More

    ಸಂಪಾದಕೀಯ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

    ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ. ಕಾಲೇಜು ಕ್ಯಾಂಪಸ್​ನಲ್ಲಿ ಹಾಡಹಗಲೇ ನಡೆದ ಈ ಕಗ್ಗೊಲೆ ವಿರುದ್ಧ ಜನಸಾಮಾನ್ಯರು ಸ್ವಯಂಪ್ರೇರಿತವಾಗಿ ಪ್ರತಿಭಟನೆ ನಡೆಸಿದ್ದರೆ, ರಾಜ್ಯದ ಪ್ರಮುಖ ಪ್ರತಿಪಕ್ಷ ಬಿಜೆಪಿ ಕೂಡ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಕೆಲವು ಸಂಘಟನೆಗಳು ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದವು. ಸಮಾಜದ ಹಲವು ರಂಗದ ಗಣ್ಯರು, ಮಠಾಧೀಶರು, ರಾಜಕಾರಣಿಗಳು ನೇಹಾ ಪಾಲಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಆದರೆ, ಈ ಇಡೀ ಪ್ರಕರಣ ಆತಂಕವನ್ನು ಸೃಷ್ಟಿಸಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತವಾಗಿದೆ. ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆಯಾದರೂ, ನೇಹಾ ತಂದೆ ಈ ದುಷ್ಕೃತ್ಯದಲ್ಲಿ ಹಲವರು ಶಾಮೀಲಾಗಿದ್ದು, ಆ ಮಾಹಿತಿಯನ್ನು ಪೊಲೀಸರಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಭುಗಿಲೆದ್ದ ಜನಾಕ್ರೋಶದಿಂದ ರಾಜ್ಯ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದೆ.

    ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಹಾಗೂ ವಿಶೇಷ ನ್ಯಾಯಾಲಯ ಸ್ಥಾಪಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಘೋಷಿಸಿದ್ದಾರೆ. ಮುಖ್ಯಮಂತ್ರಿಗಳ ಈ ನಡೆ ಸ್ವಾಗತಾರ್ಹ. ಸಿಐಡಿ ತಂಡ ಈಗಾಗಲೇ ತನಿಖೆಯನ್ನು ಆರಂಭಿಸಿದೆ. ಆದರೆ ಸಿಐಡಿ ಪೊಲೀಸರು ರಾಜ್ಯ ಸರ್ಕಾರದ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಾರೆ. ಈ ಪ್ರಕರಣದ ತನಿಖೆಯ ವಿಷಯದಲ್ಲಿ ಅಧಿಕಾರಸ್ಥ ರಾಜಕಾರಣಿಗಳು ಪೊಲೀಸರ ಮೇಲೆ ಪ್ರಭಾವ ಬೀರುವ ದುಸ್ಸಾಹಸಕ್ಕೆ ಕೈಹಾಕಬಾರದು. ಪೊಲೀಸರು ಕೂಡ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣಾತಿಕಠಿಣ ಶಿಕ್ಷೆ ಆಗುವಂತೆ ಎಚ್ಚರ ವಹಿಸಬೇಕು. ತಪ್ಪಿತಸ್ಥರಿಗೆ ಆಗುವ ಶಿಕ್ಷೆ ಮೂಲಕವೇ ದುಷ್ಟಶಕ್ತಿಗಳಿಗೆ ಸಂದೇಶ ರವಾನೆಯಾಗಬೇಕು. ಈ ವಿಚಾರದಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದು. ಒತ್ತಡಗಳಿಗೆ ಬಗ್ಗದೆ, ಪ್ರಭಾವಕ್ಕೆ ಜಗ್ಗದೆ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಿಕೊಂಡು ಹೋಗುವ, ತಪ್ಪಿತಸ್ಥರ ಹೆಡೆಮುರಿ ಕಟ್ಟುವ ಸವಾಲು ಈಗ ಸಿಐಡಿ ಮುಂದಿದೆ.

    ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಅದರಲ್ಲೂ ಕೊಲೆ ಮತ್ತು ಕೊಲೆಯತ್ನದ ಪ್ರಕರಣಗಳು ಹೆಚ್ಚುತ್ತಿರುವುದು ಖಂಡಿತವಾಗಿಯೂ ಸಮಾಜದ ಸ್ವಾಸ್ಥ್ಯಕ್ಕೆ ಮಾರಕ. ಕಾನೂನಿನ ಭಯವಿಲ್ಲದೆ ದುರುಳರು ಇಂಥ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ ಎಂಬುದು ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಬೇಕು. ಅದರಲ್ಲೂ, ವಿದ್ಯಾರ್ಥಿನಿ ನೇಹಾ ಹಿರೇಮಠ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಕಾಲೇಜಿನ ಕ್ಯಾಂಪಸ್​ನಲ್ಲಿ ಹಾಡುಹಗಲಲ್ಲೇ ಕೊಲೆ ನಡೆದಿರುವುದು ಪಾಲಕ ಹಾಗೂ ವಿದ್ಯಾರ್ಥಿ ವರ್ಗಕ್ಕೆ ಅರಗಿಸಿಕೊಳ್ಳಲಾಗದ ಸಂಗತಿಯಾಗಿ ಪರಿಣಮಿಸಿದೆ. ಚುನಾವಣೆ ಸಮಯವಾಗಿರುವುದರಿಂದ ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಆದರೆ, ಹೆಣ್ಣುಮಕ್ಕಳ ಸುರಕ್ಷೆಯ ವಿಷಯ ಗಂಭೀರವಾದದ್ದು ಮತ್ತು ಆದ್ಯತೆಯಲ್ಲಿ ಪರಿಗಣಿಸಬೇಕಾದದ್ದು. ಭವಿಷ್ಯದಲ್ಲಿ ಇಂಥ ಕರಾಳ ಕೃತ್ಯಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವ ಜತೆಗೆ ಹತ್ಯೆ ಪ್ರಕರಣಗಳ ತನಿಖೆ ದಿಕ್ಕು ತಪ್ಪದೆ ರ್ತಾಕ ಅಂತ್ಯ ಕಾಣಬೇಕು.

    ಬಿಜೆಪಿಯ ಉಚ್ಚಾಟನೆಗೆ ಹೆದರುವುದಿಲ್ಲ, ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ: ಈಶ್ವರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts