More

    3 ತಿಂಗಳಿಂದ ಸಿದ್ಧಗಂಗಾ ಮಠಕ್ಕೆ ಬಂದಿಲ್ಲ ರೇಷನ್

    ತುಮಕೂರು: ಸಾವಿರಾರು ಮಕ್ಕಳಿಗೆ ತ್ರಿವಿಧ ದಾಸೋಹ ನೀಡುತ್ತಿರುವ ಶ್ರೀ ಸಿದ್ಧಗಂಗಾ ಮಠಕ್ಕೆ ರಾಜ್ಯ ಸರ್ಕಾರ ಪೂರೈಸುತ್ತಿದ್ದ ಅಕ್ಕಿ ಹಾಗೂ ಗೋಧಿ ಕಳೆದ ಮೂರು ತಿಂಗಳಿನಿಂದ ಬಿಡುಗಡೆಯಾಗದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

    ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 73,590 ಕೆ.ಜಿ.ಅಕ್ಕಿ ಹಾಗೂ 36,795 ಕೆ.ಜಿ. ಗೋಧಿ ಪ್ರತಿ ತಿಂಗಳು ಸರಬರಾಜು ಮಾಡುತ್ತಿತ್ತು. ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ಸರ್ಕಾರ ಮಾಹಿತಿ ಕೇಳಿತ್ತು, ಅದರಂತೆ ನಾವು ಸೂಕ್ತ ದಾಖಲೆ, ಮಾಹಿತಿ ಸಲ್ಲಿಸಿದ್ದೇವೆ ಆದರೆ, ಇನ್ನೂ ಕೆಲವು ಸಂಸ್ಥೆಗಳು ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅಕ್ಕಿ ಹಾಗೂ ಗೋಧಿ ವಿತರಣೆ ನಿಂತಿರಬಹುದು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ಹೇಳಿದರು.

    ಕಲ್ಯಾಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಪಡಿತರ ನೀಡುವುದನ್ನು ಏಕಾಏಕಿ ನಿಲ್ಲಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದ್ದು ಪ್ರಧಾನಿ ನರೇಂದ್ರ ಮೋದಿ ಮಠಕ್ಕೆ ಬಂದು ಹೋದ ನಂತರ ಪಡಿತರ ನಿಂತಿರುವುದು ಕಾಕತಾಳೀಯವಾಗಿದೆ.

    ಜಿಲ್ಲಾಡಳಿತದಿಂದ ಪತ್ರ: ಸಿದ್ಧಗಂಗಾ ಮಠದಲ್ಲಿ 7,359 ವಿದ್ಯಾರ್ಥಿಗಳಿಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಬ್ಸಿಡಿ ದರದಲ್ಲಿ ಪ್ರತಿ ತಿಂಗಳು ಅಕ್ಕಿ ಹಾಗೂ ಗೋಧಿ ವಿತರಣೆ ಮಾಡುತ್ತಿತ್ತು. ಆದರೆ, ಏಕಾಏಕಿ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಈ ಯೋಜನೆ ಮುಂದುವರಿಸಿ ಕಲ್ಯಾಣ ಸಂಸ್ಥೆಗಳಿಗೆ ನೀಡುವುದನ್ನು ಕೇಂದ್ರ ಸರ್ಕಾರ ತಡೆಹಿಡಿದಿರುವ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದಲ್ಲಿ ಸಮಸ್ಯೆ ತಲೆದೂರಿದೆ. ಈ ಬಗ್ಗೆ ಜಿಲ್ಲಾಡಳಿತ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದರೂ ಕೇಂದ್ರದ ಕಡೆ ಕೈತೋರಿಸಿ ಅಧಿಕಾರಿಗಳು ಸುಮ್ಮನಾಗಿ ರುವುದು ಮಠದ ಆವರಣದಲ್ಲಿ ಆತಂಕ ಮೂಡಿಸಿದೆ.

    ಕಲ್ಯಾಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ರಿಯಾಯಿತಿ ದರದ ಪಡಿತರ ನಿಲ್ಲಿಸಲಾಗಿದ್ದು ಸಿದ್ಧಗಂಗಾ ಮಠ ಸೇರಿ ತುಮಕೂರು ಜಿಲ್ಲೆಯ 15 ಸಂಸ್ಥೆಗಳಿಗೆ ಕಳೆದ ಮೂರು ತಿಂಗಳಿನಿಂದ ಅಕ್ಕಿ, ಗೋಧಿ ನೀಡಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ.
    ಎಂ.ಸಿ.ಶ್ರೀನಿವಾಸಯ್ಯ ಡಿಡಿ, ಆಹಾರ ಇಲಾಖೆ

    3 ತಿಂಗಳಿನಿಂದ ಅಕ್ಕಿ, ಗೋಧಿ ಬಂದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರೇಷನ್ ಪೂರೈಕೆ ಮುಂದುವರಿಸುವ ಭರವಸೆಯಿದೆ. ಮಠದಲ್ಲಿ ಸಾವಿರಾರು ಮಕ್ಕಳು ಓದುತ್ತಿರುವ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ.
    ಶ್ರೀ ಸಿದ್ದಲಿಂಗ ಸ್ವಾಮೀಜಿ
    ಮಠಾಧ್ಯಕ್ಷರು, ಸಿದ್ಧಗಂಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts