More

    ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈ ಬಿಡಿ – ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪದಾಧಿಕಾರಿಗಳ ಒತ್ತಾಯ

    ಕೊಪ್ಪಳ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪದಾಧಿಕಾರಿಗಳು ನಗರದ ತಹಸೀಲ್ ಕಚೇರಿ ಮುಂದೆ ಮಂಗಳವಾರ ತಿದ್ದುಪಡಿ ಗೆಜೆಟ್ ಸುಟ್ಟು ಪ್ರತಿಭಟನೆ ನಡೆಸಿದರು.

    ಸರ್ಕಾರ ರೈತ ಪರವಾಗಿದ್ದ ಕಾಯ್ದೆಗೆ ತಿದ್ದುಪಡಿ ತಂದು ನಮ್ಮನ್ನು ಸಂಕಷ್ಟಕ್ಕೆ ದೂಡಿದೆ. ಕೃಷಿಯೇತರರು ಕೃಷಿ ಚಟುವಟಿಕೆಯಲ್ಲಿ ತೊಡಗಲಿ ಎಂದು ನೆಪ ಹೇಳುತ್ತಿದೆ. ಆದರೆ, ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತಿದ್ದುಪಡಿ ಮಾಡಲಾಗಿದೆ. ಕೆಐಎಡಿಬಿಯಿಂದ ಈಗಾಗಲೇ 12 ಸಾವಿರ ಎಕರೆ ಅಭಿವೃದ್ಧಿಪಡಿಸಲಾಗಿದೆ. 36 ಸಾವಿರ ಎಕರೆ ಹೆಚ್ಚುವರಿ ಭೂಮಿಯೂ ಸರ್ಕಾರದ ಬಳಿಯಿದೆ. ಕೃಷಿಯೇತರರು ಕನಿಷ್ಠ 54 ಎಕರೆ ಭೂಮಿ ಖರೀದಿಗೆ ಅವಕಾಶ ನೀಡಿದ್ದರೆ ಸಾಕಿತ್ತು. ಆದರೆ, 432 ಎಕರೆ ಖರೀದಿಗೆ ಅನುಮತಿ ನೀಡಿರುವ ಹಿಂದಿನ ಉದ್ದೇಶ ಸಾಮಾನ್ಯರಿಗೂ ಅರ್ಥವಾಗುತ್ತದೆ. ರಾಜಕಾರಣಿಗಳು, ಅಧಿಕಾರಿಗಳು ತಮ್ಮ ಕಪ್ಪು ಹಣದಿಂದ ಖರೀದಿಸಿದ ಬೇನಾಮಿ ಆಸ್ತಿಗಳನ್ನು ಸಕ್ರಮ ಮಾಡಿಕೊಳ್ಳಲು ತಿದ್ದುಪಡಿ ಮಾಡಲಾಗಿದೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದರು.

    ಕೂಡಲೇ ಸರ್ಕಾರ ತಿದ್ದುಪಡಿ ಆದೇಶ ಹಿಂಪಡೆಯಬೇಕು. ವಿಪಕ್ಷಗಳು ನೆಪ ಮಾತ್ರಕ್ಕೆ ಪ್ರತಿಭಟನೆ ಮಾಡದೇ ಬೀದಿಗಿಳಿದು ಹೋರಾಟ ಮಾಡಬೇಕು. ರೈತ ವಿರೋಧಿ ಸರ್ಕಾರವನ್ನು ಜನರು ಕಿತ್ತೊಗೆಯಬೇಕು. ಸರ್ಕಾರಕ್ಕೆ ನಿಜವಾಗಿಯೂ ರೈತಪರ ಕಾಳಜಿ ಇದ್ದಲ್ಲಿ ಕೂಡಲೇ ಕಾನೂನು ಹಿಂಪಡೆಯಲಿ. ಇಲ್ಲದಿದ್ದಲ್ಲಿ ಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಸಮಿತಿ ಎಚ್ಚರಿಸಿತು. ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ ಕಡ್ಡಿಪುಡಿ, ಹನುಮಂತಪ್ಪ ಗೊಂದಿ, ಶಂಕರಗೌಡ ಕುರಡಗಿ, ಶಾಂತಾಯ್ಯ ಹಿರೇಮಠ, ಗವಿಸಿದ್ದಯ್ಯ ಹಿರೇಮಠ, ವೆಂಕನಗೌಡ ಮೇಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts