More

    ನಿಗದಿತ ಸಮಯಕ್ಕೆ ಜನರ ಅರ್ಜಿ ವಿಲೇವಾರಿಯಾಗಲಿ

    ಮಳವಳ್ಳಿ: ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದೆ ನಿಗದಿತ ಸಮಯದಲ್ಲಿ ಪಾರದರ್ಶಕವಾಗಿ ಅರ್ಜಿಗಳನ್ನು ವಿಲೇವಾರಿ ಮಾಡಿ ಎಂದು ತಾಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಖಡಕ್ ಸೂಚನೆ ನೀಡಿದರು.

    ಪಟ್ಟಣದ ತಾಲೂಕು ಕಚೇರಿಗೆ ಬುಧವಾರ ಭೇಟಿ ನೀಡಿದಾಗ ಕಚೇರಿ ಆವರಣದಲ್ಲಿ ದಾಖಲೆಗಳನ್ನು ಹಿಡಿದು ಕುಳಿತಿದ್ದ ಸಾರ್ವಜನಿಕರ ಸಮಸ್ಯೆ ಆಲಿಸಿ ಕುಂದುಕೊರತೆ ಅರ್ಜಿ ಸ್ವೀಕರಿಸಿದರು. ನಂತರ ಕಂದಾಯ ಇಲಾಖೆಯ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಜನ ಸಾಮಾನ್ಯರು ತಮ್ಮ ಆಸ್ತಿ ಸೇರಿದಂತೆ ಸರ್ಕಾರದ ವಿವಿಧ ಮಾಸಾಶನ ಹಾಗೂ ಇತರ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಬರುತ್ತಾರೆ. ಅಂತಹವರಿಗೆ ಸಬೂಬು ಹೇಳಿ ಅಲೆಸುವುದನ್ನು ಬಿಟ್ಟು ಸ್ಥಳದಲ್ಲೇ ಸಮಸ್ಯೆ ಬಗೆಹರಿಸುವ ಮೂಲಕ ಮಾನವೀಯತೆ ತೋರಿಸಿ ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

    ದಾಖಲೆಗಳ ವ್ಯತ್ಯಾಸ ಅಥವಾ ಕಾನೂನು ತೊಡಕಿರುವ ಕಡತಗಳನ್ನು ನಿಯಮಾನುಸಾರ ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ತಾಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲಿರುವ ಕಳಂಕ ದೂರವಾಗಬೇಕಾದರೆ ಪಾರದರ್ಶಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಪದೇ-ಪದೆ ದೂರುಗಳು ಕೇಳಿಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಪಟ್ಟಣದ ತಾಪಂ ಕಚೇರಿ, ಅನಿತಾ ಕಾನ್ವೆಂಟ್, ಸರ್ಕಾರಿ ಪದವಿ ಕಾಲೇಜು ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಸೌಕರ್ಯ ಹಾಗೂ ಸಿದ್ಧತೆಗಳನ್ನು ಪರಿಶೀಲಿಸಿದರು. ತಹಸೀಲ್ದಾರ್ ಲೋಕೇಶ್, ರಾಜಸ್ವ ನಿರೀಕ್ಷ ಚೇತನ್ ಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts