More

    ಸೌಲಭ್ಯಗಳು ಕಾರ್ಮಿಕರಿಗೆ ಸಮರ್ಪಕವಾಗಿ ತಲುಪಲಿ

    ಶಿವಮೊಗ್ಗ: ಅಸಂಘಟಿತ ಕಾರ್ಮಿಕರ ಪರವಾಗಿ ಕೆಲಸ ಮಾಡುವ ಸಂಘಟನೆಗಳ ಉದ್ದೇಶ ಈಡೇರಬೇಕೆಂದರೆ ಸರ್ಕಾರದ ಸೌಲಭ್ಯಗಳನ್ನು ಕಾರ್ಮಿಕರಿಗೆ ಸಮರ್ಪಕವಾಗಿ ತಲುಪಿಸಬೇಕು. ಇಂದು ಬಹಳಷ್ಟು ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿಯೇ ಇರುವುದಿಲ್ಲ ಎಂದು ಕಾರ್ಮಿಕ ಇಲಾಖೆ ಮಂಗಳೂರು ವಿಭಾಗದ ಸಹಾಯಕ ಆಯುಕ್ತ ಶಿವಕುಮಾರ್ ಹೇಳಿದರು.

    ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರ ರಾಜ್ಯಮಟ್ಟದ ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿ, ಅಸಂಘಟಿತರ ಪರವಾಗಿ ಸ್ಥಾಪಿತವಾದ ಸಂಘಟನೆಗಳು ತಮ್ಮ ಮೂಲ ಉದ್ದೇಶಗಳನ್ನು ಮರೆಯಬಾರದು ಎಂದು ತಿಳಿಸಿದರು.
    ಅಸಂಘಟಿತ ಕಾರ್ಮಿಕರು ಮತ್ತು ವಿವಿಧ ಕಾರ್ಮಿಕರ ಹೆಸರಿನಲ್ಲಿ ನೂರಾರು ಸಂಘಗಳು ಆರಂಭವಾಗುತ್ತವೆ. ಆದರೆ ಕೆಲವು ಸಂಘಟನೆಗಳು ಕ್ರಮೇಣ ಮೂಲ ಉದ್ದೇಶವನ್ನೇ ಮರೆತುಬಿಡುತ್ತವೆ. ಸ್ವಾರ್ಥ ಸಾಧನೆಗೆ ಮುಂದಾಗುತ್ತವೆ. ಇದರಿಂದ ಕಾರ್ಮಿಕರ ಸಮಸ್ಯೆಗಳ ಪರಿಹಾರ ಸಾಧ್ಯವಿಲ್ಲ ಎಂದರು.
    ಅಸಂಘಟಿತ ಕಾರ್ಮಿಕರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತವೆ. ಆದರೆ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಲು ಅರ್ಹರು ವಿಫಲವಾಗುತ್ತಿದ್ದಾರೆ. ಕೆಲವೊಮ್ಮೆ ಅನರ್ಹರು ಅದನ್ನು ಬಳಕೆ ಮಾಡಿಕೊಳ್ಳುವ ಅಪಾಯವೂ ಇದೆ. ಹೀಗಾಗಿ ಕಾರ್ಮಿಕ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
    ಪತ್ರಿಕಾ ವಿತರಕರಿಗೂ ಪ್ರತ್ಯೇಕ ವರ್ಗ ಮಾಡಿ ಎರಡು ಲಕ್ಷ ರೂ. ಜೀವವಿಮೆ ಘೋಷಣೆ ಮಾಡಲಾಗಿದೆ. ಗಿಗ್ ಕಾರ್ಮಿಕರಿಗೆ ಸ್ವಿಗ್ಗಿ, ಜೊಮ್ಯಾಟೊ, ಅಮೆಜಾನ್ ಮುಂತಾದ ಕಂಪನಿಗಳ ವಿತರಕರಿಗೂ ಪ್ರತ್ಯೇಕ ಪೋರ್ಟಲ್ ತೆರೆಯಲಾಗಿದೆ. ಅಪಘಾತ ಇಲ್ಲವೇ ಸಾವು ಸಂಭವಿಸಿದ 15 ದಿನದೊಳಗೆ 50 ಸಾವಿರ ರೂ. ಪರಿಹಾರ ದೊರೆಯಲಿದೆ ಎಂದರು.
    ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಕುಪೇಂದ್ರ ಮಾತನಾಡಿ, ಅಸಂಘಟಿತ ಕಾರ್ಮಿಕರು ಈ ದೇಶದ ಆಸ್ತಿ. ಅವರ ಸೇವೆ ಅತ್ಯಗತ್ಯ. ಅವರನ್ನು ಹೊರತಾದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಅಗತ್ಯ ಮೂಲ ಸೌಕರ್ಯಗಳು ದೊರೆಯುತ್ತಿಲ್ಲ. ಹೀಗಾಗಿ ನಮ್ಮ ಸಂಘಟನೆಯಿಂದ ಸಮಾವೇಶ ಏರ್ಪಡಿಸಿ ಅವರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
    ಮಕ್ಕಳ ತಜ್ಞ ವೈದ್ಯ ಡಾ. ಧನಂಜಯ ಸರ್ಜಿ, ಉದ್ಯಮಿ ಹರ್ಷ ಕಾಮತ್, ಸಂಘಟನೆಯ ಪ್ರಮುಖರಾದ ಸುಮಾ ದೇವರಾಜ್, ರತ್ನಮಾಲಾ, ಮೇಘಾ ಮೋಹನ್ ಜೆಟ್ಟಿ, ಸುರೇಖಾ ಪಾಲಾಕ್ಷಪ್ಪ, ಪರಮೇಶ್ವರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts