More

    ಟೀಕೆ ಬಿಟ್ಟು ರಾಮನ ಭಜನೆ ಮಾಡಿ: ಈಶ್ವರಪ್ಪ ಹೇಳಿಕೆ

    ಶಿವಮೊಗ್ಗ: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನಾದರೂ ರಾಮನನ್ನು ಟೀಕಿಸುವವರು ಸುಮ್ಮನಿದ್ದು ರಾಮ ನಾಮ ಸ್ಮರಣೆಯಲ್ಲಿ ತೊಡಗಿಕೊಳ್ಳಲಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

    ನಮ್ಮ ಪಕ್ಷದ ಸಂಸದ ಅನಂತಕುಮಾರ ಹೆಗಡೆ, ಸಿಎಂ ಸಿದ್ದರಾಮಯ್ಯ, ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ರಾಮನ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದನ್ನು ನಿಲ್ಲಿಸಲಿ. ಯಾರಿಗೆ ರಾಮನ ಮೇಲೆ ಭಕ್ತಿ ಇದೆಯೋ ಅವರು ಅಯೋಧ್ಯೆಗೆ ಹೋಗಲಿ. ಹೋಗಲು ಇಷ್ಟವಿಲ್ಲದಿದ್ದರೆ ಸುಮ್ಮನಿರುವುದು ಒಳಿತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    500 ವರ್ಷಗಳ ಕನಸು ಸಾಕಾರಗೊಳ್ಳುವ ಸಂದರ್ಭವಿದು. ರಾಮನ ಇರುವಿಕೆ ಬಗ್ಗೆಯೇ ಅನೇಕರು ಸಂದೇಹ ವ್ಯಕ್ತಪಡಿಸಿದ್ದರು. ಇನ್ನೂ ಅನುಮಾನವಿದ್ದರೆ ಅವರೆಲ್ಲರೂ ಇತಿಹಾಸ, ಪೌರಾಣಿಕ ಗ್ರಂಥಗಳನ್ನು ಓದಿ ರಾಮನ ಬಗ್ಗೆ ಅರಿತುಕೊಳ್ಳಲಿ. ಅದನ್ನು ಬಿಟ್ಟು ಕ್ಷುಲ್ಲಕ ಹೇಳಿಕೆ ನೀಡುವುದು ಬೇಡ ಎಂದರು.
    ಸರ್ಕಾರ ರಜೆ ಘೋಷಿಸಲಿ: ಅಯೋಧ್ಯೆಯಲ್ಲಿ ಜ.22ರಂದು ರಾಮಲಲ್ಲಾ ಪ್ರತಿಷ್ಠಾಪನೆಯಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರವು ಅರ್ಧ ದಿನ ರಜೆ ಘೋಷಿಸಿದೆ. ಹಲವು ರಾಜ್ಯಗಳಲ್ಲೂ ರಜೆ ನೀಡಲಾಗಿದೆ. ನಮ್ಮ ರಾಜ್ಯದಲ್ಲೂ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ ನೀಡಿ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ಟಿವಿ ಮೂಲಕ ಜನರು ಕಣ್ತುಂಬಿಕೊಳ್ಳಲು ರಾಜ್ಯ ಸರ್ಕಾರ ಅವಕಾಶ ನೀಡಬೇಕೆಂದು ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
    ಗೊಂದಲದಲ್ಲಿ ಕಾಂಗ್ರೆಸ್: ಕಾಂಗ್ರೆಸ್ ನಾಯಕರಿಗೆ ಇನ್ನೂ ಅಯೋಧ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಗೊಂದಲಗಳಿವೆ. ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಭಾರತ ವಿಭಜನೆ ಮಾಡಿದ ಕಾಂಗ್ರೆಸ್ ಈಗ ಭಾರತ್ ಜೋಡೋ ಎನ್ನುತ್ತಿದೆ. ತಾತಾ ದೇಶ ಒಡೆದರೆ, ಮೊಮ್ಮಗ ರಾಹುಲ್ ಗಾಂಧಿ ಭಾರತವನ್ನು ಜೋಡಿಸಿ ಎಂದು ಯಾತ್ರೆ ಮಾಡುತ್ತಿರುವುದು ರಾಜಕಾರಣವಷ್ಟೇ ಎಂದು ಕೆ.ಎಸ್.ಈಶ್ವರಪ್ಪ ಟೀಕಿಸಿದರು.
    ರಾಜಕೀಯ ಲಾಭವಾಗಲ್ಲ: ನಾನೂ ಅಲ್ಲಮಪ್ರಭು ಭಕ್ತ. ಆತ ಎಲ್ಲ ಧರ್ಮ, ಜಾತಿಗೂ ಆದರ್ಶ. ಅವರ ಹೆಸರನ್ನು ಮೈದಾನಕ್ಕೆ ನಾಮಕರಣ ಮಾಡಿ ಲಿಂಗಾಯತ ರನ್ನು ತಮ್ಮತ್ತ ಸೆಳೆಯಬಹುದು ಎಂದು ರಾಜಕೀಯ ತಂತ್ರ ಮಾಡಲು ಕಾಂಗ್ರೆಸ್ ಹೊರಟರೆ ಅದು ಕೈಗೂಡಲ್ಲ. ಅಲ್ಲಮಪ್ರಭುವಿನಂತಹ ದಾರ್ಶನಿಕನನ್ನು ರಾಜಕೀಯಕ್ಕೆ ಬಳಕೆ ಮಾಡುವುದನ್ನು ಯಾರೂ ಒಪ್ಪುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಪ್ರಮುಖರಾದ ಚಂದ್ರಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts