More

    ‘ಲಂಕೆ’ ಚಿತ್ರ ವಿಮರ್ಶೆ: ಕಥೆ ತ್ರೇತಾಯುಗದ್ದು, ಚಿತ್ರ ಕಲಿಯುಗದ್ದು …

    ಚಿತ್ರ: ಲಂಕೆ
    ನಿರ್ಮಾಣ: ಸುರೇಖಾ ರಾಮ್​ ಪ್ರಸಾದ್
    ನಿರ್ದೇಶನ: ರಾಮ್​ ಪ್ರಸಾದ್​
    ತಾರಾಗಣ: ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ತರ್​ ನರೋನ್ಹಾ, ಗಾಯತ್ರಿ ಜಯರಾಂ, ಸಂಚಾರಿ ವಿಜಯ್​, ಶೋಭರಾಜ್​, ಶರತ್​ ಲೋಹಿತಾಶ್ವ
    ಸ್ಟಾರ್​: 2.5

    ಒಂದು ಪಕ್ಕಾ ಕಮರ್ಷಿಯಲ್​ ಚಿತ್ರಕ್ಕೆ ಏನು ಬೇಕು? ಒಂದಿಷ್ಟು ಹಾಡುಗಳು, ಇನ್ನೊಂದಿಷ್ಟು ಮಾಸ್​ ಅಂಶಗಳು, ಮತ್ತೊಂದಿಷ್ಟು ಗ್ಲಾಮರ್​ … ಯಾವ್ಯಾವುದು, ಎಲ್ಲೆಲ್ಲಿ, ಎಷ್ಟೆಷ್ಟು ಹೊತ್ತಿಗೆ ಬರಬೇಕು ಎಂಬುದು ನಿರ್ಧಾರವಾಗಿಬಿಟ್ಟರೆ ಮಿಕ್ಕಿದ್ದೆಲ್ಲವೂ ಸಲೀಸು ಎಂಬ ಅಲಿಖಿತ ನಿಯಮ ಕನ್ನಡ ಚಿತ್ರರಂಗದಲ್ಲಿದೆ. ‘ಲಂಕೆ’ ಸಹ ಅದೇ ಸಾಲಿಗೆ ಸೇರುವ ಸಿನಿಮಾ.

    ಇಲ್ಲಿ ಮಾಸ್​ ಅಂಶಗಳಿವೆ, ಹಾಡುಗಳಿವೆ, ಹೊಡೆದಾಟ, ಬಿಲ್ಡಪ್​, ಗ್ಲಾಮರ್​ ಎಲ್ಲವೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ, ಹಲವು ಜನಪ್ರಿಯ ನಟ-ನಟಿಯರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇವೆಲ್ಲ ಸೇರಿಸಿ ಚಿತ್ರ ಮಾಡಿದ್ದಾರೆ ರಾಮ್​ಪ್ರಸಾದ್​.

    ತ್ರೇತಾಯುಗದ ರಾಮಾಯಣದ ಕಥೆಯನ್ನೇ ಅವರು ಕಲಿಯುಗಕ್ಕೆ ತಂದಿಟ್ಟಿದ್ದಾರೆ. ಅಲ್ಲಿ ರಾವಣ ಇದ್ದರೆ, ಇಲ್ಲೊಬ್ಬ ರಾವಣಿ ಇದ್ದಾಳೆ. ಮಂದಾರ ದೇವಿ (ಕಾವ್ಯಾ ಶೆಟ್ಟಿ) ಎಂಬ ಆಕೆ, ಸಮಾಜ ಸೇವಕಿಯ ಸೋಗಿನಲ್ಲಿ ವೇಶ್ಯಾವಟಿಕೆ ನಡೆಸುತ್ತಿರುತ್ತಾಳೆ. ಹೀಗಿರುವಾಗಲೇ ಹಲವು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭಸಿ ವಾಪಸ್ಸಾಗುತ್ತಾನೆ ರಾಮ್​ (ಯೋಗಿ). ಅವನಿಗೆ, ಪಾವನಿ (ಕೃಷಿ ತಾಪಂಡ) ಎಂಬ ಕರುಣಾಮಯಿ ಯುವತಿ ಸಿಗುತ್ತಾಳೆ. ಈ ಮಧ್ಯೆ, ಪಾವನಿಗೆ ಮಂದಾರ ದೇವಿ ನಿಜವಾದ ಮುಖ ಗೊತ್ತಾಗುತ್ತದೆ. ಆದರೆ, ಅದು ಹೊರಜಗತ್ತಿಗೆ ಹೇಳುವುದಕ್ಕೆ ಮುಂಚೆಯೇ, ಮಂದಾರ ಆಕೆಯನ್ನು ಗೃಹಬಂಧನದಲ್ಲಿಡುತ್ತಾಳೆ. ಇದು ರಾಮ್​ಗೆ ಗೊತ್ತಾಗುತ್ತದೆ. ರಾಮ್​, ಪಾವನಿಯನ್ನು ಮಂದಾರ ದೇವಿಯ ಕಪಿಮುಷ್ಠಿಯಿಂದ ಅಪಹರಿಸಿಕೊಂಡು ಹೋಗುತ್ತಾನೆ. ಸಾಕಷ್ಟು ತಿರುವುಗಳ ನಂತರ ಇಬ್ಬರೂ ಸಿಕ್ಕಿಬೀಳುತ್ತಾರೆ. ಅಲ್ಲಿಗೆ ಎಲ್ಲವೂ ಮುಗಿಯಿತು ಎಂದಲ್ಲ. ಕಥೆ ಅಲ್ಲಿಂದ ಗತಕಾಲಕ್ಕೆ ಹೋಗುತ್ತದೆ. ಅಲ್ಲೊಂದು ಫ್ಲಾಶ್​ಬ್ಯಾಕ್​ ತೆರೆದುಕೊಳ್ಳುತ್ತದೆ. ಆ ಫ್ಲಾಶ್​ಬ್ಯಾಕ್​ನಲ್ಲೇನಾಗುತ್ತದೆ ಮತ್ತು ವರ್ತಮಾನದಲ್ಲಿ ರಾಮ್​ ಆ ಲಂಕೆಯನ್ನು ಹೇಗೆ ಸುಟ್ಟು, ಪಾವನಿಯನ್ನು ಬಚಾವ್​ ಮಾಡುತ್ತಾನೆ ಎಂದು ಗೊತ್ತಾಗುವುದಕ್ಕೆ ಚಿತ್ರ ನೋಡಬೇಕು.

    ಇಲ್ಲೊಂದು ಕಥೆ ಎನ್ನುವುದಕ್ಕಿಂತ ಕಮರ್ಷಿಯಲ್​ ಚಿತ್ರಕ್ಕೆ ಏನೆಲ್ಲ ಬೇಕೋ ಅದನ್ನೆಲ್ಲ ಪೋಣಿಸಿಕೊಂಡು ಹೋಗಿದ್ದಾರೆ, ಚಿತ್ರದ ಕಥೆಯನ್ನೂ ಬರೆದಿರುವ ನಿರ್ದೇಶಕ ರಾಮ್​ ಪ್ರಸಾದ್​. ಮಾಸ್​ ಪ್ರೇಕ್ಷಕರೇ ಅವರ ಗುರಿ. ಅವರ ಖುಷಿಗೆ ಏನೆಲ್ಲಾ ಬೇಕೋ, ಅವೆಲ್ಲವನ್ನೂ ಈ ಚಿತ್ರದಲ್ಲಿ ಅವರು ತುಂಬಿದ್ದಾರೆ. ನೀವು ಮಾಸ್​ ಚಿತ್ರಗಳನ್ನು ಇಷ್ಟಪಡುವವರಲ್ಲದಿದ್ದರೆ ಅಥವಾ ಹೊಸದೇನನ್ನೋ ನಿರೀಕ್ಷಿಸುತ್ತಿದ್ದಾರೆ ಚಿತ್ರ ಅಷ್ಟಾಗಿ ರುಚಿಸದಿರಬಹುದು.

    ಮೊದಲೇ ಹೇಳಿದಂತೆ ಇದೊಂದು ಮಲ್ಟಿಸ್ಟಾರರ್​ ಚಿತ್ರ. ಆದರೆ, ಯಾರು ಸ್ಟಾರ್​ನಂತೆ ಮಿಂಚುತ್ತಾರೆ ಎಂದು ಹೇಳುವುದು ಕಷ್ಟ. ಯೋಗಿ ಬಹಳ ಸಲೀಸಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ಕಾವ್ಯಾ ಶೆಟ್ಟಿಗೆ ಬಹಳ ಸವಾಲಿನ ಪಾತ್ರ ಸಿಕ್ಕಿದೆ. ಅವರು ಈ ಅವಕಾಶವನ್ನು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಕೃಷಿ, ಎಸ್ತರ್​ಗೆ ಹೆಚ್ಚು ಕೆಲಸವಿಲ್ಲ. ಸಂಚಾರಿ ವಿಜಯ್​ ನಾಲ್ಕು ದೃಶ್ಯಗಳಲ್ಲಿ ನಟಿಸಿ ಮರೆಯಾಗುತ್ತಾರೆ. ಮಿಕ್ಕಂತೆ ಶೋಭರಾಜ್​, ಸುಚೇಂದ್ರ ಪ್ರಸಾದ್​, ಶರತ್​ ಲೋಹಿತಾಶ್ವ ಯಾರೂ ನೆನಪಿನಲ್ಲುಳಿಯುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts