More

    ಪಾಕ್​ಪರ ಘೋಷಣೆಯನ್ನು ಸಿಎಂ, ಡಿಸಿಎಂ ಖಂಡಿಸಲಿ

    ಹುಬ್ಬಳ್ಳಿ : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವವರನ್ನು ಸರ್ಕಾರ ತಕ್ಷಣ ಬಂಧಿಸಬೇಕು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್​ನ ಮುಖಂಡರು ಈ ಘಟನೆಯನ್ನು ಖಂಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಒತ್ತಾಯಿಸಿದ್ದಾರೆ.

    ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶೆಟ್ಟರ್, ವಿಧಾನಸೌಧದಲ್ಲಿ ಪಾಕ್​ಪರ ಘೋಷಣೆ ಕೂಗಿದ್ದು ದೇಶದ್ರೋಹ. ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಅಲ್ಪಸಂಖ್ಯಾತರ ತುಷ್ಠೀಕರಣ, ಮತಬ್ಯಾಂಕ್ ರಾಜಕಾರಣಕ್ಕಾಗಿ ಸರ್ಕಾರ ಈ ಘಟನೆಯನ್ನು ಮರೆಮಾಚುವ ಯತ್ನ ಮಾಡಬಾರದು. ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲು ಸರ್ಕಾರದ ಧೋರಣೆಗಳೂ ಕಾರಣ ಎಂದು ಟೀಕಿಸಿದರು.

    ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ತಮ್ಮ ದೇಶಕ್ಕೂ ನರೇಂದ್ರ ಮೋದಿ ಅವರಂತಹ ಪ್ರಧಾನಿ ಬೇಕೆಂದು ಪಾಕಿಸ್ತಾನಿಗಳು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಅಂತಹದರಲ್ಲಿ ಭಾರತದ ಅನ್ನ ತಿಂದ ಕೆಲವರು, ಇಲ್ಲಿನ ನೆಲದಲ್ಲಿ ನಿಂತು ಪಾಕ್​ಪರ ಘೋಷಣೆ ಕೂಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಶಾಸಕರಾದ ಎಸ್.ಟಿ. ಸೋಮಶೇಖರ ಹಾಗೂ ಶಿವರಾಮ ಹೆಬ್ಬಾರ ಅವರಿಗೆ ಬಿಜೆಪಿಯಲ್ಲಿ ಉಳಿಯಲು ಮನಸ್ಸು ಇರದಿದ್ದರೆ ರಾಜ್ಯಸಭೆ ಚುನಾವಣೆ ಮತದಾನಕ್ಕೆ ಮುಂಚೆಯೇ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಬೇಕಿತ್ತು ಎಂದರು.

    ಇಬ್ಬರೂ ಶಾಸಕರ ವಿರುದ್ಧ ಬಿಜೆಪಿ ಹೈಕಮಾಂಡ್ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts