More

    ಸಂಸ್ಕೃತ, ಇಂಗ್ಲಿಷ್, ಹಿಂದಿ ಅನಾವಶ್ಯಕವಾಗಿ ದ್ವೇಷ ಮಾಡಬೇಡಿ

    ಶಿವಮೊಗ್ಗ: ಜಗತ್ತಿನ ಎಲ್ಲ ಭಾಷೆಗಳು ಸಮಾನವಾಗಿದ್ದು ಯಾವುದು ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ ಎಂದು ಹಂಪಿ ಕನ್ನಡ ವಿವಿ ಕನ್ನಡ ಭಾಷಾ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಡಿ.ಪಾಂಡುರಂಗ ಬಾಬು ಹೇಳಿದರು.

    ಕುವೆಂಪು ರಂಗಮಂದಿರದಲ್ಲಿ ಯುವ ಬ್ರಿಗೇಡ್, ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ಭಾನುವಾರ ಭಿನ್ನ ಭಿನ್ನ ಶೈಲಿಗಳ ಕನ್ನಡದ ಸಮಾಗಮ, ಚರ್ಚೆ ಮತ್ತು ರಂಜನೆ ವಿಚಾರಗೋಷ್ಠಿಯಲ್ಲಿ ಭಾಷಾ ವಿಜ್ಞಾನ ಕುರಿತು ಮಾತನಾಡಿ, ಅಕ್ಷರ, ಲಿಪಿ ಇಲ್ಲದ ಭಾಷೆಗಳೂ ಇಂದು ಬೆಳೆಯುತ್ತಿವೆ. ಭಾಷಾಭಿಮಾನವನ್ನು ಕಾಲಕ್ಕೆ ತಕ್ಕಂತೆ ಬಳಕೆ ಮಾಡಬೇಕಾಗಿದೆ ಎಂದರು.

    ಕನ್ನಡ ಭಾಷೆ ಸಂಸ್ಕೃತವನ್ನು ಹೆಚ್ಚಾಗಿ ಆವರಿಸಿದೆ. ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳನ್ನು ಅನಾವಶ್ಯಕವಾಗಿ ದ್ವೇಷ ಮಾಡುವುದು ತಪ್ಪಾಗುತ್ತದೆ. ಆದರೆ ಅವುಗಳನ್ನು ಎಲ್ಲಿ? ಯಾವಾಗ? ಬಳಕೆ ಮಾಡಬೇಕೆಂಬುದನ್ನು ತಿಳಿದಿರಬೇಕು. ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡುವುದರಿಂದ ಕನ್ನಡ ಭಾಷಾಭಿಮಾನ ದೂರ ಆಗುವುದಿಲ್ಲ ಎಂದರು.

    ಹಂಪಿ ಕನ್ನಡ ವಿವಿಯ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಮಾಧವ ಪೆರಾಜೆ ಮಾತನಾಡಿ, ಭಾಷೆ ಎಂಬುದು ಕೇವಲ ಅಕ್ಷರಗಳ ಮಾಲಿಕೆ ಅಲ್ಲ. ಅದರಲ್ಲಿ ನಾಡಿನ ಘನತೆ, ಶ್ರಮ ಎಲ್ಲವೂ ಅಡಕವಾಗಿದೆ. ಭಾಷೆ ಮಿದುಳಿನ ಪ್ರಕ್ರಿಯೆ ಆಗಿದ್ದು ಎಲ್ಲ ಭಾಷೆಗಳೂ ಸಮಾನವಾಗಿವೆ ಎಂದರು.

    ಸಂಗೀತ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ಕಾಲ ಬದಲಾವಣೆ ಆದಂತೆ ಬಳಕೆ ಆಗದ ಭಾಷೆ ಜಾನಪದ ಆಗುತ್ತದೆ. ಮೂಲ ಕನ್ನಡದ ದ್ರಾವಿಡ ಪದಗಳನ್ನು ಇಂದಿಗೂ ಬಳಕೆ ಮಾಡದೆ ಬಿಟ್ಟಿದ್ದೇವೆ. ಕನ್ನಡದ ಜಾನಪದ ಭಾಷೆಯನ್ನು ಬಳಸಿ ಸಿನಿಮಾ ಹಾಡುಗಳನ್ನು ಬರೆದಾಗ ಕೆಲವರು ಈ ಬಗ್ಗೆ ಆಕ್ಷೇಪ ಮಾಡುತ್ತಾರೆ. ಅವು ಕನ್ನಡ ಗ್ರಾಮೀಣ ಭಾಷೆ ಎಂದು ಹೇಳಿದಾಗ ಸುಮ್ಮನಾಗುತ್ತಾರೆ ಎಂದರು.

    ಶಿವಮೊಗ್ಗದ ಬ್ಯಾಂಕ್ ಉದ್ಯೋಗಿ ಕಿರಣ್ ಹೆಗ್ಗಡೆ ಮಾತನಾಡಿ, ಭಾಷಾಂತರದಿಂದ ಭಾಷಾ ಸಂಪತ್ತು ಇರುವಾಗ ಬೆಳೆಸುವ ಬಗ್ಗೆ ಚಿಂತನೆ ಮಾಡಬೇಕೋ ಅಥವಾ ಬೇರೆ ಭಾಷೆಗಳಿಂದ ಪದಗಳನ್ನು ಎರವಲು ಪಡೆಯಬೇಕೋ ಎಂಬುದನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

    ಚಾಮರಾಜನಗರದ ದೈಹಿಕ ಶಿಕ್ಷಕ ಜಯಪ್ಪ ಮಾತನಾಡಿ, ಮೊದಲು ಭಾಷೆಯನ್ನು ನಾವು ಪ್ರೀತಿಸಬೇಕು. ಇದು ನಮ್ಮಲ್ಲಿರುವ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ. ನಮ್ಮ ಎದೆ ಸೀಳಿದರೂ ಕನ್ನಡವೇ ನಮ್ಮ ಉಸಿರಾಗಿರಬೇಕು ಎಂದು ಹೇಳಿದರು.

    ಬೀದರ್​ನ ಸಾಹಿತಿ ಶಿವಲಿಂಗ ಹೇಡೆ ಮಾತನಾಡಿ, ಭಾಷೆ ಸಂಸ್ಕೃತದ ವಕ್ತಾರ ಕೂಡ ಆಗಿದೆ. ಆಯಾ ಭಾಗದ ಭಾಷೆಯನ್ನು ಸಂಸ್ಕೃತ ಬಿಂಬಿಸುತ್ತದೆ. ನಮ್ಮ ಸಂಸ್ಕೃತಿಗೆ ತಕ್ಕಂತೆ ಭಾಷೆ ಇರುತ್ತದೆ. ಹಾಗಾಗಿ ನಾವೆಲ್ಲರೂ ಸಂಸ್ಕೃತಿಯ ಜತೆ ಜತೆಗೆ ಹೋಗಬೇಕಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts