More

    ಅಂತಾರಾಷ್ಟ್ರೀಯ ಪಂದ್ಯಕ್ಕೆ ಮಾನ್ಯತಾ ಕೋಟಿಮಠ ಆಯ್ಕೆ

    ಲಕ್ಷ್ಮೇಶ್ವರ: ಮಾರ್ಷಲ್ ಆರ್ಟ್ಸ್ ಮತ್ತು ಕರಾಟೆ ಸಮರ ಕಲೆಯಲ್ಲಿ ಪಟ್ಟಣದ ಬಾಲಪ್ರತಿಭೆ ಮಾನ್ಯತಾ ಕೋಟಿಮಠ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಿದ್ಧವಾಗಿದ್ದಾಳೆ.
    ಇತ್ತೀಚೆಗೆ ಶಿರಡಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸ್ಕ್ವಾಯ್ ಮಾರ್ಷಲ್ ಆರ್ಟ್ ಕ್ರೀಡೆಯಲ್ಲಿ 8 ವರ್ಷದ ಮಾನ್ಯತಾ ಜಯಗಳಿಸಿ ಮಾರ್ಚ್ 9 ರಿಂದ 17ರ ವರೆಗೆ ಥೈಲ್ಯಾಂಡ್ ದೇಶದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಿಟ್ಟಿಸಿದ್ದಾಳೆ. ಈಕೆ ಪಟ್ಟಣದ ಶಿವಪ್ರಸಾದ ಮತ್ತು ಅರುಣಾ ಕೋಟಿಮಠ ದಂಪತಿಯ ಮಗಳು. ಲಕ್ಷ್ಮೇಶ್ವರದ ಆಕ್ಸ್‌ಫರ್ಡ್ ಇಂಗ್ಲಿಷ್ ಮಾಧ್ಯಮ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ. ಭರತನಾಟ್ಯ, ಸಂಗೀತ, ಕ್ರೀಡೆಯ ಜತೆಗೆ ಓದಿನಲ್ಲೂ ಮುಂದಿದ್ದಾಳೆ.
    ಪದಕಗಳ ಬೇಟೆ: ಬಾಲಕಿ ಇನ್ನಾರು ತಿಂಗಳಲ್ಲಿ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆಯುವ ಹುಮ್ಮಸ್ಸಿನಲ್ಲಿದ್ದಾಳೆ. ಬೆಂಗಳೂರು, ಶಿವಮೊಗ್ಗ, ಗಂಗಾವತಿ, ದಾವಣಗೆರೆ, ಹುಬ್ಬಳ್ಳಿ, ಶಿರಡಿಯಲ್ಲಿ ಏರ್ಪಾಟಾಗಿದ್ದ ರಾಜ್ಯ-ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ 12 ಚಿನ್ನ, 4 ಬೆಳ್ಳಿ ಪದಕ ಪಡೆದಿದ್ದಾಳೆ. ಕೋವಿಡ್ ಸಮಯವಾದ 2021ರಲ್ಲಿ ಆನ್‌ಲೈನ್‌ನ ಕರಾಟೆ ಸ್ಪರ್ಧೆಯಲ್ಲಿ ಇವಳ ಪ್ರದರ್ಶನ ಮೆಚ್ಚಿ ಮುಂಬೈನ ಸಂಸ್ಥೆಯೊಂದು ಎಕ್ಸಲಂಟ್ ವರ್ಲ್ಡ್ ರೆಕಾರ್ಡ್ಸ್ ಸರ್ಟಿಫಿಕೇಟ್ ಸಂದಿದೆ. ಮಾನ್ಯತಾ ಸಹೋದರ ಮನೋಜ್ಞ ಕೋಟಿಮಠ ಕೂಡಾ ಕರಾಟೆಯಲ್ಲಿ ಮಿಂಚುತ್ತಿದ್ದಾನೆ.

    ಮಗಳ ಆಸಕ್ತಿ, ಪ್ರತಿಭೆ, ಉತ್ಸಾಹಕ್ಕೆ ಪೂರಕವಾದ ವಾತಾವರಣ ಒದಗಿಸಿ ಪ್ರೋತ್ಸಾಹ ನೀಡುತ್ತಿದ್ದೇವೆ. ಅವಳಿಗೆ ತರಬೇತಿ ನೀಡುತ್ತಿರುವ ಶಿಕ್ಷಕರ ಕಾರ್ಯವೂ ಪ್ರಶಂಸನೀಯ.
    ಶಿವಪ್ರಸಾದ- ಅರುಣಾ, ಮಾನ್ಯತಾಳ ಪಾಲಕರು

    ಕರಾಟೆ ಮತ್ತು ಇತರ ಸಮರ ಕಲೆಗಳು ಮಕ್ಕಳಲ್ಲಿ ಯೋಚನಾ ಶಕ್ತಿ, ಕಲಾತ್ಮಕ ತಂತ್ರ, ಬುದ್ಧಿಮತ್ತೆ, ಶಿಸ್ತು, ಸಂಯಮ ಹೆಚ್ಚಿಸಲು ಪೂರಕ. ಬಾಲಕಿ ಮಾನ್ಯತಾ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
    ಸೈಯದ್ ರಫೀಕ್ ಪೀರಜಾದೆ, ತರಬೇತುದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts