More

    ’ಕುಂಡ್ಯೋಳಂಡ ಹಾಕಿ ಕಾರ್ನಿವಲ್’ಗೆ ಚಾಲನೆ

    ನಾಪೋಕ್ಲು:

    ಹಾಕಿ ನಮ್ಮ ಪರಂಪರೆಯ ಭಾಗವಾಗಿದ್ದು ಕೊಡವರಿಲ್ಲದ ಹಾಕಿ ತಂಡವನ್ನು ಕಲ್ಪಿಸಿಕೊಳ್ಳುವುದು ಕೂಡ ಕಷ್ಟ ಎಂದು ವಿರಾಜಪೇಟೆ ಶಾಸಕರೂ ಆದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು. ಕುಂಡ್ಯೋಳಂಡ ಕುಟುಂಬದ ವತಿಯಿಂದ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕುಟುಂಬಗಳ ನಡುವಿನ ೨೪ನೇ ಕೊಡವ ಹಾಕಿ ಹಬ್ಬ ’ಕುಂಡ್ಯೋಳಂಡ ಹಾಕಿ ಕಾರ್ನಿವಲ್’ಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು.

    ಕೊಡವರ ಆಚಾರ, ವಿಚಾರ, ಸಂಸ್ಕೃತಿ ರಕ್ಷಣೆ ಜತೆಗೆ ಹಾಕಿ ಉಳಿಸುವ ಅಗತ್ಯವೂ ಇದೆ. ಈ ನಿಟ್ಟಿಲ್ಲಿ ಕೊಡವ ಹಾಕಿ ಅಕಾಡೆಮಿ ಮತ್ತು ಹಾಕಿ ಕೂರ್ಗ್ ಸಂಸ್ಥೆ ಕೊಡುಗೆ ಗಮನಾರ್ಹವಾಗಿದೆ. ಹಾಕಿ ಕ್ರೀಡೆಯ ಉತ್ತೇಜನಕ್ಕಾಗಿ ಹಾಕಿ ಅಕಾಡೆಮಿ ಜಾಗದ ಬೇಡಿಕೆ ಇಟ್ಟಿದೆ. ಇದಕ್ಕಾಗಿ ವಿರಾಜಪೇಟೆ ತಾಲೂಕು ತೋರ ಗ್ರಾಮದಲ್ಲಿ ೫ ಎಕರೆ ಜಾಗ ಗುರುತಿಸಲಾಗಿದೆ. ಚುನಾವಣೆ ನಂತರ ಆ ಜಾಗ ಅಕಾಡೆಮಿಗೆ ಸಿಗುತ್ತದೆ. ಕೊಡವರಲ್ಲಿ ಕ್ರೀಡೆ ರಕ್ತಗತವಾಗಿ ಬಂದಿದೆ. ಇದನ್ನು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ. ವಿರಾಜಪೇಟೆ ತಾಲೂಕಿನ ಪ್ರತಿ ಹೋಬಳಿಯಲ್ಲೂ ಆಟದ ಮೈದಾನಗಳಿಗೆ ಪುನಶ್ಚೇತನ ನೀಡಲಾಗುವುದು. ಇದಕ್ಕಾಗಿ ೮ ಹೋಬಳಿಗಳಲ್ಲಿ ೮ ಮೈದಾನಗಳನ್ನು ಗುರುತಿಸಲಾಗಿದೆ. ಕ್ರೀಡೆಗೆ ಸಂಬಂಧಿಸಿದಂತೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಟೆನ್ನಿಸ್ ತಾರೆ ರೋಹನ್ ಬೋಪಣ್ಣ ಜಿಲ್ಲೆಯಲ್ಲಿ ಟೆನ್ನಿಸ್ ಅಕಾಡೆಮಿ ಆರಂಭಿಸಲು ಜಾಗ ಕೇಳಿದಾರೆ. ಇದಕ್ಕೆ ಅಗತ್ಯವಿರುವ ಜಾಗ ಜಿಲ್ಲಾಡಳಿತದಿಂದ ಕೊಡಲು ಸಾಧ್ಯವಾಗದಿದ್ದರೆ ತನ್ನ ಸ್ವಂತ ಜಾಗ ನೀಡುವುದಾಗಿ ಹೇಳಿದರು.

    ವಿಧಾನಪರಿಷತ್ ಸದಸ್ಯ ಮಂಡೇಪಂಡ ಸುಜಾಕುಶಾಲಪ್ಪ ಮಾತನಾಡಿ ಕೌಟುಂಬಿಕ ಹಾಕಿ ಕ್ರೀಡಾಕೂಟಗಳು ನಡೆಯಲಾರಂಭಿಸಿದಂದಿನಿಂದ ಕೊಡವ ಕುಟುಂಬಗಳಲ್ಲಿ ಮತ್ತು ಕುಟುಂಬಗಳ ಮಧ್ಯೆ ಸಾಮರಸ್ಯ ಮೂಡುವಂತಹ ವಾತಾವರಣ ನಿರ್ಮಾಣ ಆಯಿತು. ಹಾಕಿ ಕ್ರೀಡೆಯಲ್ಲಿ ಮುಂದಿನ ಪೀಳಿಗೆಗೆ ಪ್ರೋತ್ಸಾಹ ಕೊಡಲು ಈ ಕ್ರೀಡಾಕೂಟಗಳು ಅವಕಾಶ ಮಾಡಿಕೊಟ್ಟಿದೆ ಎಂದರು.

    ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ. ಬೋಪಣ್ಣ ಮಾತನಾಡಿ, ಕೌಟುಂಬಿಕ ಹಾಕಿ ಪಂದ್ಯಾವಳಿಯ ಕನಸು ಕಂಡು ಅದನ್ನು ಹುಟ್ಟುಹಾಕಿದ ತಮ್ಮ ತಂದೆ ಪಾಂಡಂಡ ಕುಟ್ಟಣ್ಣ ಅವರು ಕೂಡ ಯೋಚನೆ ಮಾಡದ ರೀತಿಯಲ್ಲಿ ಈ ಪಂದ್ಯಾವಳಿಗಳು ಯಶಸ್ವಿ ಆಗುತ್ತಿದೆ. ಕುಟುಂಬದೊಳಗೆ ಸಾಮರಸ್ಯ, ಪ್ರತಿಭಾವಂತ ಆಟಗಾರರ ಆಟ ಸ್ಥಳೀಯವಾಗಿ ಸವಿಯುವ ಅವಕಾಶ, ಮಕ್ಕಳಲ್ಲಿನ ಪ್ರತಿಭೆಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ಕೌಟುಂಬಿಕ ಹಾಕಿ ಪಂದ್ಯಾವಳಿಗಳನ್ನು ಆರಂಭಿಸಲಾಯಿತು. ಕೊಡವ ಹಾಕಿ ಅಕಾಡೆಮಿ ಹಾಕಿ ಹಬ್ಬವನ್ನು ಉನ್ನತ ಮಟ್ಟಕ್ಜೆ ಕೊಂಡೊಯ್ಯಲು ಸಂಕಲ್ಪ ಮಾಡಿದೆ. ಈ ನಿಟ್ಟಿನಲ್ಲಿ ಅಕಾಡೆಮಿಗೆ ಸ್ವಂತದ್ದೊಂದು ಕ್ರೀಡಾಂಗಣದ ಅಗತ್ಯವಿದೆ ಎಂದು ಹೇಳಿದರು.

    ಮಾಜಿ ಒಲಿಂಪಿಯನ್ ಡಾ. ಎ.ಬಿ. ಸುಬ್ಬಯ್ಯ ಮಾತನಾಡಿ ತಾನು ಸ್ಪರ್ಧಾತ್ಮಕ ಹಾಕಿ ಬಿಟ್ಟು ೧೫-೨೦ ವರ್ಷ ಆಯಿತು. ಆದರೆ ಈಗಿನ ಪೀಳಿಗೆಗೆ ಸ್ಫೂರ್ತಿ ತುಂಬಲು ತಮ್ಮ ಕುಟುಂಬದ ಪರ ಈ ಪಂದ್ಯಾವಳಿಯಲ್ಲಿ ಆಡಲಾಗುವುದು. ಕೊಡವ ಹಾಕಿ ಅಕಾಡೆಮಿ ವತಿಯಿಂದ ಮುಂದಿನ ತಿಂಗಳು ೫ರಿಂದ ೭ರ ತನಕ ನಾಪೋಕ್ಲುವಿನಲ್ಲಿ ಹಾಕಿ ಅಂಪೈರ್‌ಗಳಿಗಾಗಿ ’ಅಂಪೈರ್ ಕ್ಲಿನಿಕ್’ ಆಯೋಜಿಸಲಾಗಿದೆ. ಅಂಪೈರ್‌ಗಳಿಗೆ ತಮ್ಮ ವೃತ್ತಿಪರತೆ ಹೆಚ್ಚಿಸಿಕೊಳ್ಳಲು ಇಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಅಗತ್ಯ ಕೌಶಲ್ಯ ನೀಡಲಾಗುವುದು. ಆಸಕ್ತರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಕೊಡಗಿನ ಅಂಪೈರ್‌ಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸೇವೆ ಸಲ್ಲಿಸುವಂತಾಗಬೇಕು ಎಂದರು.

    ಮಾಜಿ ಒಲಿಂಪಿಯನ್ ಬಾಳೆಯಡ ಸುಬ್ರಹ್ಮಣ್ಯ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಹಾಕಿ ತಂಡದಲ್ಲಿ ಕೊಡಗಿನ ಆಟಗಾರರನ್ನು ಹುಡುಕುವಂತಾಗಿದೆ. ಇದು ತಪ್ಪಬೇಕು. ಕೊಡಗಿನ ಆಟಗಾರರು ಮತ್ತೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಬೇಕು. ಇದಕ್ಕೆ ಇಂತಹ ಕ್ರೀಡಾಕೂಟಗಳು ಸಹಕಾರಿ ಆಗಲಿ ಎಂದು ಆಶಿಸಿದರು.

    ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ಕಟುಂಬದವರೆಲ್ಲಾ ಸೇರಿ ಆಡುವ ವಿಶ್ವದ ಅತೀ ದೊಡ್ಡ ಹಾಕಿ ಪಂದ್ಯಾವಳಿ ಇದಾಗಿದೆ. ರಾಷ್ಟ್ರೀಯ ಕ್ರೀಡೆ ಹಾಕಿ ಉಳಿಸುವಲ್ಲಿ ಮತ್ತು ಜನಪ್ರಿಯತೆ ಹೆಚ್ಚಿಸುವಲ್ಲಿ ಈ ಕ್ರೀಡಾಕೂಟ ಮಹತ್ವದ್ದಾಗಿದೆ. ಆಟದಲ್ಲಿ ಸೋಲು, ಗೆಲುವು ಇದ್ದಿದ್ದೇ. ಎಲ್ಲರೂ ಆಡಬೇಕು. ಮುಂದೆ ಇನ್ನು ದೊಡ್ಡ ಮಟ್ಟದಲ್ಲಿ ಕ್ರೀಡಾಕೂಟ ನಡೆಯಬೇಕು ಎಂದು ಹೇಳಿದರು.

    ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಮಾತನಾಡಿ ಕ್ರೀಡಾಕೂಟಕ್ಕೆ ಶುಭಹಾರೈಸಿದರು.
    ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ಕುಂಡ್ಯೋಳಂಡ ಎ. ನಾಣಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಲೇಖಕಿ ಕಂಬೀರಂಡ ಕಾವೇರಿ ಪೊನ್ನಪ್ಪ, ಹಿರಿಯ ಹಾಕಿ ಆಟಗಾರ ಪೈಕೇರ ಕಾಳಯ್ಯ, ಪ್ರವಾಸೋದ್ಯಮಿ ಶರಿ ಸಬಾಸ್ಟಿನ್, ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷ ಮುಂಡಂಡ ಸಿ ನಾಣಯ್ಯ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗಡ ಲವಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಡಂದೇರ ಬಾಂಡ್ ಗಣಪತಿ, ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts