More

    ಅವಸಾನದತ್ತ ಬಲದಂಡೆ ನಾಲೆ !

    ಬೆಳಗಾವಿ: ಮಳೆಯಾಶ್ರಿತ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಆರಂಭಗೊಂಡಿದ್ದ ಘಟಪ್ರಭಾ ನದಿಯ ಬಲದಂಡೆ ಯೋಜನೆ ಕಾಮಗಾರಿ ಎರಡು ದಶಕ ಕಳೆದರೂ ಪೂರ್ಣಗೊಂಡಿಲ್ಲ. ಇತ್ತ ನಿರ್ಮಾಣಗೊಂಡಿರುವ ಕಾಲುವೆಗಳು ಇದೀಗ ಕಲ್ಲು, ಮಣ್ಣು, ಹಿಡ-ಗಂಟಿಗಳಿಂದ ಮುಚ್ಚಲ್ಪಟ್ಟಿವೆ.

    1975ರಲ್ಲೇ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಎರಡೂ ಯೋಜನೆ ಆರಂಭಗೊಂಡಿದೆ. ಆದರೆ, ಎರಡು ದಶಕ ಕಳೆದರೂ ಘಟಪ್ರಭಾ ಬಲದಂಡೆ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವು ಕಡೆ ಕಾಲುವೆ ಕಾಮಗಾರಿ ಪೂರ್ಣಗೊಂಡಿದ್ದರೂ ನಿರ್ವಹಣೆಯಿಲ್ಲದೆ ನಾಶಗೊಳ್ಳುತ್ತಿವೆ. ಹೀಗಾಗಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಪ್ರತಿವರ್ಷ ಕಾಲುವೆಗಳಿಗೆ ಹರಿ ಬಿಡುವ ನೀರು ದಡ ಸೇರುತ್ತಿಲ್ಲ. ಇದರಿಂದ ಜನ-ಜಾನುವಾರುಗಳು ನೀರಿನ ಸಮಸ್ಯೆ ಅನುಭವಿಸುವಂತಾಗುತ್ತಿದೆ.

    ಇದ್ದೂ ಇಲ್ಲದಂತಾದ ಸೌಲಭ್ಯ: ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣ ಕಾರ್ಯ 2000ನೇ ಇಸವಿಯಲ್ಲೇ ಆರಂಭವಾಗಿದೆ. 2020ನೇ ವರ್ಷ ಆಗಮಿಸಿದ್ದರೂ ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೆ, ಗೋಕಾಕ ತಾಲೂಕು ವ್ಯಾಪ್ತಿಯ 66 ಕಿ.ಮೀ. ಉದ್ದದ ಮುಖ್ಯ ಕಾಲುವೆ ಕಾಮಗಾರಿ ಪೂರ್ಣಗೊಂಡು 10 ವರ್ಷ ಕಳೆದಿದೆ. ಈ ಕಾಲುವೆಯ ನಿರ್ವಹಣೆ ಮತ್ತು ಕಾಲುವೆಗಳಿಗೆ ನೀರು ಬಿಡದ ಹಿನ್ನೆಲೆಯಲ್ಲಿ ಕಾಲುವೆಗಳು ಮುಚ್ಚಿವೆ.

    ಸರ್ಕಾರದ ನಿರ್ಲಕ್ಷೃ: ಹಿಡಕಲ್ ಜಲಾಶಯದಲ್ಲಿ 51 ಟಿಎಂಸಿ ನೀರು ಶೇಖರಣೆ ಮಾಡಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ 3,08,326 ಹೆಕ್ಟೇರ್ ಪ್ರದೇಶಕ್ಕೆ
    ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ಆರಂಭಿಸಲಾಗಿತ್ತು. 1975ರಲ್ಲಿ ಯೋಜನೆಗೆ 90.54 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಕೈಗೆೊಳ್ಳಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಆದರೆ, ನಂತರದ ಸರ್ಕಾರದ ನಿರ್ಲಕ್ಷೃ, ಯೋಜನೆ ವ್ಯಾಪ್ತಿಯ ರಾಜಕೀಯ ಪ್ರತಿನಿಧಿಗಳ ನಿರಾಸಕ್ತಿಯಿಂದ ಯೋಜನೆ ನನೆಗುದಿಗೆ ಬಿದ್ದಿತು.

    ದುಬಾರಿಯಾದ ಯೋಜನೆ: ಮಹತ್ವಪೂರ್ಣವಾದ ಈ ಯೋಜನೆಯ ಕಾಮಗಾರಿಗೆ ಮತ್ತೆ ಚಾಲನೆ ನೀಡಲು ಸರ್ಕಾರ ನಿರ್ಧರಿಸಿತು. ಯೋಜನೆಯ ವೆಚ್ಚ ಪುನರ್ ಪರಿಷ್ಕೃತಗೊಂಡು 2,185.616 ಕೋಟಿ (23 ಪಟ್ಟು) ರೂ.ಗೆ ಏರಿಕೆ ಕಂಡಿತು. ವೆಚ್ಚ ಹೆಚ್ಚಾದರೂ ಕಾಮಗಾರಿ ಪೂರ್ಣಗೊಳ್ಳುವ ಕನಸು ಕನಸಾಗಿಯೇ ಉಳಿಯಿತು. ಸದ್ಯ, ಜಲಾಶಯದಲ್ಲಿ 51 ಟಿಎಂಸಿ ನೀರು ಶೇಖರಣೆಯಾಗಿದೆ. ಆದರೆ, ಸಮರ್ಪಕವಾಗಿ ನೀರು ಬಳಕೆ ಮಾಡಿಕೊಳ್ಳಲು ಕಾಲುವೆಗಳೇ ಇಲ್ಲ ಎನ್ನುವುದು ಅನ್ನದಾತರ ಅಳಲು.

    ಪರಿಹಾರಕ್ಕಾಗಿ ರೈತರ ಅಲೆದಾಟ

    ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ 1949ರಲ್ಲಿ ಮೊದಲ ಹಂತದಲ್ಲಿ 45,562 ಹೆಕ್ಟೇರ್, 1955ರಲ್ಲಿ ಎರಡನೇ ಹಂತದಲ್ಲಿ 97,052 ಹೆಕ್ಟೇರ್ ಹಾಗೂ 1975ರ 3ನೇ ಹಂತದಲ್ಲಿ 1,68,712 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಸಾವಿರಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ಆದರೆ, ಇಷ್ಟು ವರ್ಷಗಳು ಗತಿಸಿದರೂ ಕೆಲ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗಲೂ ಪರಿಹಾರಕ್ಕಾಗಿ ಹಿಡಕಲ್ ಜಲಾಶಯ, ಭೂ ಸ್ವಾಧೀನ ಇಲಾಖೆ ಕಚೇರಿಗಳಿಗೆಜಮೀನು ಕೊಟ್ಟವರು ಅಲೆದಾಡುತ್ತಿದ್ದಾರೆ.

    ಘಟಪ್ರಭಾ ಬಲದಂಡೆ ಕಾಲುವೆಗಳ ದುರಸ್ತಿಗಾಗಿ ಡಿಪಿಆರ್ ರಚಿಸಲು ಟೆಂಡರ್ ಕರೆಯಲಾಗಿದೆ. ಕೆಲವೆಡೆ ನಿರ್ವಹಣೆ ಇಲ್ಲದೆ ಹಾಳಾಗಿದ್ದರಿಂದ ನೀರು ಪೋಲಾಗುತ್ತಿದೆ. ಅಲ್ಲದೆ, ಕೆಲ ರೈತರು ಕಾಲುವೆಗಳಿಗೆ ಪಂಪ್‌ಸೆಟ್ ಮತ್ತು ಪೈಪ್‌ಲೈನ್ ಅಳವಡಿಸಿರುವುದನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ.
    | ಅರವಿಂದ ಕಣಗಲಿ. ಮುಖ್ಯ ಅಭಿಯಂತ, ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯ.

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts