More

    ಪಾಲಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ

    ಕೊಳ್ಳೇಗಾಲ : ಹೆಣ್ಣು ಮಕ್ಕಳು ಶಿಕ್ಷಿತರಾಗಬೇಕು. ಶಿಕ್ಷಣದಿಂದ ಸಾಧನೆಯ ದಾರಿ ಸುಲಭವಾಗುತ್ತದೆ ಎಂದು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಭಾರತಿ ಹೇಳಿದರು.

    ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ಅಕ್ಕನ ಬಳಗ ಹಾಗೂ ವೀರಶೈವ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಸಮಾಜಕ್ಕೆ ಮಹಿಳೆಯರ ಕೊಡುಗೆ ಅಪಾರ. ಪಾಲಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಹೇಳಿದರು.

    ನನಗೆ ಶಿಕ್ಷಕಿಯಾಗಲು ಆಸೆ ಇತ್ತು, ಆದರೆ ಅರಣ್ಯಾಧಿಕಾರಿಯಾದೆ. ಮಕ್ಕಳಿಗೆ ಇದನ್ನೇ ಓದಬೇಕು. ಇಂತಹುದನ್ನೇ ಓದಬೇಕೆಂದು ಒತ್ತಡ ಹೇರಬಾರದು. ಅವರ ಆಸಕ್ತಿಗನುಗುಣವಾಗಿ ಬಿಡಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

    ಮೈಸೂರಿನ ವೀರಶೈವ ರುದ್ರಭೂಮಿಯಲ್ಲಿ ಕಾಯಕ ಸೇವೆ ಮಾಡುತ್ತಿರುವ ನೀಲಮ್ಮ ಮಾತನಾಡಿ, ಬದುಕು ನಮಗೆಲ್ಲ ಪಾಠವನ್ನು ಕಲಿಸುತ್ತದೆ. ಮಹಿಳೆಯರು ಸ್ವಾತಂತ್ರ್ಯವಾಗಿ ಬದುಕುವುದನ್ನು ಕಲಿಯಬೇಕು. ಭಯದಲ್ಲಿ ಜೀವನ ಸಾಗಿಸಬಾರದು. ನನ್ನ ಜೀವನ ನನಗೆ ಬಹಳ ಪಾಠ ಕಲಿಸಿ ಕೊಟ್ಟಿದೆ ಎಂದರು.

    ಪಾಲಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ
    ಕೊಳ್ಳೇಗಾಲ ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರು ನೃತ್ಯ ಪ್ರದರ್ಶನ ನೀಡಿದರು.

    ನನ್ನ ಪತಿ ಮೈಸೂರಿನ ವೀರಶೈವ ರುದ್ರಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು. ನನಗೆ 38 ವರ್ಷವಾಗಿದ್ದಾಗಲೇ ನನ್ನ ಪತಿ ಕಾಲವಾದರು. ಅದಾಗಲೇ ನನಗೆ ಇಬ್ಬರು ಮಕ್ಕಳಿದ್ದರು. ಪತಿ ಕಳೆದುಕೊಂಡ ನಂತರ ಅವರ ಪೋಷಣೆ ಹೇಗೆ ಮಾಡುವುದೆಂಬ ಆತಂಕ ಎದುರಾಯಿತು. ಆದರೆ, ನಂತರ ನಾನು ಸಹ ಬೇರೆ ಏನು ಕೆಲಸ ಮಾಡದೇ ಮಕ್ಕಳನ್ನು ಸಾಕುವುದಕ್ಕೆ ಅವರು ರುದ್ರಭೂಮಿಯಲ್ಲಿ ಮಾಡುತ್ತಿದ್ದ ಕೆಲಸವನ್ನು ಮುಂದುವರಿಸಿದ್ದೇನೆ. ಇದೀಗ ನನ್ನಿಬ್ಬರು ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿದ್ದಾರೆ. ಆದರೂ ನಾನು ರುದ್ರಭೂಮಿ ಕೆಲಸ ಬಿಟ್ಟಿಲ್ಲ ಎಂದರು.

    ಅಕ್ಕನ ಬಳಗದ ಗೌರವಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಮಾತನಾಡಿ, ಮಹಿಳೆಗೆ ಇಡೀ ಕುಟುಂಬವನ್ನು ಸಲಹುವ ಶಕ್ತಿ ಅವಳಿಗೆ ಇರುತ್ತದೆ. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ದುಡಿಯುತ್ತಿದ್ದಾರೆ. ಸಮಾಜದಲ್ಲಿ ಮಾದರಿ ಜೀವನ ನಡೆಸುತ್ತಿದ್ದಾರೆ ಎಂದರು.

    ಸನ್ಮಾನ: ವಲಯ ಅರಣ್ಯಾಧಿಕಾರಿ ಭಾರತಿ ಹಾಗೂ ವೀರಶೈವ ರುದ್ರಭೂಮಿಯಲ್ಲಿ ಕಾಯಕ ಸೇವೆ ಮಾಡುತ್ತಿರುವ ನೀಲಮ್ಮ ಅವರನ್ನು ಸನ್ಮಾನಿಸಲಾಯಿತು. ನಂತರ ಅಕ್ಕನ ಬಳಗದ ಶ್ವೇತಾ ಕೌಶಿಕ್, ಚಂದನ ಪ್ರಕಾಶ್, ಸವಿತಾ ಲೋಕೇಶ್, ಮಮತಾ ಪ್ರಸಾದ್, ಅರುಣ ಕಾರ್ತಿಕ್, ಶಾಂತಲಾ ರಾಜೇಶ್ ತಂಡ ನೃತ್ಯ ಪ್ರದರ್ಶನ ನೀಡಿತು. ಅಕ್ಕನ ಬಳಗದ ಅಧ್ಯಕ್ಷೆ ಪುಷ್ಪಾ ಶಾಂತಮಲ್ಲಪ್ಪ, ಕಾರ್ಯದರ್ಶಿ ಪ್ರಮೀಳಾ ನಂಜಪ್ಪ, ಕದಳಿ ವೇದಿಕೆ ಅಧ್ಯಕ್ಷೆ ರೂಪಾ ತೋಟೇಶ್ , ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಜಗದಾಂಬ ಸದಾಶಿವಮೂರ್ತಿ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts