More

    ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಕಾಂಗ್ರೆಸ್ ವಿರುದ್ಧ ವಿಪ ಸದಸ್ಯರಾದ ಸಂಕನೂರ-ನಿರಾಣಿ ಕಿಡಿ !

    ವಿಜಯಪುರ: ಪಾಕಿಸ್ತಾನ್ ಪರ ಘೋಷಣೆ ಹಾಗೂ ಬಾಂಬ್ ಸ್ಪೋಟದಂಥ ಪ್ರಕರಣಗಳು ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದ್ದು, ಆಡಳಿತ ವೈಫಲ್ಯ ಮುಚ್ಚಿ ಹಾಕಲು ಕಾಂಗ್ರೆಸ್ ತೆರಿಗೆ ವಿಚಾರ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹರಿಹಾಯ್ದರು.

    ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ವಿಧಾನಸೌಧದಲ್ಲಿಯೇ ಪಾಕಿಸ್ತಾನ ಪರ ಘೋಷಣೆಗಳು ಮೊಳಗುತ್ತಿವೆ. ರಾಜಧಾನಿಯಲ್ಲಿಯೇ ಬಾಂಬ್ ಸ್ಪೋಟಗೊಳ್ಳುತ್ತಿದೆ. ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದು ಸ್ಪಷ್ಟವಾಗಿದ್ದರೂ ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಮೀನಮೇಷ ಎಣಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಕಿಡಿಕಾರಿದರು.

    ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು ನಿರ್ವಹಣೆಯಾಗುತ್ತಿಲ್ಲ. ಜನರ ಸಾಲ ಮನ್ನಾ ಮಾಡುವ ನಿರೀಕ್ಷೆ ಹುಸಿಯಾಯಿತು. ಗುಳೆ ತಡೆಯಲು ಆಗುತ್ತಿಲ್ಲ. ದೇಶದ್ರೋಹಿ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತಿಲ್ಲ. ಮಹಿಳಾ ದೌರ್ಜನ್ಯ ತಡೆಯಲಾಗುತ್ತಿಲ್ಲ. ಇಂಥ ಎಲ್ಲ ವೈಫಲ್ಯಗಳನ್ನು ಕಾಂಗ್ರೆಸ್ ಮರೆಮಾಚುತ್ತಿದೆ.

    ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿ ಹೊಡೆಯುವಾಗ ಈ ಸರ್ಕಾರ ಎಲ್ಲಿತ್ತು? ಪೊಲೀಸರು ಏನು ಮಾಡುತ್ತಿದ್ದರು? ಈ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲವಾ? ಎಂದ ಸಂಕನೂರ, ಹಾವೇರಿಯ ಹಾನಗಲ್ಲನಲ್ಲಿ ಹುಡುಗ- ಹುಡುಗಿಯ ಮೇಲೆ ಹಲ್ಲೆ ನಡೆಸಿ ಹುಡುಗಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡುತ್ತಾರೆ. ಸಂತ್ರಸ್ತೆ ದೂರು ದಾಖಲಿಸಲು ಹೋದರೆ ಪೊಲೀಸರು ಹಿಂದೇಟು ಹಾಕಿದರು. ಬಳಿಕ ಸಾಕಷ್ಟು ಒತ್ತಡ ಹಾಕಬೇಕಾಯಿತು. ಇಂಥ ಅನೇಕ ಪ್ರಕರಣಗಳನ್ನು ಕಾಂಗ್ರೆಸ್ ಉದ್ದೇಶಪೂರ್ವಕವಾಗಿಯೇ ಮರೆಮಾಚುತ್ತಿದೆ. ಜನರ ಗಮನ ಬೇರೆ ಕಡೆ ಸೆಳೆಯಲು ಕೇಂದ್ರ ಸರ್ಕಾರ ಬರ ನಿರ್ವಹಣೆಗೆ ಹಣ ಕೊಡುತ್ತಿಲ್ಲ ಎಂಬ ಆರೋಪ ಮಾಡಲಾಗುತ್ತಿದೆ. ಜನರ ತೆರಿಗೆ ಹಣ ಸಮರ್ಪಕವಾಗಿ ಹಂಚಿಕೆಯಾಗುತ್ತಿಲ್ಲವೆಂದು ಆರೋಪಿಸುತ್ತಿದ್ದಾರೆ ಎಂದರು.

    ಈ ಹಿಂದೆ ಮನಮೋಹನಸಿಂಗ್ ಆಡಳಿತದಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ಬಂತು ಮತ್ತು ಕಳೆದ ಹತ್ತು ವರ್ಷದಲ್ಲಿ ಮೋದಿ ಆಡಳಿತದಲ್ಲಿ ಬಂದ ಅನುದಾನ ಎಷ್ಟು ಎಂಬ ಅಂಕಿ ಅಂಶ ನೀಡಿದ ಸಂಕನೂರ, ಈ ಹಿಂದೆ ಯುಪಿಎ ಆಡಳಿತದಲ್ಲಿ ರಾಜ್ಯಕ್ಕೆ 81 ಸಾವಿರ ಕೋಟಿ ಅನುದಾನ ಬಂದಿತ್ತು. ಆದರೆ, ಮೋದಿ ಬಂದ ಬಳಿಕ ಕೇಂದ್ರದಿಂದ 2.82 ಲಕ್ಷ ಕೋಟಿ ಅನುದಾನ ಬಂದಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಅಭಿವೃದ್ಧಿ ಅನುದಾನಡಿ ರಾಜ್ಯಕ್ಕೆ ಕೇವಲ ಶೇ.32 ರಷ್ಟು ಅನುದಾನ ಬರುತ್ತಿದ್ದರೆ ಈಗ ಮೋದಿ ಅವಧಿಯಲ್ಲಿ ಶೇ.42 ರಷ್ಟು ಅನುದಾನ ಬರುತ್ತಿದೆ. ಇಷ್ಟಾದರೂ ಸುಳ್ಳು ಆಪಾದನೆ ಮಾಡುತ್ತಿರುವುದೇಕೆ? ಎಂದರು.

    ಕೇಂದ್ರ ಹಣಕಾಸು ಆಯೋಗವೇ ಸಂಗ್ರಹಗೊಂಡ ಆದಾಯದ ಮೇಲೆ ಅನುದಾನ ಹಂಚಿಕೆ ಮಾಡುತ್ತದೆ. ಮೋದಿ ಅನುದಾನ ಹಂಚಿಕೆ ಮಾಡುವುದಿಲ್ಲ. ಮಾಡುವುದೆಲ್ಲವೂ ಹಣಕಾಸು ಆಯೋಗ. ಆದರೂ ಮೋದಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

    ನರೇಂದ್ರ ಮೋದಿ ಅವರ ಯೋಜನೆಗಳು ಮನೆ ಮನೆ ತಲುಪಿವೆ. ಜನರಿಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸಲಾಗಿದೆ. 3 ಕೋಟಿ ಮನೆ ನಿರ್ಮಿಸಿದ್ದಾರೆ. ಜೆಜೆಎಂ ಯೋಜನೆಯಡಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಒದಗಿಸಲಾಗುತ್ತಿದೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 9 ಕೋಟಿ ಶೌಚಗೃಹ ನಿರ್ಮಿಸಲಾಗಿದೆ. ಸ್ಕಿಲ್ ಇಂಡಿಯಾ, ಸ್ಟಾರ್ಟ್ ಅಪ್ ಮುಂತಾದ ಯೋಜನೆಗಳು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿವೆ. ಆದರೆ ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುವಲ್ಲಿ ವಿಫಲವಾಗಿವೆ. ಒಂದು ಕೈಯಿಂದ ಇಸಿದುಕೊಂಡು ಇನ್ನೊಂದು ಕೈಯಿಂದ ಕೊಡುವ ಕೆಲಸವಾಗುತ್ತಿದೆ. ಬೆಲೆ ಏರಿಕೆಯಾಗಿದೆ. ಜನ ಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

    ವಿಪ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದು, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನದಟ್ಟು ಮಾಡುವ ಪ್ರಯತ್ನ ನಡೆದಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇಂಥ ಸುಳ್ಳು ಆರೋಪಗಳಿಗೆ ಉತ್ತರ ಕೊಡಲು ಸಜ್ಜಾಗಿರುವುದಾಗಿ ಹೇಳಿದರು.
    ವಿಪ ಮಾಜಿ ಸದಸ್ಯ ಅರುಣ ಶಹಾಪುರ, ಚಂದ್ರಶೇಖರ ಕವಟಗಿ, ಸುರೇಶ ಬಿರಾದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts