More

    ಧರ್ಮ ದರ್ಶನ: ಕರೊನಾ ದಿಗ್ಬಂಧನ ಕಲಿಸಿದ ಪಾಠಗಳು

    ಧರ್ಮ ದರ್ಶನ: ಕರೊನಾ ದಿಗ್ಬಂಧನ ಕಲಿಸಿದ ಪಾಠಗಳು

    ಹಣದಿಂದ ಎಲ್ಲವನ್ನೂ ಪಡೆಯಬಹುದು ಎಂಬ ಭ್ರಮೆಯನ್ನು ಕರೊನಾ ದೂರಮಾಡಿದೆ. ಆರೋಗ್ಯ, ಸ್ವಚ್ಛತೆ, ಹೊಂದಾಣಿಕೆ, ದೈವಭಕ್ತಿ ಮತ್ತು ಪ್ರಶಾಂತವಾದ ಮನಸ್ಸು ನೆಮ್ಮದಿಗೆ ಕಾರಣ ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ. ಆದ್ದರಿಂದ ಲಾಕ್​ಡೌನ್ ಸಮಯ ದೇವರು ಕೊಟ್ಟ ಒಂದು ವರವೆಂದು ತಿಳಿದುಕೊಂಡು ಸಮಾಧಾನ ಪಡಬೇಕು.

    ಹೆಚ್ಚಿನ ಜನರು ಎಷ್ಟು ಸಂತೋಷವಾಗಿದ್ದಾರೆ ಎಂದರೆ ಅವರೆಷ್ಟು ತಮ್ಮ ಮನಸ್ಸನ್ನು ಸಂತೊಷವಾಗಿಟ್ಟುಕೊಂಡಿದ್ದಾರೋ ಅಷ್ಟು.

    | ಅಬ್ರಹಾಂ ಲಿಂಕನ್

    ಕಳೆದ ಅನೇಕ ವರ್ಷಗಳಲ್ಲಿ ನಾನು ಯಾವತ್ತೂ ಸ್ವಾಮಿಯ ಸೇವಾರೂಪದ ಒಂದಲ್ಲ ಒಂದು ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಧರ್ಮಸ್ಥಳದ ಪರಂಪರೆಯನ್ನು ಮುನ್ನಡೆಸುತ್ತಿದ್ದೇನೆ. ಅನೇಕ ಬಾರಿ ನನ್ನ ಬಂಧುಗಳು, ಆತ್ಮೀಯರು ಮತ್ತು ವಿಶೇಷವಾಗಿ ನನ್ನ ವೈದ್ಯರಾದ ಭಾವ ಧಾರವಾಡದಲ್ಲಿರುವ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳೂ ಆಗಿರುವ ನಿರಂಜನ್ ಕುಮಾರ್ ಕೂಡ ‘ನೀವು ವಿಶ್ರಾಂತಿಯನ್ನು ಪಡೆಯಬೇಕು’ ಎಂದು ಹೇಳುತ್ತಿದ್ದರು. ನನಗಿದು ಹಾಸ್ಯಾಸ್ಪದವಾಗಿ ತೋರುತ್ತಿತ್ತು. ವಿಶ್ರಾಂತಿ ಎಂದರೆ ಏನು? ವಿಶ್ರಾಂತಿ ಯಾಕೆ ಬೇಕು? ಹೋಗಿ ಸುಮ್ಮನೆ ಒಂದು ಕಡೆ ಕುಳಿತುಕೊಳ್ಳುವುದೇ ವಿಶ್ರಾಂತಿಯೇ! ಅಥವಾ ಇವರು ಹೇಳುತ್ತಿರುವುದು ದೈಹಿಕ ವಿಶ್ರಾಂತಿಯೇ ಅಥವಾ ಮಾನಸಿಕ ವಿಶ್ರಾಂತಿಯೇ? ಅಥವಾ ವಿಶ್ರಾಂತಿಗೆ ಏನೇನು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಆಲೋಚಿಸುತ್ತಿದ್ದೆ. ನನಗೆ ಎಂದೂ ವಿಶ್ರಾಂತಿ ಬೇಕು ಎಂದೆನಿಸಿದ್ದು ಇಲ್ಲ. ಕೆಲವು ಬಾರಿ ಹಗಲು-ರಾತ್ರಿ ಶ್ರೀಕ್ಷೇತ್ರದಲ್ಲಿ ದೇವರ ಸೇವೆಗಳು ನಡೆಯುತ್ತವೆ. ಜಾತ್ರಾ ಸಂದರ್ಭದಲ್ಲಿ ಅಥವಾ ಕಾರ್ಯಕ್ರಮಗಳ ಒತ್ತಡದ ನಡುವೆ ಕೆಲವು ಬಾರಿ ದೇಹಾಲಸ್ಯ ಉಂಟಾದದ್ದು ಇದೆ. ಹತ್ತು-ಹದಿನೈದು ನಿಮಿಷ ವಿಶ್ರಾಂತಿ ಬೇಕು ಅನಿಸಿದ್ದೂ ಇದೆ. ಆದರೆ ಸಾಧ್ಯವಾಗುತ್ತಿರಲಿಲ್ಲ. ಕ್ಷೇತ್ರಕ್ಕೆ ಎಂದಿನಂತೆ ಭಕ್ತರು ಬಂದು, ಧರ್ಮಚಾವಡಿಯಲ್ಲಿ ಅವರೊಂದಿಗೆ ಮಾತನಾಡಿದಾಗ ಆಯಾಸವೆಲ್ಲ ದೂರವಾಗಿಬಿಡುತ್ತಿತ್ತು. ಮತ್ತೆ ಉತ್ಸಾಹ ಬರುತ್ತಿತ್ತು.

    ಈಗಿನ ಕರೊನಾ ದಿಗ್ಬಂಧನ ಸಂದರ್ಭವು ವಿಶ್ರಾಂತಿ ಅಂದರೆ ಏನು ಎಂಬುದನ್ನು ಅರ್ಥ ಮಾಡಿಸಿಕೊಟ್ಟಿದೆ. ಏಕೆಂದರೆ ಮೊದಲು ರಾತ್ರಿ ವಿಳಂಬವಾಗಿ ಮಲಗಿದರೂ ಬೆಳಗ್ಗೆ ಎಂದಿನಂತೆ ಎದ್ದಾಗ ‘ಇಂದು ಮಧ್ಯಾಹ್ನದ ವಿಶ್ರಾಂತಿಯ ಸಂದರ್ಭದಲ್ಲಿ ಕಳೆದ ರಾತ್ರಿಯ ವಿಶ್ರಾಂತಿಯ ಕೊರತೆಯನ್ನು ಸರಿದೂಗಿಸಿಕೊಳ್ಳಬೇಕು’ ಎಂದು ಆಲೋಚಿಸುತ್ತಿದ್ದೆ. ಆ ಮಧ್ಯಾಹ್ನ ಮಲಗುವಾಗ ಇಂದು ಮೂರು ಗಂಟೆಗೆ ಎದ್ದು ಯಾವುದೋ ಕಾರ್ಯಕ್ರಮಕ್ಕೆ ಹೋಗಬೇಕು ಎಂದಿದ್ದರೆ ಕೇವಲ ಅರ್ಧ ಗಂಟೆ ಒಳಗಡೆ ಮಧ್ಯಾಹ್ನದ ವಿಶ್ರಾಂತಿಯನ್ನು ಮುಗಿಸುತ್ತಿದ್ದೆ. ಇಂತಹ ಸ್ಥಿತಿಗೆ ಹೆಚ್ಚಿನ ಸಿದ್ಧತೆಯೇನೂ ಬೇಕಾಗಿರಲಿಲ್ಲ. ಮನಸ್ಸಿನಲ್ಲಿ ದೃಢವಾಗಿ ಸಂಕಲ್ಪ ಮಾಡಿ ಕೇವಲ 20 ನಿಮಿಷ ನಿದ್ದೆ ಮಾಡುವುದು ಮತ್ತೆ ಉಳಿದ ಹತ್ತು ನಿಮಿಷ ಚಹಾ ಪಾನೀಯ, ವಸ್ತ್ರವನ್ನು ಧರಿಸಿಕೊಳ್ಳುವುದು ಮತ್ತು ಕಾರಿನವರೆಗೆ ಹೋಗುವುದಕ್ಕೆ ಸಾಕಾಗುತ್ತಿತ್ತು. ಇಷ್ಟೇ ವಿಶ್ರಾಂತಿಯಲ್ಲಿ ಮನಸ್ಸು ಮತ್ತೆ ಕ್ರಿಯಾಶೀಲವಾಗುತ್ತಿತ್ತು.

    ಇದು ಒಂದು ರೀತಿಯಲ್ಲಿ ನಮ್ಮ ದೇಹವು ಹೇಗೆ ನಮ್ಮ ಕಾರ್ಯಕ್ರಮಗಳಿಗೆ ಒಗ್ಗಿಕೊಳ್ಳುತ್ತದೆ ಎನ್ನುವುದಕ್ಕೆ ಒಳ್ಳೆಯ ಉದಾಹರಣೆ. ಪಾತ್ರೆಯ ಆಕಾರಕ್ಕೆ ಅನುಗುಣವಾಗಿ ನೀರು ಹೊಂದಿಕೊಳ್ಳುವಂತೆ ನಮ್ಮ ಕ್ರಿಯಾಶೀಲತೆಗೆ ಅನುಗುಣವಾಗಿ ದೇಹವು ಹೊಂದಿಕೊಳ್ಳುತ್ತದೆ. ದೇಹ ಮತ್ತು ಮನಸ್ಸಿಗೆ ಆಯಾಸವಾದಾಗ ಮಾಡುವ ಕಾರ್ಯದ ಉತ್ಸಾಹ ಕಡಿಮೆಯಾಗುತ್ತದೆ ಮತ್ತು ಕಾರ್ಯದ ಫಲಿತಾಂಶವೂ ಕಡಿಮೆಯಾಗುತ್ತದೆ. ಅಂದರೆ ವಿಶ್ರಾಂತಿ ಮಾಡಿದಷ್ಟು ಉತ್ಸಾಹ ಜಾಸ್ತಿ ಆಗಬಹುದು. ಆದರೆ, ಅತಿಯಾದ ವಿಶ್ರಾಂತಿ ಆಲಸ್ಯಕ್ಕೆ ಕಾರಣವಾಗುತ್ತದೆ. ಆಹಾರ ಇಲ್ಲದಿದ್ದರೆ ಶರೀರ ಸದೃಢವಾಗಿ ಇರಲಾರದು. ಹಾಗೆಂದು ಅವಶ್ಯಕತೆಗಿಂತ ಅತಿಯಾಗಿ ಆಹಾರಸೇವನೆಯೂ ಆಲಸ್ಯ, ರೋಗಕ್ಕೆ ಕಾರಣವಾಗುತ್ತದೆ.

    ಬಹುತೇಕರು ಸಾಮಾನ್ಯವಾಗಿ ರಜಾ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ನಾನು ಕೂಡ ವರ್ಷಕ್ಕೆ ಒಂದು ಬಾರಿ ಎಂಟು-ಹತ್ತು ದಿವಸ ದೈನಂದಿನ ವ್ಯವಹಾರಗಳಿಂದ ವಿಶ್ರಾಂತಿ ಪಡೆಯುವುದಕ್ಕಾಗಿ ಮನೆಯವರೊಂದಿಗೆ ಪ್ರವಾಸ ಮಾಡುವುದಿದೆ. ಆದರೆ ಅಲ್ಲಿ ಹೋದಾಗಲೂ ನಿಗದಿತವಾಗಿ ಇಷ್ಟು ಹೊತ್ತಿಗೆ ಇಂಥಲ್ಲಿ ಇರಬೇಕು, ಅಲ್ಲಿಂದ ಇಂತಹ ಹೋಟೆಲ್ ಅಥವಾ ಗೆಸ್ಟ್​ಹೌಸಿಗೆ ಹೋಗಬೇಕು, ಬೆಳಗ್ಗೆ ಎದ್ದು ಇಂಥಲ್ಲಿಗೆ ಹೋಗಬೇಕು… ಹೀಗೆಲ್ಲ ನಮ್ಮ ಟ್ರಾವೆಲ್ ಪ್ಲಾನ್ ಸಿದ್ಧವಾಗಿರುತ್ತದೆ. ಎಷ್ಟೋ ಬಾರಿ ನಮ್ಮ ತಿರುಗಾಟ ಎಷ್ಟು ಒತ್ತಡದಿಂದ ಇರುತ್ತಿತ್ತು ಎಂದರೆ ಗೈಡ್ ಬರುವ ಮೊದಲೇ ನಾವು ಹೊರಡಲನುವಾಗಿರುತ್ತಿದ್ದೆವು. ಕೆಲವೊಮ್ಮೆ ನಾಳೆ ನೋಡ ಬೇಕಾದಂಥ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಆಲೋಚಿಸುತ್ತ ರಾತ್ರಿ ನಿದ್ರೆ ಮಾಡದೆ ಇದ್ದದ್ದು ಇದೆ. ಪ್ರವಾಸದಲ್ಲಿ ಕೆಲವೊಮ್ಮೆ ಬಹಳ ದೀರ್ಘವಾಗಿ ನಡೆಯುವುದು ಇರುತ್ತಿತ್ತು. ಮೆಟ್ಟಿಲುಗಳನ್ನು ಹತ್ತುವುದು, ಇಳಿಯುವುದು ಹೀಗೆ ದೈಹಿಕವಾಗಿ ವ್ಯಾಯಾಮವನ್ನು ನೀಡುವಂಥ ಸ್ಥಳಗಳು ಇರುತ್ತಿದ್ದವು. ಹಾಗಾದರೆ ಪ್ರವಾಸ ಯಾಕೆ ಬೇಕು ಎಂಬುದೇ ಒಂದು ಸಂಶಯ! ವಿಶ್ರಾಂತಿಗೆಂದು ಪ್ರವಾಸಕ್ಕೆ ಹೋಗಿ ಅಲ್ಲಿಯೂ ವಿಶ್ರಾಂತಿ ಇಲ್ಲದೆ ಇದ್ದರೆ ಪ್ರವಾಸದ ಫಲವೇನು ಎಂದು ಎಷ್ಟೋ ಸಲ ಆಲೋಚನೆಯಾಗುತ್ತದೆ. ಆದರೆ ವಿಶ್ರಾಂತಿ ಎಂದರೆ ಹೀಗಲ್ಲ. ಬಹುಶಃ ಕೆಲವರು ತಿಳಿದುಕೊಳ್ಳುವ ಹಾಗೆ ಏನೂ ಮಾಡದೆ ಇರುವುದೇ ವಿಶ್ರಾಂತಿ. ಬೇರೆ ಬೇರೆ ಸ್ಥಳಗಳನ್ನು ವೀಕ್ಷಿಸುವುದು, ಬೇರೆಬೇರೆ ಕಾರ್ಯಕ್ಕಾಗಿ ತೆರಳುವುದು, ಅಂಗಡಿಗೆ ಹೋಗಿ ಶಾಪಿಂಗ್ ಮಾಡುವುದು, ಇಂಥ ಕೆಲ ಹವ್ಯಾಸಗಳು ಹಲವರಲ್ಲಿ ಇರುತ್ತವೆ. ನಮ್ಮ ಪ್ರವಾಸ ಹೇಗಿರುತ್ತಿತ್ತು ಎಂದರೆ ವಿಶ್ರಾಂತಿಗಿಂತ ಹೆಚ್ಚು ಶ್ರಮವೇ ಇರುತ್ತಿತ್ತು. ಹಾಗಾಗಿ ಕುಟುಂಬದವರೊಂದಿಗೆ ಹೋದರೂ ಅವರ ಜೊತೆಗೆ ಕಾಲಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಸಂಜೆ ಹೊತ್ತಲ್ಲಿ ಸ್ವಲ್ಪ ಮಾತನಾಡುವುದು, ಹಾಸ್ಯ ಮಾಡುವುದು ಇತ್ಯಾದಿಗಳು ಆಗುತ್ತಿತ್ತಷ್ಟೇ.

    ಪ್ರಸಕ್ತ ಕರೊನಾ ಲಾಕ್​ಡೌನ್​ನಿಂದ ಎಲ್ಲ ಚಟುವಟಿಕೆಗಳಿಗೂ ವಿಶ್ರಾಂತಿ. ಈ ಸಂದರ್ಭದಲ್ಲಿ ಪೂಜಾಮಂದಿರಗಳಿಗೂ ಭಕ್ತರಿಗೆ ಪ್ರವೇಶ ಇಲ್ಲದೆ ಇರುವುದರಿಂದ ಸಾಕಷ್ಟು ವಿಶ್ರಾಂತಿ ಮಾಡಿದ್ದೇವೆ. ಸಾಮಾನ್ಯವಾಗಿ ಎಲ್ಲರಿಗೂ ವಿಶ್ರಾಂತಿ ಎಂದರೆ ಏನು ಎಂಬುದು ಅರ್ಥವಾಗಿದೆ. ಕೆಲವರಿಗೆ ವಿಶ್ರಾಂತಿ ಎಂದರೆ ‘ಸಾಕಪ್ಪ ಸಾಕು’ ಎಂಬಷ್ಟು ಆಗಿದೆ. ಯಾಕೆಂದರೆ ಕೆಲಸ ಮಾಡುವಾಗ ವಿಶ್ರಾಂತಿ ಬೇಕು ಎಂದೆನಿಸುತ್ತದೆ. ಆದರೆ ವಿಶ್ರಾಂತಿ ಅಧಿಕವಾದಾಗ ‘ಇದು ಸಾಕು, ಕೆಲಸ ಮಾಡಬೇಕು’ ಎಂದೆನಿಸುತ್ತದೆ.

    ನಾನೊಮ್ಮೆ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಹೋಗಿದ್ದಾಗ ಅಲ್ಲಿರುವ ಪೊಲೀಸರೊಂದಿಗೆ ಮಾತನಾಡಿದೆ. ಅವರು, ‘ನಿನ್ನೆ ಮಂಗಳೂರಿನಲ್ಲಿ ಜೋರಾಗಿ ಮಳೆ ಸುರಿದಿದೆ. ಆದ್ದರಿಂದ ಇವತ್ತು ರಜೆ ನೀಡಿದ್ದಾರೆ. ಆದರೆ ರಜೆ ನೀಡಿದ ಇಂದು ಮಳೆ ಬರುವುದಿಲ್ಲ’ ಎಂದರು. ‘ಇಂದು ಮಳೆ ಬರುವುದಿಲ್ಲ ಎಂದು ಹೇಗೆ ಹೇಳುತ್ತೀರಿ’ ಎಂದು ಕೇಳಿದಾಗ ಅವರಲ್ಲೊಬ್ಬ-‘ನಿನ್ನೆ ಜೋರಾಗಿ ಮಳೆ ಬಂದಾಗ ಮಕ್ಕಳೆಲ್ಲರೂ ಹರಕೆ ಮಾಡಿಕೊಂಡಿದ್ದರು. ನಿನ್ನೆ ಜೋರಾಗಿ ಮಳೆ ಬಂದದ್ದರಿಂದ ಇಂದು ಶಾಲೆಗಳಿಗೆ ರಜೆ. ಇಂದು ಆಟವಾಡಲು ಅನುಕೂಲ ಆಗುವ ಹಾಗೆ ಮಳೆ ಬಾರದೇ ಇರಲಿ-’ ಅಂತ. ಅನೇಕ ಬಾರಿ ಇದು ಸತ್ಯವಾದದ್ದನ್ನು ಕಂಡಿದ್ದೇವೆ. ಎರಡು-ಮೂರು ದಿನ ವಿಪರೀತ ಮಳೆಯಾಗಿ ರಜೆ ಘೊಷಿಸಿದರೆ, ರಜೆ ಕೊಟ್ಟ ದಿನ ಮಳೆಯೇ ಬರುವುದಿಲ್ಲ. ಈ ಘಟನೆಗಳು ಇಂದಿನ ಪರಿಸ್ಥಿತಿಗೂ ಹೊಂದಾಣಿಕೆಯಾಗುತ್ತವೆ.

    ಹಾಗಾಗಿ ಈಗಿನ ಕರೊನಾ ಸಂದರ್ಭ ಬಹುತೇಕರಿಗೆ ವಿಶ್ರಾಂತಿಯನ್ನು ನೀಡಿದೆ. ಮತ್ತು ಕುಟುಂಬದವರೊಂದಿಗೆ ಮಾತನಾಡಿ ಅಭ್ಯಾಸವಾಗಿದೆ. ‘ಸಹ ನೌ ಭುನಕ್ತು’ ಎಂಬಂತೆ ಕುಟುಂಬದ ಎಲ್ಲ ಸದಸ್ಯರೂ ಒಟ್ಟಿಗೆ ಕುಳಿತು ಊಟ ಮಾಡಿದ್ದೇವೆ. ದೈನಂದಿನ ವ್ಯವಹಾರಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ದೇವರ ಧ್ಯಾನ, ಯೋಗ, ಪ್ರಾಣಾಯಾಮ ಮಾಡಲು ಸಮಯ ಸಿಕ್ಕಿದೆ. ಹೀಗೆ ಕೆಲವು ಧನಾತ್ಮಕವಾದ ಪರಿವರ್ತನೆಗಳು ನಮ್ಮಲ್ಲಿ ಆದದ್ದನ್ನು ಗುರುತಿಸಿಕೊಳ್ಳಬಹುದು. ಮನೆ ಮತ್ತು ಮನೆಯವರೊಂದಿಗೆ ಸಮಯವನ್ನು ಕಳೆದಾಗ ಎಂತಹ ಆನಂದವಿದೆ ಎಂಬುದನ್ನು ಅರ್ಥೈಸಿಕೊಂಡಿದ್ದೇವೆ. ಕೆಲಸದ ಒತ್ತಡವಿದ್ದಾಗ ಹೆಂಡತಿ, ಮಕ್ಕಳು ಹೇಳಿದ ಮಾತನ್ನು ವ್ಯವಧಾನದಿಂದ ಕೇಳಿಸಿಕೊಳ್ಳದೆ ಎಷ್ಟೋ ಸಲ ಪ್ರತಿಕ್ರಿಯಿಸಿರುತ್ತೇವೆ. ಆದರೆ ಈಗ ಎಲ್ಲವನ್ನೂ ಶಾಂತವಾಗಿ, ವಿವೇಕದಿಂದ ನೋಡುವ ಸ್ವಭಾವವನ್ನು ಬೆಳೆಸಿಕೊಂಡಿದ್ದೇವೆ. ನಾವು ಬಹಿಮುಖಿಗಳಾಗಿದ್ದಾಗ ಪ್ರಾಪಂಚಿಕ ವಿಷಯಗಳ ಆಕರ್ಷಣೆಗೆ ತುತ್ತಾಗಿದ್ದೆವು. ಈಗ ಅಂತಮುಖಿಗಳಾಗಿ ವಿಶ್ಲೇಷಿಸಿ ನಮ್ಮ ಹಕ್ಕು, ಬಾಧ್ಯತೆಗಳನ್ನು ಅರಿತುಕೊಂಡಿದ್ದೇವೆ. ಹಣದಿಂದ ಎಲ್ಲವನ್ನೂ ಪಡೆಯಬಹುದು ಎಂಬ ಭ್ರಮೆಯನ್ನು ಕರೊನಾ ದೂರಮಾಡಿದೆ. ಆರೋಗ್ಯ, ಸ್ವಚ್ಛತೆ, ಹೊಂದಾಣಿಕೆ, ದೈವಭಕ್ತಿ ಮತ್ತು ಪ್ರಶಾಂತವಾದ ಮನಸ್ಸು ನೆಮ್ಮದಿಗೆ ಕಾರಣ ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ.

    ಈ ಲಾಕ್​ಡೌನ್ ಸಮಯದ ವಿರಾಮವು ನಮ್ಮೊಳಗೆ ಇರುವ ಗುಣಾವಗುಣಗಳನ್ನು ವಿಮಶಿಸಿ, ಕೆಟ್ಟದ್ದನ್ನು ದೂರಮಾಡಿ ಒಳಿತನ್ನು ಸ್ವೀಕರಿಸುವ ಮನೋಭಾವ, ಅದಕ್ಕೆ ಬೇಕಾದ ಮಾನಸಿಕ ತರಬೇತಿ ಮೊದಲಾದವುಗಳನ್ನು ತೋರಿಸಿಕೊಟ್ಟಿದೆ. ಆರೋಗ್ಯ, ಆಹಾರದ ಕಡೆಗೆ ವಿಶೇಷವಾದ ಗಮನವನ್ನು ನೀಡಿದ್ದೇವೆ. ಅದೇ ರೀತಿಯಾಗಿ ಆಚಾರ-ವಿಚಾರಗಳು ಮತ್ತು ನಮ್ಮ ಆಸಕ್ತಿಯ ಕಡೆಗೆ ಗಮನ ನೀಡಲು ಅವಕಾಶ ಸಿಕ್ಕಿದೆ. ಆದ್ದರಿಂದ ಈ ಲಾಕ್​ಡೌನ್ ಸಮಯ ಎನ್ನುವುದು ದೇವರು ಕೊಟ್ಟ ಒಂದು ವರವೆಂದು ತಿಳಿದುಕೊಂಡು ಸಮಾಧಾನ ಪಡಬೇಕು.

    ಸಮಯೋಚಿತ ಕೆಲವು ಸೂಕ್ತಿಗಳು: ‘ಯಾರು ಎಂಥ ಕಷ್ಟದಲ್ಲೂ, ಆತ್ಮೀಯ ವಾತಾವರಣವನ್ನು ನಿರ್ವಿುಸಿಕೊಂಡು, ತ್ರಿಕರಣ ಪೂರ್ವಕವಾಗಿ, ತನ್ನೆಲ್ಲ ಸಾಮರ್ಥ್ಯವನ್ನು ಉಪಯೋಗಿಸಿ ಕಾರ್ಯಪ್ರವೃತ್ತವಾಗುತ್ತಾನೋ ಅವನೇ ಸುಖೀ ಪುರುಷ’. ‘ನಿನಗೆ ಮನಸಿದ್ದೋ, ಇಲ್ಲದೆಯೋ ನೀನು ಮಾಡಬೇಕಾದ ಕರ್ತವ್ಯವನ್ನು ಮಾಡಲು ಅನುವು ಮಾಡಿಕೊಟ್ಟದ್ದಕ್ಕಾಗಿ ಪ್ರತಿದಿನ ಬೆಳಗ್ಗೆ ಎದ್ದಾಕ್ಷಣ ದೇವರಿಗೆ ಧನ್ಯವಾದ ಹೇಳಬೇಕು. ಒತ್ತಾಯ ಪೂರ್ವಕವಾಗಿ ಕೆಲಸ ಮಾಡಿದಾಗಲೂ, ನಮ್ಮ ಸಾಮರ್ಥ್ಯವನ್ನು ಪೂರ್ಣ ಪ್ರಯೋಗಿಸಿದಾಗಲೂ ಸೋಮಾರಿಗಳಿಗೆ ಅನುಭವಕ್ಕೆ ಬಾರದ ಆತ್ಮನಿಯಂತ್ರಣ, ಕಷ್ಟಸಹಿಷ್ಣುತೆ, ಆತಸ್ಥೈರ್ಯ ತೃಪ್ತಿ ಮುಂತಾದ ನೂರಾರು ಗುಣಗಳು ನಮ್ಮದಾಗುತ್ತವೆ.

    | ಚಾರ್ಲ್ಸ್ ಕಿಂಗ್ಲೆ

    ಕರೊನಾ ನಿಮಿತ್ತ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದೇವೆ. ಯಾರೋ ತಿಳಿಸಿದ ಹಾಗೆ ಇದು ಸಾಮಾಜಿಕ ಅಂತರ ಅಲ, ಬದಲಾಗಿ ಮನುಷ್ಯರೊಳಗಿನ ಅಂತರ ಹೆಚ್ಚಾಗಿದೆ. ಹಾಗಾಗಿ ಎಲ್ಲರ ಮನಸ್ಸನ್ನು ಒಟ್ಟುಗೂಡಿಸುವ ಪ್ರಯತ್ನ ಆಗಬೇಕಾಗಿದೆ. ಯಕ್ಷಗಾನ ನಮ್ಮೆಲ್ಲರನ್ನೂ ಒಟ್ಟುಗೂಡಿಸುತ್ತಿತ್ತು. ಪ್ರದರ್ಶನದಲ್ಲಿ ನಾವೆಲ್ಲರೂ ಒಟ್ಟು ಸೇರುತ್ತಿದ್ದವು. ಬಿಡುವಿನ ಸಮಯದಲ್ಲಿ ಯಕ್ಷಗಾನದ ಮೂಲಕ ಸತ್ಸಂಗಗಳು ನಡೆಯುತ್ತಿತ್ತು. ಅಲ್ಲಿನ ಸಂಭಾಷಣೆಗಳಿಂದ ಹಿತಕರವಾದ ವಿಚಾರಧಾರೆಗಳನ್ನು ಕೇಳಿಸಿಕೊಂಡು ಮಥಿಸುತ್ತಿದ್ದೆವು. ಮನಸ್ಸಿಗೆ ಮತ್ತು ಸಂಸಾರಕ್ಕೆ ಬೇಕಾದಂಥ ಅನೇಕ ಉಪಯುಕ್ತವಾದ ಸಂದೇಶಗಳು ಅವುಗಳಿಂದ ಸಿಕ್ಕುತ್ತಿತ್ತು.

    ಕರೊನಾ ಸೋಂಕಿನ ಭೀತಿಯಿಂದ ಎಲ್ಲರೂ ದೂರ ದೂರ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈಗ ಎಲ್ಲವೂ ಆನ್​ಲೈನ್ ಮುಖಾಂತರ ನಡೆಯುತ್ತಿದೆ. ಹಾಗೆಯೇ ಯಕ್ಷಗಾನ ಕೂಡ ಆನ್​ಲೈನ್ ಮುಖಾಂತರ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ, ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಶ್ರೀಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಮಹಾಸಭಾ ಇವುಗಳ ಜಂಟಿ ಆಶ್ರಯದಲ್ಲಿ ಆನ್​ಲೈನ್ ಮುಖಾಂತರ ತಾಳಮದ್ದಲೆ ಸಪ್ತಾಹ ನಡೆಯಲಿಕ್ಕಿದೆ. ನಾನು ಸಂತೋಷದಿಂದ ಈ ಕಾರ್ಯಕ್ರಮಕ್ಕೆ ಮತ್ತು ಇಂತಹ ಉಪಕ್ರಮಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಇಂತಹ ಕಾರ್ಯಕ್ರಮಗಳನ್ನು ಕೇವಲ ಮನರಂಜನೆ ದೃಷ್ಟಿಯಿಂದ ನೋಡದೆ ನಮ್ಮ ಜ್ಞಾನವೃದ್ಧಿ ಮತ್ತು ವಿವೇಕವನ್ನು ಜಾಗೃತಗೊಳಿಸುವ ದೃಷ್ಟಿಯಿಂದ ಕೂಡ ನೋಡಬೇಕು.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts