಾನಗಿ ನೀಡಲಾಗುವುದು. ಕರೊನಾ ತಡೆಗಟ್ಟುವ ಹಾದಿಯಲ್ಲಿ ಹಿರಿಯ ಸಚಿವರನ್ನೊಳಗೊಂಡ ಟಾಸ್ಕ್ ಪೋರ್ಸ್​ಗೆ ಸಹಾಯ ಮಾಡಲು ಹಿರಿಯ ಐಎಎಸ್ ಅಧಿಕಾರಿಗಳ ನಿಗ್ರಹ ದಳವನ್ನು ರಚಿಸಲಾಗಿದೆ. ಬಾಲಬ್ರೂಯಿ ಅತಿಥಿ ಗೃಹವನ್ನು ಕರೊನಾ ವಿರುದ್ಧ ಅತ್ಯಂತ ವ್ಯವಸ್ಥಿತವಾಗಿ ಹೋರಾಟ ಮಾಡುವ ವಾರ್ ರೂಂ ಆಗಿ ಪರಿವರ್ತಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲಿನ ಕರೊನ ಕುರಿತ ಸಂಪೂರ್ಣ ಮಾಹಿತಿ, ಅದನ್ನು ನಿವಾರಿಸಲು ಕೈಗೊಂಡ ಕ್ರಮಗಳ ಸಂಪೂರ್ಣ ನಿರ್ವಹಣೆಯನ್ನು ಬಾಲಬ್ರೂಯಿ ವಾರ್​ರೂಂನಿಂದ ನಿಭಾಯಿಸಲಾಗುವುದು. ಇಪ್ಪತ್ನಾಲ್ಕು ಗಂಟೆಗಳ ಕಾಲ ಕಾರ್ಯನಿರ್ವಹಿಸುವ ವಾರ್ ರೂಂ ನಿರ್ವಹಣೆಯ ನೇತೃತ್ವವನ್ನು ನಾನೇ ವಹಿಸಿದ್ದೇನೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಬಳ್ಳಾರಿ ಸೇರಿದಂತೆ ಕರೊನಾ ವೈರಸ್ ಹೆಚ್ಚು ಕಂಡುಬಂದಿರುವ ಜಿಲ್ಲೆಗಳಲ್ಲಿ ವೈದ್ಯಕೀಯ, ಔಷಧಿ, ದಿನಸಿ ಮತ್ತು ಕೃಷಿ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ವಾಣಿಜ್ಯ ಚಟುವಟಿಕೆಗಳನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

    ಕರ್ನಾಟಕದ ಪ್ರತಿಯೊಬ್ಬ ನಾಗರಿಕರಲ್ಲಿ ನನ್ನದೊಂದು ಹೃದಯಪೂರ್ವಕ ನಿವೇದನೆ. ನನ್ನ ಸರ್ಕಾರ ಕೊರೋನಾ ತಡೆಗಟ್ಟಲು ಕಾಯಾ ವಾಚಾ ಮನಸಾ ಎಲ್ಲಾ ರೀತಿಯ ಕ್ರಮಗಳನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸುತ್ತಿದೆ. ನಾನು ಹಗಲು- ರಾತ್ರಿಯೆನ್ನದೆ ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರತಿಯೊಂದು ಮುನ್ನೆಚ್ಚರಿಕಾ ಕ್ರಮಗಳ ಮೇಲುಸ್ತುವಾರಿಯನ್ನು ಮಾಡುತ್ತಿದ್ದೇನೆ. ನನ್ನ ಸಂಪುಟದ ಪ್ರತಿಯೊಬ್ಬ ಸಚಿವರು ಕರೊನಾ ವಿರುದ್ಧದ ಹೋರಾಟದಲ್ಲಿ ನನಗೆ ಬೆಂಗಾವಲಾಗಿ ನಿಂತಿದ್ದಾರೆ. ಇನ್ನು ರಾಜ್ಯದ ಸಾವಿರಾರು ವೈದ್ಯಕೀಯ ಸಿಬ್ಬಂದಿ ತಮ್ಮ ಆರೋಗ್ಯ ಲೆಕ್ಕಿಸದೆ ಕರೊನಾ ವಿರುದ್ಧ ಯುದ್ಧ ಸಾರಿದ್ದಾರೆ. ಸರ್ಕಾರ ಮಾತ್ರ ಕರೋನಾ ವಿರುದ್ಧದ ಸಮರದಲ್ಲಿ ಭಾಗಿಯಾದರೆ ಸಾಲದು, ಕರ್ನಾಟಕದ ಪ್ರತಿಯೊಬ್ಬ ನಾಗರಿಕನೂ ಕರೊನಾ ಸಮರದ ಸೇನಾನಿಗಳಾಗಬೇಕೆಂಬುದು ನನ್ನ ಕಳಕಳಿಯ ವಿನಂತಿ.

    ಜನತಾ ಕರ್ಫ್ಯೂ ಬೆಂಬಲಿಸಿ ಮನೆಯಿಂದ ಹೊರಗೆ ಬಂದು ಚಪ್ಪಾಳೆ ತಟ್ಟಿದ ರಾಜ್ಯದ ನಾಗರಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts