More

    ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವ ಕೆಲಸವಾಗಲಿ

    ಚಿಕ್ಕಮಗಳೂರು: ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸುವ ವಚನಗಳನ್ನು ಮನೆಯಲ್ಲೇ ಮಕ್ಕಳಿಗೆ ಕಲಿಸುವ ಮೂಲಕ ಶಾಲಾ ಪಠ್ಯದಲ್ಲಿ ಈ ಅಂಶಗಳು ಇಲ್ಲದಿರುವ ಕೊರತೆ ನೀಗಿಸಬೇಕು ಎಂದು ಶಿಕ್ಷಕಿ ಜ್ಯೋತಿ ಯೋಗೀಶ್ ತಿಳಿಸಿದರು.

    ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಬುಧವಾರ ಅಕ್ಕಮಹಾದೇವಿ ಮಹಿಳಾ ಸಂಘ ಹಾಗೂ ಶರಣೆ ಮಾದಲಾಂಬಿಕೆ ತಂಡದಿಂದ ಆಯೋಜಿಸಿದ್ದ ಹೊಸ್ತಿಲ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೊದಲ ಮಹಿಳಾ ವಚನಗಾರ್ತಿ ಅಕ್ಕಮಹಾದೇವಿ ವೈರಾಗ್ಯದ ನಿಧಿ. ಮಹಿಳಾ ಸ್ವಾತಂತ್ರೃ, ಸಮಾನತೆ ಪ್ರತಿಪಾದಿಸಿ ದಕ್ಷಿಣ ಭಾರತದ ಸಂಪ್ರದಾಯ, ಸಂಸ್ಕೃತಿ ಉಳಿವಿಗೆ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
    ಬಸವಣ್ಣನ ಭಕ್ತಿ, ಚನ್ನಬಸವಣ್ಣನ ಜ್ಞಾನ, ಮಡಿವಾಳಯ್ಯನ ನಿಷ್ಠೆ, ಪ್ರಭುದೇವನ ಜಂಗಮ ಸ್ಥಳ, ಅಜಗಣ್ಣನ ಐಕ್ಯಸ್ಥಳ, ನಿಜಗುಣನ ಆರೂಢ ಸ್ಥಳ, ಸಿದ್ದರಾಮನ ಸಮಾಧಿ ಸ್ಥಳವನ್ನು ಮೆಚ್ಚಿ ವಚನಗಳನ್ನು ರಚಿಸಿದ್ದ ಅಕ್ಕಮಹಾದೇವಿ ಸಮಾಜಕ್ಕೆ ಆದರ್ಶಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
    ಅಕ್ಕಮಹಾದೇವಿ ಮಹಿಳಾ ಸಂಘ 14 ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಹೆಣ್ಣುಮಕ್ಕಳನ್ನು ಒಗ್ಗೂಡಿಸಿ ಅವರಲ್ಲಿ ಧೈರ್ಯ, ಸ್ಥೈರ್ಯ, ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
    ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಯಮುನಾ ಸಿ. ಶೆಟ್ಟಿ ಮಾತನಾಡಿ, ಎಲ್ಲ ಸದಸ್ಯರೂ ಸಕ್ರಿಯವಾಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು. ಸಂಪ್ರದಾಯ, ಸಂಸ್ಕೃತಿ ಪಾಲನೆಯಲ್ಲಿ ಮಹಿಳೆಯರ ಪಾತ್ರ ಹಿರಿದು ಎಂದು ಹೇಳಿದರು.
    ಸಂಘದ ಪ್ರಮುಖರಾದ ಮಧುಮತಿ ಶಿವಕುಮಾರ್, ಸೌಮ್ಯಾ ನಾಗರಾಜ್, ಮಮತಾ, ಸುಧಾ ಚಂದ್ರಮೌಳಿ, ಹೇಮಲತಾ ರತ್ನಾಕರ್, ಶ್ರುತಿ, ಕವಿತಾ, ಲತಾ, ರೂಪಾ, ಗಾಯತ್ರಿ, ಸವಿತಾ, ರೇಖಾ ಉಮಾಶಂಕರ್, ಭಾರತಿ ಶಿವರುದ್ರಪ್ಪ, ನಾಗಮಣಿ ಕುಮಾರ್, ಹೇಮಾಲತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts