More

    ಮಾ.1ಕ್ಕೆ “ಭೂ ಸುಧಾರಣೆ” ಸಂಭ್ರಮಾಚರಣೆ

    ಸಾಗರ: ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದು ಐವತ್ತು ವರ್ಷ ಕಳೆಯುತ್ತಿರುವ ಹಿನ್ನೆಲೆಯಲ್ಲಿ ರೈತ ಸಂಘದ ವತಿಯಿಂದ ಮಾ.1ರಂದು ಬೃಹತ್ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.

    ಎಪಿಎಂಸಿ ಆವರಣದಲ್ಲಿ ಸೋಮವಾರ ರೈತ ಸಂಘ(ಡಾ.ಎಚ್.ಗಣಪತಿಯಪ್ಪ ಬಣ)ದಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಂಘಕ್ಕೆ ನೂತನವಾಗಿ ಸೇರ್ಪಡೆಗೊಂಡವರನ್ನು ಸ್ವಾಗತಿಸಿ ಮಾತನಾಡಿದ ಅವರು, ರೈತ ಸಂಘ (ಗಣಪತಿಯಪ್ಪ ಬಣ) ಜಿಲ್ಲೆಯಲ್ಲಿ ಸದೃಢವಾಗಿ ಬೆಳೆಯುತ್ತಿದೆ. ಬೇರೆ ಬೇರೆ ಹೋರಾಟದ ಮೂಲಕ ರೈತರ ಧ್ವನಿಯಾಗಿ ಸಂಘ ಕೆಲಸ ಮಾಡುತ್ತಿರುವುದು ಎಲ್ಲರ ಮೆಚ್ಚುಗೆ ಪಡೆದಿದೆ. ಕೂಡ್ಲಿ ಮಠ ಪ್ರಕರಣದಲ್ಲಿ ರೈತ ಸಂಘಕ್ಕೆ ಆರಂಭಿಕ ಹಿನ್ನೆಡೆ ಎದುರಾಗಿದ್ದರೂ, ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಘ ಕೈ ಕಟ್ಟಿ ಕುಳಿತು ಕೊಳ್ಳುವುದಿಲ್ಲ. ಈಗಾಗಲೇ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.
    ರೈತ ಸಂಘಕ್ಕೆ ಸೇರ್ಪಡೆಗೊಳ್ಳುವವರು ಬದ್ಧತೆಯಿಂದ ಕೆಲಸ ಮಾಡಬೇಕು. ರೈತ ಸಮೂಹಕ್ಕೆ ಯಾವುದೇ ರೀತಿಯ ಅನ್ಯಾಯವಾದರೂ ರೈತ ಸಂಘ ಪ್ರತಿಭಟನೆ ಮಾಡುವ ಮೂಲಕ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತದೆ. ದೊಡ್ಡ ಮಟ್ಟದಲ್ಲಿ ರೈತ ಸಂಘಕ್ಕೆ ಜನ ಸೇರ್ಪಡೆಯಾಗುತ್ತಿರುವುದು ಆಶಾದಾಯಕ ಸಂಗತಿ ಎಂದು ತಿಳಿಸಿದರು.
    ನೂತನವಾಗಿ ಸೇರ್ಪಡೆಗೊಂಡ ಸಿಸಿಲ್ ಸೋಮಣ್ಣ ಮಾತನಾಡಿ, ರೈತ ಸಂಘದ ಗಣಪತಿಯಪ್ಪ ಬಣ ಅತ್ಯುತ್ಸಾಹದಿಂದ ರೈತರ ಪರವಾಗಿ ಕೆಲಸ ಮಾಡುತ್ತಿದೆ. ಇದರಿಂದ ಆಕರ್ಷಿತನಾಗಿ ರೈತ ಸಂಘ ಸೇರ್ಪಡೆಯಾಗಿದ್ದೇನೆ. ನಮ್ಮ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ಭೂಮಿ ಮತ್ತು ರೈತರ ಬಗ್ಗೆ ಅಪಾರ ಗೌರವ ಇರಿಸಿಕೊಂಡಿದ್ದರು. ಇದು ನನಗೆ ರೈತ ಸಂಘ ಸೇರಲು ಪ್ರೇರಣೆಯಾಗಿದೆ ಎಂದರು.
    ಪ್ರಮುಖರಾದ ಡಾ. ರಾಮಚಂದ್ರಪ್ಪ ಮನೆಘಟ್ಟ, ರಮೇಶ್ ಕೆಳದಿ, ಹೊಯ್ಸಳ ಗಣಪತಿಯಪ್ಪ, ಭದ್ರೇಶ್ ಬಾಳಗೋಡು, ಕುಮಾರ್ ಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts