More

  ಜಮೀನು ಮಾರಾಟ ಕೇಂದ್ರವಾದ ತಾಲೂಕು ಕಚೇರಿ

  ಮೂಡಿಗೆರೆ: ಸರ್ಕಾರಿ ಜಮೀನನ್ನು ಶ್ರೀಮಂತರಿಗೆ ಮಾರಾಟ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶನಿವಾರ ಸಿಪಿಐ ತಾಲೂಕು ಘಟಕದ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
  ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಬಿ.ಕೆ.ಲಕ್ಷ್ಮಣ್ ಕುಮಾರ್ ಮಾತನಾಡಿ, ಮೂಡಿಗೆರೆ ತಾಲೂಕು ಕಚೇರಿ ಶ್ರೀಮಂತರಿಗೆ ಸರ್ಕಾರಿ ಜಮೀನು ಮಾರಾಟ ಮಾಡುವ ಕೇಂದ್ರವಾಗಿದೆ. ಅಧಿಕಾರಿಗಳು ಜಮೀನು ಮಾರಾಟ ನಡೆಸುವ ವ್ಯಾಪಾರಿಗಳಾಗಿದ್ದಾರೆ. ತಾಲೂಕು ಕಚೇರಿ ಜಾನುವಾರುಗಳ ದೊಡ್ಡಿಯಂತಾಗಿದೆ. ಇಲ್ಲಿನ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
  ಸಾವಿರಾರು ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿ ಕೊಟ್ಟಿರುವ ಅಧಿಕಾರಿಗಳ ಪೈಕಿ ಈಗಾಗಲೇ ಮೂವರು ಕಂದಾಯ ಇಲಾಖೆ ಅಧಿಕಾರಿಗಳು ಜೈಲು ಪಾಲಾಗಿದ್ದಾರೆ. ಲೂಟಿ ಮಾಡಿ ಅಕ್ರಮವಾಗಿ ಖಾತೆ ಮಾಡಿರುವ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆಯಬೇಕು. ಕೃಷಿ, ಎಪಿಎಂಸಿ ಕಾಯ್ದೆ ರದ್ದುಗೊಳಿಸಿ ಪಿಟಿಸಿಎಲ್ ಕಾಯ್ದೆ ಜಾರಿಗೊಳಿಸಬೇಕು. ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ನೇರವಾಗಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.
  ಸಿಪಿಐ ತಾಲೂಕು ಕಾರ್ಯದರ್ಶಿ ಕೆಳಗೂರು ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ 40 ಸಾವಿರ ಮಂದಿ ನಿವೇಶನಕ್ಕಾಗಿ ವಿವಿಧ ಗ್ರಾಪಂಗಳ ಮೊರೆ ಹೋಗಿ 20 ವರ್ಷ ಕಳೆದರೂ ನಿವೇಶನ ನೀಡಿಲ್ಲ. ಸರ್ಕಾರಿ ಜಾಗ, ಸರ್ಕಾರಿ ಕೆರೆ, ಸ್ಮಶಾನ ಭೂಮಿ ಎಲ್ಲವನ್ನು ಶ್ರೀಮಂತರು ಕಬಳಿಸಿದ್ದಾರೆ. ಅದನ್ನು ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಪಿಐ ಕಳೆದ 10 ವರ್ಷದಿಂದ ಹೋರಾಟ ನಡೆಸಿದ್ದರಿಂದ ಸರ್ಕಾರ 15 ಮಂದಿ ತಹಸೀಲ್ದಾರ್‌ಗಳನ್ನು ನೇಮಿಸಿ ತನಿಖೆ ನಡೆಸುತ್ತಿದೆ. ಸರಿಯಾದ ಮಾರ್ಗದಲ್ಲಿ ತನಿಖೆ ನಡೆದರೆ ಬಹಳಷ್ಟು ಅಧಿಕಾರಿಗಳು ಜೈಲು ಪಾಲಾಗಲಿದ್ದಾರೆ ಎಂದರು.
  ಸುಬ್ರಹ್ಮಣ್ಯ, ತನಿಯಪ್ಪ, ಕೃಷ್ಣಪ್ಪ ಪೂಜಾರಿ, ವಿಠಲ, ಪ್ರಕಾಶ, ಜಗದೀಶ್ ಚಕ್ರವರ್ತಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts