More

    ಸಂಪಾದಕೀಯ: ಜಲಪ್ರಜ್ಞೆ ಜಾಗೃತಗೊಳ್ಳಲಿ

    ಸುಮಾರು ಒಂದೂವರೆ ಕೋಟಿ ಜನಸಂಖ್ಯೆ ಹೊಂದಿರುವ, ಮಾಹಿತಿ-ತಂತ್ರಜ್ಞಾನ, ಜೈವಿಕ-ತಂತ್ರಜ್ಞಾನದ ಸಾವಿರಾರು ಕಂಪನಿಗಳಿಗೆ ಆಶ್ರಯವಾಗಿರುವ ರಾಜಧಾನಿ ಬೆಂಗಳೂರು ಹಿಂದೆಂದೂ ಕಂಡರಿಯದಂಥ ಜಲಕ್ಷಾಮ ಎದುರಿಸುತ್ತಿದೆ. ದುರ್ಬಲ ಮುಂಗಾರು/ಹಿಂಗಾರಿನ ಪರಿಣಾಮ ಜಲಸಂಕಷ್ಟ ಎದುರಾಗಬಹುದು ಎಂಬ ಅಂದಾಜಿತ್ತಾದರೂ, ಪರಿಸ್ಥಿತಿ ಇಷ್ಟೊಂದು ಗಂಭೀರವಾಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಬೇಸಿಗೆಯ ಆರಂಭದ ದಿನಗಳಲ್ಲೇ ಪ್ರತಿನಿತ್ಯ 20 ಕೋಟಿ ಲೀಟರ್ ನೀರಿನ ಕೊರತೆ ಎದುರಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಿಗೆ ಮಳೆ ಸುರಿಯದಿದ್ದರೆ ಪರಿಸ್ಥಿತಿ ಮತ್ತಷ್ಟು ಭಯಾನಕವಾಗಲಿದೆ. ಹಾಗಾಗಿ, ಇರುವ ಅಲ್ಪಸ್ವಲ್ಪ ನೀರನ್ನು ಪೋಲು ಮಾಡದೆ ಕಾಳಜಿಯಿಂದ ಬಳಸಬೇಕಿದೆ.

    ಬೆಂಗಳೂರಿನ ಜಲಮಂಡಳಿ ಕೊಳೆಗೇರಿ ಹಾಗೂ ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಿದ್ದು, ಈ ಪ್ರದೇಶಗಳಲ್ಲಿ ಪ್ರತಿ ನಿತ್ಯ 1 ಲಕ್ಷ ಲೀಟರ್ ನೀರನ್ನು ಉಚಿತವಾಗಿ ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿದೆ. ಅಲ್ಲದೆ, ಕುಡಿಯುವ ನೀರನ್ನು ಮತ್ತು ಕಾವೇರಿಯಿಂದ ಪೂರೈಕೆಯಾಗುವ ನೀರನ್ನು ವಾಹನಗಳನ್ನು ತೊಳೆಯಲು, ಉದ್ಯಾನಗಳಿಗೆ ನೀರುಣಿಸಲು ಬಳಸದಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ. ಆದರೂ, ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳುವಲ್ಲಿ ಜನಸಾಮಾನ್ಯರು ವಿಫಲರಾಗಿರುವುದು ವಿಪರ್ಯಾಸ. ಇಂಥ ಸಂಕಷ್ಟದ ಸಂದರ್ಭದಲ್ಲಿ ನಾಗರಿಕ ಪ್ರಜ್ಞೆ ಮೆರೆಯುವುದು ಅವಶ್ಯ.

    ನೀರನ್ನು ಇತರ ಉದ್ದೇಶಗಳಿಗಾಗಿ ಪೋಲು ಮಾಡುತ್ತಿದ್ದ ಬೆಂಗಳೂರಿನ 22 ಕುಟುಂಬಗಳಿಗೆ ಜಲಮಂಡಳಿ ತಲಾ 5 ಸಾವಿರ ರೂಪಾಯಿ ದಂಡ ವಿಧಿಸುವ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಜಲಮೌಲ್ಯ ತಿಳಿಸಿಕೊಡಲು ಇಂಥ ಕಠೋರ ಕ್ರಮ ಈಗಿನ ಸಂದರ್ಭದಲ್ಲಿ ಅನಿವಾರ್ಯವೂ ಹೌದು. ಜನರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದರೆ ಪೈಪ್ ಮೂಲಕ ಕಾರು, ಇತರ ವಾಹನಗಳನ್ನು ತೊಳೆಯುವ ಅವಿವೇಕತನಕ್ಕೆ ಏನೆನ್ನಬೇಕು? ಒಂದು ಹಸಿಬಟ್ಟೆ ಅಥವಾ ಅರ್ಧಲೀಟರ್ ನೀರಿನಲ್ಲಿ ಒಂದು ವಾಹನ ಸ್ವಚ್ಛಗೊಳಿಸಬಹುದು. ಅಲ್ಲದೆ, ವಾಹನಗಳ ಸ್ವಚ್ಛತೆಗೆ, ಉದ್ಯಾನಗಳಿಗೆ ಸಂಸ್ಕರಿಸಿದ ನೀರನ್ನೇ ಬಳಸಬೇಕು. ಈ ನಿಯಮವನ್ನೂ ಉಲ್ಲಂಘಿಸುತ್ತಿರುವುದು ಸರಿಯಲ್ಲ. ನಿರ್ಲಕ್ಷ್ಯ ಇದೇ ಮಾದರಿಯಲ್ಲಿ ಮುಂದುವರಿದರೆ ಮುಂದೆ ಕುಡಿಯುವ ನೀರಿಗೂ ಸಂಸ್ಕರಿತ ನೀರನ್ನು ಅವಲಂಬಿಸಬೇಕಾದ ದುಸ್ಥಿತಿ ಬಂದೊದಗಬಹುದು. ಅದಕ್ಕೂ ಮುನ್ನ ಎಚ್ಚೆತ್ತುಕೊಂಡು ಪ್ರಜ್ಞಾವಂತಿಕೆಯಿಂದ ವರ್ತಿಸಬೇಕಿದೆ. ಜಲಮರುಪೂರಣದ ಕ್ರಮಗಳು ಮನೆ-ಮನೆಯಿಂದ ಆರಂಭಗೊಳ್ಳಬೇಕಿದೆ.

    ಜಲಸಂಕಷ್ಟ ಬರೀ ಬೆಂಗಳೂರಿಗೆ ಸೀಮಿತವಲ್ಲ. ರಾಜ್ಯದ ಬಹುತೇಕ ಜಲಮೂಲಗಳು ಬತ್ತಿ ಹೋಗಿದ್ದು, ಅಂತರ್ಜಲದ ಪ್ರಮಾಣ ಗಣನೀಯವಾಗಿ ಕುಸಿದಿದೆ. ಹೀಗಾಗಿ, ಇತರ ಜಿಲ್ಲೆಗಳು ಕೂಡ ಬೆಂಗಳೂರಿಗೆ ಒದಗಿರುವ ಸ್ಥಿತಿಯಿಂದ ಪಾಠ ಕಲಿಯಬೇಕಿದೆ. ಜಲಮೂಲಗಳ ಸಂರಕ್ಷಣೆ, ನೀರಿನ ಮಿತಬಳಕೆಯಂಥ ಕ್ರಮಗಳನ್ನು ಜೀವನಶೈಲಿಯ ಭಾಗವಾಗಿ ಅಳವಡಿಸಕೊಳ್ಳಬೇಕಿದೆ. ನೀರಿನ ಕೊರತೆಯ ಪರಿಣಾಮ ಬೆಂಗಳೂರಿನಿಂದ ವಲಸೆ ಪರ್ವ ಆರಂಭವಾಗಿದೆ. ಮುಂದಿನ ದಿನಗಳು ಹೇಗೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಾಗಿ, ಈ ಪರಿಸ್ಥಿತಿಯ ಕುರಿತು ಬರೀ ಸರ್ಕಾರವನ್ನು ದೂಷಿಸಿ ಪ್ರಯೋಜನವಿಲ್ಲ. ಜಲಪ್ರಜ್ಞೆಯನ್ನು ಜೀವನದ ಭಾಗವಾಗಿಸಿಕೊಳ್ಳುವ ಸಂಕಲ್ಪ ಜನಸಾಮಾನ್ಯರಿಂದಲೂ ಆಗಬೇಕಿದೆ. ನೀರಿನ ಮಹತ್ವವನ್ನು ಇನ್ನಾದರೂ ಅರಿತು, ವಿವೇಚನೆಯಿಂದ ಬಳಸಬೇಕಿದೆ.

    ಕರ್ನಾಟಕ: ಎಸ್ಎಸ್ಎಲ್​ಸಿ ಪರೀಕ್ಷೆ ಮೊದಲ ದಿನವೇ ಮೂವರು ವಿದ್ಯಾರ್ಥಿಗಳು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts