More

    ಅಧಿಕಾರಿಗಳು ಪ್ರಾಮಾಣಿಕ ಸೇವೆಗೆ ಮುಂದಾಗಲಿ

    ನರಗುಂದ: ಸರ್ಕಾರದ ಪಿಂಚಣಿ ಯೋಜನೆಗಳನ್ನೇ ನಂಬಿ ನಿತ್ಯದ ಜೀವನ ಸಾಗಿಸುತ್ತಿರುವ ವೃದ್ಧರು, ಹಿರಿಯ ನಾಗರಿಕರು, ವಿಶೇಷ ಚೇತನರು, ಮಹಿಳೆಯರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸಬಾರದು. ನಿಗದಿತ ಅವಧಿಯೊಳಗೆ ಸರ್ಕಾರಿ ಸೇವೆಗಳು ಸಾರ್ವಜನಿಕರಿಗೆ ತಲುಪುವಂತೆ ಅಧಿಕಾರಿಗಳು ಪ್ರಾಮಾಣಿಕ ಸೇವೆಗೆ ಮುಂದಾಗಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ನರಗುಂದ ತಾಲೂಕು ಮಟ್ಟದ ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಅನಾರೋಗ್ಯ ಕಾರಣಗಳ ನೆಪ ನೀಡಿ ಕರ್ತವ್ಯಕ್ಕೆ ಗೈರಾಗುತ್ತಿರುವ ಕೆಲ ಶಿಕ್ಷಕರು ನಿಗದಿತ ರಜೆಯ ಅವಧಿ ಮುಗಿದರೂ ಶಾಲೆಗಳಿಗೆ ಮರಳುತ್ತಿಲ್ಲ. ಪರಿಣಾಮ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವಂತಾಗಿದೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಾಗ ಶಾಲೆಗಳಿಗೆ ಅನೀರಿಕ್ಷಿತವಾಗಿ ಭೇಟಿ ನೀಡಬೇಕು. ಮಕ್ಕಳ ಹಾಜರಾತಿ, ದಾಖಲಾತಿ, ಶಿಕ್ಷಕರ ಬೋಧನೆ ಸೇರಿ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಬೇಕು ಎಂದು ಬಿಇಒ ಡಾ.ಗುರುರಾಜ ಹೂಗಾರ ಅವರಿಗೆ ಸೂಚಿಸಿದರು.

    ಅಂಗನವಾಡಿ ಕೇಂದ್ರದ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ನೀಡುವ ವಿವಿಧ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ತಯಾರಿಸಿದ ಪ್ಯಾಕೆಟ್ ಮೇಲೆ ಅವಧಿ ಮುಗಿಯುವ ದಿನಾಂಕ ನಮೂದಿಸಬೇಕು. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಗುಣಮಟ್ಟದ ಅಡುಗೆ ಎಣ್ಣೆ ಪೊರೈಸಬೇಕು. ಗೃಹಲಕ್ಷ್ಮಿ ಫಲಾನುಭವಿಗಳ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸಬೇಕು ಎಂದು ಸಿಡಿಪಿಒ ಪ್ರದೀಪ ನಾಡಿಗೇರ ಅವರಿಗೆ ಸೂಚಿಸಿದರು.
    ಸರ್ಕಾರಿ ಶಾಲೆ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೊರೈಸುವುದರ ಜತೆಗೆ ವಾರಕ್ಕೊಮ್ಮೆ ನೀರಿನ ಪರಿಕರ, ಶೌಚಗೃಹಗಳನ್ನು ಸಿಬ್ಬಂದಿಗಳಿಂದ ಶುಚಿಗೊಳಿಸಬೇಕು. ಬಿಸಿಯೂಟಕ್ಕೆ ಪೂರೈಸುತ್ತಿರುವ ತೊಗರಿಬೇಳೆ, ಅಕ್ಕಿ, ಆಹಾರ ಪದಾರ್ಥಗಳಲ್ಲಿ ಹುಳುಗಳು ಪತ್ತೆ ಆಗುತ್ತಿವೆ. ತಾಜಾ ತರಕಾರಿಯಿಂದ ಅಡುಗೆ ತಯಾರಿಸುವಂತೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆನಂದ ಭೋವಿ ಅವರಿಗೆ ತಿಳಿಸಿದರು.

    ಸರ್ಕಾರಿ ಆಸ್ಪತ್ರೆ, ಶಾಲೆ, ಅಂಗನವಾಡಿ ಕೇಂದ್ರಗಳ ಸುತ್ತಲೂ ತಿಪ್ಪೆ ಹಾಕುವುದು, ಚರಂಡಿಗಳ ಮಲೀನ ನೀರು ಸಂಗ್ರಹಗೊಳ್ಳದಂತೆ ಸ್ಥಳೀಯ ಪುರಸಭೆ, ತಾಪಂ, ಆರೋಗ್ಯ, ಶಿಶು ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

    ನರಗುಂದದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ದಿನದ 24 ಗಂಟೆಗಳ ಕಾಲ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯಬೇಕಾದರೆ ವೈದ್ಯರಿಗೆ ವಸತಿ ಸಮುಚ್ಛಯಗಳನ್ನು ನಿರ್ಮಿಸಲು ಸರ್ಕಾರಕ್ಕೆ ಅನುಮೋದನೆ ಸಲ್ಲಿಸಬೇಕು. ಖಾಲಿ ಹುದ್ದೆಗಳ ವೈದ್ಯರ ನೇಮಕಾತಿಗೆ ಜಿಲ್ಲಾಧಿಕಾರಿಗಳಿಗೆ ತಕ್ಷಣ ಬರೆದು ಹಳೆಯ ಕೋವಿಡ್ ಪರಿಕರಗಳನ್ನು ಸಂಪೂರ್ಣ ತೆಗೆದುಹಾಕಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರೇಣುಕಾ ಕೊರವನವರ ಅವರಿಗೆ ಸೂಚನೆ ನೀಡಿದರು. ಗದಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ರವಿ ಪುರುಷೋತ್ತಮ, ಶಾಹುಬಾಹು ತೇಲಿ, ತಹಸೀಲ್ದಾರ್ ಶ್ರೀಶೈಲ ತಳವಾರ, ಪುರಸಭೆ ಮುಖ್ಯಾಧಿಕಾರಿ ಅಮಿತ್ ತಾರದಾಳೆ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts