More

    ಗಣಿತ ಅಭ್ಯಾಸ ಮಕ್ಕಳಿಗೆ ಸಂತಸದ ಕಲಿಕೆಯಾಗಲಿ

    ಕುಶಾಲನಗರ: ಗಣಿತ ಕಬ್ಬಿಣದ ಕಡಲೆ ಎಂಬ ಮನೋಭಾವನೆಯನ್ನು ವಿದ್ಯಾರ್ಥಿಗಳಿಂದ ದೂರ ಮಾಡುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ ಅಭಿಪ್ರಾಯಪಟ್ಟರು.

    ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು ಸೋಮವಾರಪೇಟೆ ತಾಲೂಕು ಪ್ರೌಢಶಾಲಾ ಗಣಿತ ಶಿಕ್ಷಕರಿಗೆ ಜಿಲ್ಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ರಾಮನುಜನ್ ಗಣಿತ ಕ್ಲಬ್ ಸಹಯೋಗದಲ್ಲಿ ಮಂಗಳವಾರ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ಒಂದು ದಿನದ ಗಣಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಗಣಿತ ಅಭ್ಯಾಸವು ಮಕ್ಕಳಿಗೆ ಸಂತಸದ ಕಲಿಕೆಯಾಗಬೇಕು ಎಂದರು.

    ಗಣಿತ ಕ್ಲಿಷ್ಟಕರ ವಿಷಯವಲ್ಲ ಎಂಬುದನ್ನು ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುತ್ತದೆ. ವಿದ್ಯಾರ್ಥಿಗಳು ಸುಲಭ ವಿಧಾನಗಳ ಮೂಲಕ ಗಣಿತ ಕಲಿತರೆ ಇನ್ನಷ್ಟು ಸರಳವಾಗುತ್ತದೆ. ಶಿಕ್ಷಕರೂ ಸುಲಭ ವಿಧಾನಗಳ ಮೂಲಕ ಗಣಿತ ಬೋಧಿಸಬೇಕು ಎಂದು ಸಲಹೆ ನೀಡಿದರು.

    ಒಟ್ಟಾರೆ ಫಲಿತಾಂಶ ಗಣಿತ ವಿಷಯದ ಫಲಿತಾಂಶವನ್ನು ಅವಲಂಬಿಸಿರುವುದರಿಂದ ಚಟುವಟಿಕೆಯಾಧಾರಿತ ಕಲಿಕೆಯತ್ತ ಶಿಕ್ಷಕರು ಹೆಚ್ಚಿನ ಗಮನಹರಿಸಬೇಕು. ಅಲ್ಲದೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಬೇಕಾದರೆ ಪಾಲಕರು ಹಾಗೂ ಸಮುದಾಯದ ಸಹಭಾಗಿತ್ವ ಹೊಂದಬೇಕು ಎಂದು ಅಭಿಪ್ರಾಯಪಟ್ಟರು.

    ಗಣಿತ ಕಲಿಕೆ ತರಬೇತಿ ಮಹತ್ವ ಕುರಿತು ಮಾತನಾಡಿದ ಕೂಡ್ಲುರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಗಣಿತ ಕಲಿಕೆ ಸುಲಭ ಎಂಬ ಪರಿಕಲ್ಪನೆಯೊಂದಿಗೆ ಮಕ್ಕಳು ಆತ್ಮವಿಶ್ವಾಸ ಬೆಳೆಸಿಕೊಂಡು ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

    ಗಣಿತ ಕ್ಲಬ್ ಮೂಲಕ ಶಿಕ್ಷಕರು ಮಕ್ಕಳಿಗೆ ಕ್ಲಿಷ್ಟ ಸಮಸ್ಯೆಗಳನ್ನು ಪರಿಹರಿಸಿದಾಗ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದರು.

    ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತನಾಡಿ, ಶಿಕ್ಷಕರು ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋಧಿಸಿದಾಗ ಮಕ್ಕಳಿಂದ ನಿರೀಕ್ಷಿತ ಫಲಿತಾಂಶ ಗಳಿಸಲು ಸಾಧ್ಯ. ಈ ದಿಸೆಯಲ್ಲಿ ಇಂತಹ ತರಬೇತಿಗಳು ಸಹಕಾರಿ. ಅಲ್ಲದೆ ಜಿಲ್ಲೆಯಲ್ಲಿ ಪ್ರೌಢಶಾಲಾ ಶಿಕ್ಷಕರು ಹೆಚ್ಚಿನ ಶ್ರಮ ವಹಿಸುತ್ತಿರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ಲಭಿಸುತ್ತಿದೆ ಎಂದರು.

    ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಕರು ಮಕ್ಕಳಲ್ಲಿ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಸಂಪನ್ಮೂಲ ವ್ಯಕ್ತಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಳವಾಡಿ ಸರ್ಕಾರಿ ಪ್ರೌಢಶಾಲೆ ಗಣಿತ ಶಿಕ್ಷಕ ಎಂ.ಮೋಹನ್, ದೃಶ್ಯ ಶ್ರಾವ್ಯದ ವಿಡಿಯೋ ಹಾಗೂ ಪಿಪಿಟಿ ಮೂಲಕ ಮಾಹಿತಿ ನೀಡಿದರು.

    ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಜಿ.ಎಂ.ಹೇಮಂತ್, ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎ.ಎಂ.ಜವರಯ್ಯ, ಅಂಜೆಲಾ ವಿದ್ಯಾನಿಕೇತನ ಸಂಸ್ಥೆ ಮುಖ್ಯಸ್ಥೆ ವೀಣಾ ವಿಜಯ, ಎಸ್ಸೆಸ್ಸೆಲ್ಸಿ ಪರೀಕ್ಷಾ ತಾಲೂಕು ನೋಡಲ್ ಅಧಿಕಾರಿ ಕೆ.ಬಿ.ರಾಧಾಕೃಷ್ಣ, ಸಿಆರ್‌ಪಿ ಕೆ.ಶಾಂತಕುಮಾರ್, ಶಿಕ್ಷಣ ಸಂಯೋಜಕ ಎಚ್.ಆರ್.ಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts