More

    ಕಾಫಿ, ರಬ್ಬರ್, ಟೀ ಬೆಳೆಯಲು ಅರಣ್ಯ ಭೂಮಿ ಲೀಸ್ ; ಪ್ರತಿಷ್ಠಿತ ಕಂಪನಿಗಳಿಂದ 2000 ಕೋಟಿ ರೂ. ಬಾಕಿ!

    ಬೆಂಗಳೂರು: ಕಾಫಿ, ಟೀ, ರಬ್ಬರ್ ಬೆಳೆಯಲು ಅರಣ್ಯ ಇಲಾಖೆಯ ಭೂಮಿಯನ್ನು ಲೀಸ್ ಪಡೆದು ಹಣ ಪಾವತಿಸದ ಕಂಪನಿಗಳಿಂದ ಭೂಮಿಯನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.

    ರಾಜ್ಯದ ಕೊಡಗು, ಚಾಮರಾಜನಗರ ಮತ್ತಿತರ ಜಿಲ್ಲೆಗಳಲ್ಲಿ ಅರಣ್ಯ ಭೂಮಿಯನ್ನು ಸ್ವಾತಂತ್ರ್ಯಪೂರ್ವದಿಂದಲೂ ಗುತ್ತಿಗೆಗೆ ಪಡೆದು ಕಾಫಿ, ಟೀ, ರಬ್ಬರ್ ಬೆಳೆಯುತ್ತಿರುವ ಪ್ರತಿಷ್ಠಿತ ಕಂಪನಿಗಳಿಂದ ಗುತ್ತಿಗೆ ಹಣ, ಬಡ್ಡಿ ಸೇರಿದಂತೆ ಸುಮಾರು 2 ಸಾವಿರ ಕೋಟಿ ರೂ. ಬರಬೇಕಿದೆ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ರಾಜ್ಯದ ವನ ಪ್ರದೇಶದಲ್ಲಿ ಸುಮಾರು 5500 ಎಕರೆಗೂ ಹೆಚ್ಚು ಅರಣ್ಯ ಭೂಮಿಯನ್ನು ಎಕರೆಗೆ 2 ರೂ.ಗಳಿಂದ 7 ರೂ.ನಂತೆ ಬ್ರಿಟಿಷರ ಆಡಳಿತ ಕಾಲದಲ್ಲಿ ವಿವಿಧ ಕಂಪನಿಗಳಿಗೆ ಮತ್ತು ವ್ಯಕ್ತಿಗಳಿಗೆ 99 ವರ್ಷ ದೀರ್ಘಾವಧಿ ಗುತ್ತಿಗೆ ನೀಡಲಾಗಿತ್ತು. ಕೆಲವು ಗುತ್ತಿಗೆಯನ್ನು ಸ್ವಾತಂತ್ರ್ಯಾನಂತರ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಮುನ್ನ ನವೀಕರಿಸಲಾಗಿದೆ. ಆ ಪ್ರಕಾರ ಲೀಸ್ ಹಣ ಬಾಕಿ ಉಳಿಸಿಕೊಂಡ ಕಂಪನಿಗಳಿಂದ ಭೂಮಿ ವಾಪಸ್ ಪಡೆಯಲಾಗುತ್ತದೆ ಎಂದು ಹೇಳಿದರು.

    ಬಾಕಿ ವಸೂಲಿಗೆ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಬಿ.ಪಿ.ರವಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲು ತೀರ್ಮಾನಿಸಲಾಗಿದೆ. ಜತೆಗೆ ಈ ಸಂಬಂಧ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಕಾನೂನು ಹೋರಾಟ ನಡೆಸಲು ವಿಶೇಷ ಕಾನೂನು ಕೋಶ ರಚಿಸಲಾಗುವುದು ಎಂದು ತಿಳಿಸಿದರು.
    1997ರಲ್ಲಿ ಗುತ್ತಿಗೆ ದರವನ್ನು ಹೆಕ್ಟೇರ್ ಗೆ 5 ಸಾವಿರ ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಈ ಹೆಚ್ಚಳವನ್ನು ಪ್ರಶ್ನಿಸಿ ಮತ್ತು ಬಡ್ಡಿ ಹಣ ನೀಡುವ ವಿಚಾರದಲ್ಲಿ ಕಂಪನಿಗಳು ನ್ಯಾಯಾಲಯಕ್ಕೆ ಹೋಗಿವೆ. ದಶಕಗಳಿಂದ ಈ ಕಂಪನಿಗಳು ಗುತ್ತಿಗೆ ಹಣ ಪಾವತಿಸಿಲ್ಲ ಎಂದು ಹೇಳಿದರು.

    ಯಾವ ಕಂಪನಿ? ಎಷ್ಟು ಬಾಕಿ

    ವೀರಾಜಪೇಟೆಯ ಮರ್ಕೆರಾ ರಬ್ಬರ್ ಲಿ., 1074 ಎಕರೆ ಭೂಮಿ ಗುತ್ತಿಗೆ ಪಡೆದಿದ್ದು 2015ರ ಮಾರ್ಚ್ ವರೆಗೆ ಬಡ್ಡಿ ಸಹಿತ 454 ಕೋಟಿ ರೂಪಾಯಿ ಪಾವತಿಸಬೇಕಿದ್ದರೆ, ಥಾಮ್ಸನ್ ರಬ್ಬರ್ ಇಂಡಿಯಾ ಲಿಮಿಟೆಡ್ 625 ಎಕರೆ ಗುತ್ತಿಗೆ ಪಡೆದಿದ್ದು 91.29 ಕೋಟಿ ರೂ. ಪಾವತಿಸಬೇಕಿದೆ. ನಿಲಂಬೂರು ರಬ್ಬರ್ ಕಂಪನಿ ಲಿಮಿಟೆಡ್ 713 ಎಕರೆ ಗುತ್ತಿಗೆ ಪಡೆದಿದ್ದು 130.22 ಕೋಟಿ ರೂ.ಪಾವತಿಸಬೇಕು ಹಾಗೂ ಪೋರ್ಟ್ ಲ್ಯಾಂಡ್ ರಬ್ಬರ್ ಎಸ್ಟೇಟ್ ಲಿಮಿಟೆಡ್ 1288 ಎಕರೆ ಗುತ್ತಿಗೆ ಪಡೆದಿದ್ದು 2022 ರವರೆಗೆ 536.66 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ವಿವರಿಸಿದರು.
    ಗ್ಲೆನ್ ಲಾರೆನ್ ಪ್ಲಾಂಟೇಷನ್ ಪ್ರೈ ಮತ್ತು ಟಾಟಾ ಕಾಫಿ ಲಿಮಿಟೆಡ್ ಸಂಸ್ಥೆ ಸೇರಿ 943 ಎಕರೆ ಅರಣ್ಯ ಭೂಮಿ ಗುತ್ತಿಗೆ ಪಡೆದಿದ್ದು ಗುತ್ತಿಗೆ ಹಣ, ಬಡ್ಡಿ ಮತ್ತು ದಂಡ ಮೊತ್ತ ಸೇರಿ 524 ಕೋಟಿ ರೂ.ಬಾಕಿ ಪಾವತಿಸಬೇಕಿದೆ. ಚಾಮರಾಜನಗರದ ಹೊನ್ನಮಟ್ಟಿ ನೀಲಗಿರಿ ಪ್ಲಾಂಟೇಷನ್ ಲಿಮಿಟೆಡ್ ಮತ್ತಿತರರಿಂದ 2015ರವರೆಗೆ 25.36 ಕೋಟಿ ರೂ. ಬರಬೇಕಿದೆ. ಈ ಎಲ್ಲ ಕಂಪನಿಗಳು ಪಾವತಿಸಬೇಕಿರುವ ಗುತ್ತಿಗೆಹಣ, ಬಡ್ಡಿ, ಚಕ್ರಬಡ್ಡಿ, ದಂಡ ಮೊತ್ತ ಸೇರಿದರೆ ಒಟ್ಟು 2000 ಕೋಟಿ ರೂ.ಗೂ ಹೆಚ್ಚು ಹಣ ಅರಣ್ಯ ಇಲಾಖೆಗೆ ಬರಬೇಕು. ಕೊಡಗು ಜಿಲ್ಲೆಯೊಂದರಲ್ಲೇ ಇಲಾಖೆಗೆ ಗುತ್ತಿಗೆ ಮೊತ್ತ 1601 ಕೋಟಿ ರೂ. ಬರಬೇಕು ಎಂದು ಆಡಿಟ್ ವರದಿ ತಿಳಿಸಿದೆ ಎಂಬ ಅಂಕಿ ಅಂಶ ನೀಡಿದರು.

    ಸರ್ಕಾರಿ ಜಮೀನು ಹರಾಜು!

    ಥಾಮ್ಸನ್ ರಬ್ಬರ್ ಅರಣ್ಯ ಗುತ್ತಿಗೆ ಭೂಮಿಯನ್ನೇ ಸಾಗು ಜಮೀನು ಎಂದು ಬ್ಯಾಂಕ್‌ನಲ್ಲಿ ಅಡಮಾನ ಇಟ್ಟು ಸಾಲ ಪಡೆದಿದ್ದು, ಸಾಲ ಕಟ್ಟದ ಕಾರಣ ಬ್ಯಾಂಕ್ ನವರು ಅದನ್ನು ಹರಾಜು ಹಾಕಿದ್ದಾರೆ ಎಂಬ ಅಂಶವೂ ಬೆಳೆಕಿಗೆ ಬಂದಿದೆ ಎಂದರು.
    ಗುತ್ತಿಗೆ ಅವಧಿ ಮುಗಿದ ಅರಣ್ಯಭೂಮಿ ಹಿಂಪಡೆಯಲು ಮತ್ತು ಕಂಪನಿಗಳಿಂದ ಬರಬೇಕಾದ ಬಾಕಿ ವಸೂಲಿ ಮಾಡಲು ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts