More

    ಸದಸ್ಯರ ಮನವೊಲಿಕೆಗೆ ಮುಖಂಡರ ಯತ್ನ

    ಕುಂದಗೋಳ: ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರಾಯ್ಕೆ ನ. 6ರಂದು ನಡೆಯಲಿದ್ದು, ಗುರುವಾರದ ರಾಜಕೀಯ ಬೆಳವಣಿಗೆ ಕುತೂಹಲ ಮೂಡಿಸಿದೆ.

    19 ಸದಸ್ಯ ಬಲ ಹೊಂದಿರುವ ಪಪಂನಲ್ಲಿ 12 ಸದಸ್ಯರೊಂದಿಗೆ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದೆ. ಆದರೆ, ಕೊನೆ ಗಳಿಗೆಯಲ್ಲಿ ಬಿಜೆಪಿಯ ಕೆಲವರು ಬಂಡಾಯ ಏಳುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸುವ ನೆಪದಲ್ಲಿ ತನ್ನೆಲ್ಲ 12 ಸದಸ್ಯರನ್ನು ಹಿಡಿದಿಡಲಾಗಿದೆ ಎಂಬ ಮಾತುಗಳು ಪಟ್ಟಣದಲ್ಲಿ ಕೇಳಿ ಬರುತ್ತಿವೆ.

    ಬಂಡಾಯಕ್ಕೆ ಕಾರಣ?

    ಪಕ್ಷದ ವರಿಷ್ಠರು ಸೂಚಿಸುವ ವ್ಯಕ್ತಿ ಅಧ್ಯಕ್ಷರಾಗುವುದು ಕೆಲ ಸದಸ್ಯರಿಗೆ ಇಷ್ಟವಿಲ್ಲ. ಕೆಲವು ಸದಸ್ಯರು ತಾವು ಸೂಚಿಸುವವರನ್ನೇ ಅಧ್ಯಕ್ಷರನ್ನಾಗಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ 12 ಸದಸ್ಯರ ಪೈಕಿ ಮೂರ್ನಾಲ್ಕು ಸದಸ್ಯರು ತಮ್ಮನ್ನೇ ಅಧ್ಯಕ್ಷರನ್ನಾಗಿಸಬೇಕು ಎಂದು ಪಟ್ಟು ಹಿಡಿದಿರುವುದು ವರಿಷ್ಠರಿಗೆ ತಲೆನೋವಾಗಿದೆ. ಹೀಗಾಗಿ ಬಿಜೆಪಿ ಜಿಲ್ಲಾ ಮುಖಂಡರು ಸದಸ್ಯರನ್ನು ಹುಬ್ಬಳ್ಳಿಗೆ ಕರೆಸಿಕೊಂಡು ಮನವೊಲಿಸಲು ಯತ್ನಿಸುತ್ತಿದ್ದಾರೆ.

    ಹುನ್ನಾರ:

    ಕಾಂಗ್ರೆಸ್​ನ ಐವರು ಸದಸ್ಯರಿದ್ದು, ಇಬ್ಬರು ಪಕ್ಷೇತರರು ಬೆಂಬಲಕ್ಕಿದ್ದಾರೆ. ಹೀಗಾಗಿ ಬಿಜೆಪಿಯ ಮೂರ್ನಾಲ್ಕು ಬಂಡಾಯ ಸದಸ್ಯರನ್ನು ಸೇರಿಸಿಕೊಂಡು ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕಾಂಗ್ರೆಸ್ ನಾಯಕರು ಉಪಾಧ್ಯಕ್ಷ ಸ್ಥಾನ, ಸ್ಥಾಯಿ ಸಮಿತಿ ಮೇಲೆ ಕಣ್ಣಿಟ್ಟಿದ್ದು, ಬಿಜೆಪಿ ಸದಸ್ಯರು ಬರುವುದನ್ನೇ ಕಾಯುತ್ತಿದ್ದಾರೆ. ಹೀಗಾಗಿ ಬಿಜೆಪಿ ಸದಸ್ಯರು ಬಂಡಾಯವೇಳದಂತೆ ಹಾಗೂ ಮುಂದಿನ ದಿನಗಳಲ್ಲಿ ಅಧಿಕಾರ ನೀಡುವ ಭರವಸೆ ಮೂಲಕ ಅಸಮಾಧಾನ ಶಮನಕ್ಕೆ ಪ್ರಯತ್ನಿಸುತ್ತಿದ್ದಾರೆ.

    ನಾಯಕರಿಗೆ ತಲೆಬಿಸಿ:

    ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅ ವರ್ಗಕ್ಕೆ ಮೀಸಲಾಗಿದೆ. ಆಯ್ಕೆಯಾದ ಸದಸ್ಯರಲ್ಲಿ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಪಕ್ಷದ ನಾಯಕರಿಗೆ ತಲೆಬಿಸಿಯಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಮುಖಂಡ ಎಂ.ಆರ್.ಪಾಟೀಲ ಅವರ ನಿರ್ಣಯದ ಮೇಲೆಯೇ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಿಂತಿದೆ. ಆದರೂ ಅಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪರಮಾಪ್ತ ಶ್ಯಾಮ್ ಸುಂದರ ದೇಸಾಯಿ ಅವರ ಹೆಸರು ಕೇಳ ಬರುತ್ತಿದೆ.

    ಕಲಘಟಗಿ ಪಪಂ ಬಿಜೆಪಿಗೆ ಫಿಕ್ಸ್

    ಕಲಘಟಗಿ: ಇಲ್ಲಿನ ಪಟ್ಟಣ ಪಂಚಾಯಿತಿ ಬಹುಮತವಿರುವ ಬಿಜೆಪಿ ತೆಕ್ಕೆಗೆ ಒಲಿಯುವುದು ಬಹುತೇಕ ನಿಚ್ಚಳವಾಗಿದೆ. ನ.6ರಂದು ಅಧ್ಯಕ್ಷ-ಉಪಾಧ್ಯಕ್ಷರಾಯ್ಕೆ ನಡೆಯಲಿದೆ. ಅಧ್ಯಕ್ಷೆಯಾಗಿ ಅನಸೂಯಾ ಹೆಬ್ಬಳ್ಳಿಮಠ, ಉಪಾಧ್ಯಕ್ಷೆಯಾಗಿ ಯಲ್ಲವ್ವ ಶಿಗ್ಲಿ ಆಯ್ಕೆ ನಿಶ್ಚಿತ ಎಂದು ವಿಶ್ಲೇಷಿಸಲಾಗುತ್ತಿದೆ.

    ಒಟ್ಟು 17 ಸದಸ್ಯರ ಬಲಾಬಲದಲ್ಲಿ ಬಿಜೆಪಿ 9, ಕಾಂಗ್ರೆಸ್-3, ಜೆಡಿಎಸ್-2 ಹಾಗೂ ಪಕ್ಷೇತರ-3 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್​ಸಿ ಮಹಿಳೆಗೆ ಮೀಸಲಿದೆ.

    ಬಿಜೆಪಿಯ ಅನಸೂಯಾ ಹೆಬ್ಬಳ್ಳಿಮಠ, ಜೆಡಿಎಸ್​ನ ಶಕುಂತಲಾ ಬೋಳಾರ, ಪಕ್ಷೇತರ ಸದಸ್ಯೆ ಲಕ್ಷ್ಮೀ ಪಾಲ್ಕರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಯಲ್ಲವ್ವ ಶಿಗ್ಲಿ, ಪಕ್ಷೇತರ ಸದಸ್ಯೆ ಮಾಲಾ ಲಮಾಣಿ ಕಣಕ್ಕಿಳಿಯುವ ಸಾಧ್ಯತೆಯಿದೆ.

    ಮನಸ್ಸು ಮಾಡಿದ್ದರೆ ಬಿಜೆಪಿಯ ಕೆಲವರನ್ನು ಸೆಳೆದು, ಪಕ್ಷೇತರ ಮೂವರು ಸದಸ್ಯರು, ಜೆಡಿಎಸ್-ಕಾಂಗ್ರೆಸ್ ಕೂಡಿ ಗದ್ದುಗೆ ಹಿಡಿಯಬಹುದು ಎಂಬ ಲೆಕ್ಕಾಚಾರವೂ ಮುನ್ನೆಲೆಗೆ ಬಂದಿತ್ತು. ಆದರೆ, ಪಕ್ಷೇತರರು ಪರೋಕ್ಷವಾಗಿ ಬಿಜೆಪಿ ಬೆನ್ನಿಗಿದ್ದಾರೆ. ಹಾಗಾಗಿ ಸುಖಾಸುಮ್ಮನೆ ಕಣದಲ್ಲಿ ಇರುವ ಇರಾದೆ ಜೆಡಿಎಸ್​ಗೆ ಇದೆ. ಕಾಂಗ್ರೆಸ್ ಮೂಕ ಪ್ರೇಕ್ಷಕವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts