More

    ರೈತರಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರ ನೀಡಲಿ: ಮರಿಗೌಡ ಪಾಟೀಲ ಒತ್ತಾಯ

    ಹಾನಗಲ್ಲ: ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಬೆಳೆ ಹಾನಿ ಪರಿಹಾರವನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ವಿತರಿಸಿದೆ. ರಾಜ್ಯದ ಪಾಲಿನ ಪರಿಹಾರ ವಿತರಣೆ ಮಾಡದಿದ್ದರೆ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬೀದಿಗಿಳಿದು ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಸರ್ಕಾರಕ್ಕೆ ಎಚ್ಚರಿಸಿದರು.

    ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರ ಎದುರಾಗಿದೆ. ರೈತರು ಗುಳೆ ಹೋಗುವ ಸ್ಥಿತಿ ನಿರ್ವಣವಾಗಿದೆ. ಹೀಗಾಗಿ ಎನ್​ಡಿಆರ್​ಎಫ್ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಎಸ್​ಡಿಆರ್​ಎಫ್ ಪರಿಹಾರ ಸೇರಿಸಿ ರೈತರಿಗೆ ವಿತರಿಸಬೇಕು. ಈ ಹಿಂದೆ ರೈತರಿಗೆ ಕೇವಲ ಎರಡು ಸಾವಿರ ಪರಿಹಾರ ವಿತರಿಸಿದ್ದ ರಾಜ್ಯ ಸರ್ಕಾರ ಹೆಚ್ಚಿನ ಅನುದಾನಕ್ಕೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿತ್ತು ಎಂದರು.

    ಬರ ನಿರ್ವಹಣೆ ಪರಿಹಾರದ ಬಗ್ಗೆ ಲೋಕಸಭೆ ಚುನಾವಣೆಯಲ್ಲಿ ಚರ್ಚೆ ನಡೆದಿರುವುದು ಕೇವಲ ರಾಜಕೀಯ ಲಾಭಕ್ಕೆ ಎಂದೆನಿಸುತ್ತಿದೆ. ಈಗ ಕೇಂದ್ರದಿಂದ ಬರ ಪರಿಹಾರ ಅನುದಾನ ಬಿಡುಗಡೆಗೊಂಡಿದೆ. ಇದರಲ್ಲಿ ರಾಜ್ಯ ಸರ್ಕಾರ ಈ ಮೊದಲು ರೈತರಿಗೆ ವಿತರಿಸಿದ್ದ ಎರಡು ಸಾವಿರ ರೂ. ಮುರಿದುಕೊಂಡು ಪರಿಹಾರ ವಿತರಣೆ ಮಾಡಿರುವುದು ರಾಜ್ಯ ಸರ್ಕಾರದ ತಂತ್ರಗಾರಿಕೆ ತೋರಿಸುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಹಾಗಾದರೆ, ರಾಜ್ಯ ಸರ್ಕಾರ ಪರಿಹಾರ ನೀಡುವುದಿಲ್ಲವೇ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ ಎಂದರು.

    ಕೇಂದ್ರದ ಬರ ಪರಿಹಾರದಷ್ಟೇ ಮೊತ್ತವನ್ನು ರಾಜ್ಯ ಸರ್ಕಾರವೂ ರೈತರಿಗೆ ವಿತರಿಸಬೇಕು. ಕೇಂದ್ರ ಸರ್ಕಾರದ ಕಡೆಗೆ ಕೈ ತೋರಿಸದೆ ತನ್ನ ಪಾಲಿನ ಪರಿಹಾರವನ್ನು ಈಗಾಗಲೇ ರಾಜ್ಯ ಸರ್ಕಾರ ನೀಡಬೇಕಾಗಿತ್ತು. ಆದರೆ, ರಾಜಕೀಯ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ, ನ್ಯಾಯಾಲಯದ ಮೆಟ್ಟಿಲೇರಿ ಪರಿಹಾರ ದೊರೆತ ಮೇಲೆ ಕೇವಲ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಹಣವನ್ನು ರೈತರಿಗೆ ಕೊಡುತ್ತಿರುವುದು ರೈತರಿಗೆ ಮೋಸ ಮಾಡಿದಂತಾಗುತ್ತದೆ. ರಾಜ್ಯ ಸರ್ಕಾರದ ಎಸ್​ಡಿಆರ್​ಎಫ್ ಪರಿಹಾರ ಕೊಡದೇ ರೈತರ ಪರವಾಗಿ ರಾಜ್ಯ ಸರ್ಕಾರ ಇಲ್ಲ ಎಂಬುದನ್ನು ಸಾಬೀತು ಮಾಡುತ್ತಿದೆ ಎಂದರು.

    ರೈತರು ಬೆಳೆ ಹಾನಿ ಪರಿಹಾರಕ್ಕಾಗಿ ಅರ್ಜಿ ಹಾಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾವೇರಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರಿಗೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೃಷಿ ಸಚಿವರ ಸಮ್ಮುಖದಲ್ಲಿ ಜಿಲ್ಲೆಯ ರೈತರಿಂದ 18 ಸಾವಿರ ಅರ್ಜಿ ಸಲ್ಲಿಸಲಾಗಿತ್ತು. ಅಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದ ಮನವಿ ಪತ್ರದಲ್ಲಿ ಕೃಷಿಗೆ ಸಂಬಂಧಿತ ಅನುದಾನ ಯಾವುದೇ ಇಲಾಖೆಯಿಂದ ಬಿಡುಗಡೆಗೊಳ್ಳುತ್ತಿಲ್ಲ. ಹನಿ ನೀರಾವರಿ ಸಹಾಯಧನ ಮುಂದುವರಿಸಬೇಕು. ಅಡಕೆ ಬೆಳೆ ಹಾನಿಗೆ ಪರಿಹಾರ ನೀಡಬೇಕು ಎಂಬ ಬೇಡಿಕೆ ಸಲ್ಲಿಸಲಾಗಿತ್ತು ಎಂದು ಮರಿಗೌಡ ಪಾಟೀಲ ವಿವರಿಸಿದರು.

    ರೈತ ಸಂಘದ ಪ್ರಮುಖರಾದ ರುದ್ರಪ್ಪ ಹಣ್ಣಿ, ಸೋಮಣ್ಣ ಜಡೆಗೊಂಡರ, ಮಹಲಿಂಗಪ್ಪ ಅಕ್ಕಿವಳ್ಳಿ, ಷಣ್ಮುಖ ಅಂದಲಗಿ, ನಿಂಗನಗೌಡ ಪಾಟೀಲ, ಲೋಕೇಶ ಹುಲಿ, ಎಂ.ಎಂ.ಬಡಗಿ, ಶಂಭುಗೌಡ ಪಾಟೀಲ, ಪ್ರಶಾಂತಗೌಡ ಪಾಟೀಲ, ಶ್ರೀಧರ ಮಲಗುಂದ, ಸುಜಾತಾ ನಂದಿಶೆಟ್ಟರ, ಅಕ್ಕಮ್ಮ ಸುಗಾವಿ ಇತರರು ಉಪಸ್ಥಿತರಿದ್ದರು.

    2 ಸಾವಿರ ರೂ. ಕಡಿತ ಸರಿಯಲ್ಲ

    ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ಅವಧಿಯಲ್ಲಿ ಮಾರ್ಗಸೂಚಿ ಅನುಸರಿಸಿ ಪರಿಹಾರ ವಿತರಿಸಿತ್ತು ಎಂಬುದನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ನೆನಪಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ನೀಡಿದ ಪರಿಹಾರದಲ್ಲಿ 2 ಸಾವಿರ ರೂಪಾಯಿ ಕಡಿತಗೊಳಿಸಿ ಉಳಿದ ಹಣವನ್ನು ರೈತರಿಗೆ ನೀಡಿರುವುದು ರಾಜ್ಯ ಸರ್ಕಾರದ ರೈತ ನಿರೋಧಿ ನೀತಿಯಾಗಿದೆ ಎಂದು ಮರಿಗೌಡ ಪಾಟೀಲ ತಿಳಿಸಿದರು.

    ಈಗ ರೈತರಿಗೆ ಬರುತ್ತಿರುವ ಕೇಂದ್ರದ ಬೆಳೆಹಾನಿ ಪರಿಹಾರವನ್ನು ಬೆಳೆ ಸಾಲಕ್ಕೆ ಭರಿಸಿಕೊಳ್ಳುತ್ತಿರುವ ದೂರುಗಳು ರೈತರಿಂದ ಕೇಳಿ ಬರುತ್ತಿವೆ. ಪರಿಹಾರ, ಪೋ›ತ್ಸಾಹಧನವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಲೀಡ್ ಬ್ಯಾಂಕ್ ಅಧಿಕಾರಿಗಳು ಸಭೆ ನಡೆಸಿ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದಾರೆ. ಆದರೂ ಇದು ಮುಂದುವರಿದಿದೆ. ಈ ಕ್ರಮ ನಿಲ್ಲದಿದ್ದರೆ ಬ್ಯಾಂಕ್​ಗೆ ಕೀಲಿ ಜಡಿದು ಪ್ರತಿಭಟನೆಗೆ ರೈತ ಸಂಘ ಸಜ್ಜಾಗಲಿದೆ.

    | ಮರಿಗೌಡ ಪಾಟೀಲ, ರೈತ ಸಂಘದ ತಾಲೂಕು ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts