More

    ಜಾನಪದ ಸಾಹಿತ್ಯ ಉಳಿಸುವ ಕೆಲಸವಾಗಲಿ

    ಬೇಲೂರು: ಜೈನ, ಶರಣ, ದಾಸ, ನವೋದಯ ಸೇರಿದಂತೆ ಇತರ ಸಾಹಿತ್ಯಕ್ಕೆ ಜಾನಪದ ಸಾಹಿತ್ಯವೇ ತಾಯಿ ಬೇರಾಗಿದ್ದು, ಇಂತಹ ಜಾನಪದ ಸಾಹಿತ್ಯ ಅವನತಿಯತ್ತ ಸಾಗುತಿದೆ. ಅದನ್ನು ಉಳಿಸಿ ಬೆಳೆಸುವತ್ತ ಎಲ್ಲರೂ ಮುಂದಾಗಬೇಕಿದೆ ಎಂದು ಹಾಸನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಿವೃತ್ತ ಪ್ರಾಂಶುಪಾಲೆ ಪ್ರೊ.ಸುಲೋಚನಾ ಹೇಳಿದರು.

    ಕರ್ನಾಟಕ ಜಾನಪದ ಪರಿಷತ್ ಹಾಗೂ ವೈಡಿಡಿ ಸರ್ಕಾರಿ ಪ್ರಥಮ ಕಾಲೇಜಿನ ಐ ಕ್ಯೂಎಸಿ ಮತ್ತು ಸಮಾಜಶಾಸ್ತ್ರ ವಿಭಾಗದ ಸಹಯೋಗದಲ್ಲಿ ಮಂಗಳವಾರ ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನಪದ ಸಾಹಿತ್ಯ ಮತ್ತು ಸಮಾಜದಲ್ಲಿ ಮಹಿಳೆ ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾನಪದ ಜನರ ಬಾಯಿಂದ ಬಾಯಿಗೆ ಬರುವಂತದ್ದು. ಅದರ ನಾಶ ಅಷ್ಟೊಂದು ಸುಲಭವಲ್ಲ. ಎಲ್ಲರೂ ಜವಾಬ್ದಾರಿಯಿಂದ ಜಾನಪದದ ಉಳಿವಿಗೆ ಶ್ರಮಿಸಬೇಕಿದೆ ಎಂದರು.

    ಆಧುನಿಕ ಕಾಲಘಟ್ಟದಲ್ಲಿ ಬದಲಾಗುತ್ತಿರುವ ಸಾಹಿತ್ಯ ಮತ್ತು ಸಂಸ್ಕೃತಿಯ ಎಲ್ಲ ನೆಲೆಗಳಲ್ಲೂ ಜಾನಪದ ವ್ಯಾಪಿಸಬೇಕಿದೆ. ಜಾನಪದ ಕಲೆಯು ಜನರ ನಂಬಿಕೆ, ಪದ್ಧತಿ ಮತ್ತು ಜೀವನದ ದೈನಂದಿನ ಪ್ರತಿಬಿಂಬ. ಜಾನಪದ ಕಲೆ ನಿರ್ದಿಷ್ಟ ಸಂಸ್ಕೃತಿ ಅಥವಾ ಸಮುದಾಯಕ್ಕೆ ಸಂಪರ್ಕದಾಯಕವಾಗಿದ್ದು, ಇದರ ಉಳಿವಿಗೆ ಎಲ್ಲರೂ ಕೈಜೋಡಿಬೇಕಿದೆ ಎಂದರು.

    ಜಾನಪದ ಪರಿಷತ್‌ನ ತಾಲೂಕು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಮಾತನಾಡಿ, ಅಧುನಿಕ ಸಮಾಜದಲ್ಲಿ ಮಹಿಳೆಯರು ಬಹುತೇಕ ಎಲ್ಲ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಆದರೂ ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಪ್ರಕರಣ ನಡೆಯುತ್ತಿರುವುದು ಶೋಚನೀಯ ಸಂಗತಿ. ಸಂವಿಧಾನದ ಆಶಯದಂತೆ ಮಹಿಳೆಯರ ಸಂರಕ್ಷಣೆಗಿರುವ ಕಾನೂನು ಯಥಾವತ್ತಾಗಿ ಜಾರಿಯಾದರೆ ಮಾತ್ರ ಇಂತಹ ಘಟನೆಗಳನ್ನು ತಡೆಗಟ್ಟಲು ಸಾಧ್ಯ ಎಂದರು.

    ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎಚ್.ಎಂ.ಮಹೇಶ್ ಮಾತನಾಡಿ, ಜಾನಪದ ಎಂಬುದು ಸಾಂಸ್ಕೃತಿ, ಸಾಮಾಜಿಕ ವ್ಯವಸ್ಥೆಯ ಮೂಲ. ಜಾನಪದದೊಂದಿಗೆ ಜನರು ಅವಿನಾಭಾವ ಸಂಬಂಧ ಹೊಂದಿದ್ದು, ಜನರ ಆಹಾರ, ವೇಷಭೂಷಣ, ಕೃಷಿ, ಕಲೆ ಭಾಗಗಳಾಗಿವೆ ಎಂದರು.

    ಕರ್ನಾಟಕ ಸ್ಪಂದನ ಸಿರಿ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಕಲಾವತಿ ಮಧುಸೂದನ್, ಹಾಸನ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಸಹ ಪ್ರಾಧ್ಯಾಪಕ ಡಾ.ಸುರೇಶ್, ನಿವೃತ್ತ ಪ್ರಾಂಶುಪಾಲ ಡಾ.ಡಿ.ಜಿ.ಕೃಷ್ಣೇಗೌಡ, ವೈಡಿಡಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹೆಬ್ಬಾಳು ಹಾಲಪ್ಪ, ಉಪನ್ಯಾಸಕರಾದ ವೀರಭದ್ರಪ್ಪ, ಧನಂಜಯ, ಪದ್ಮೇಗೌಡ, ಸಾಹಿತಿ ಇಂದಿರಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts