ಅಂಕೋಲಾ ಬೇಲೆಕೇರಿ ಸಮೀಪ ಮೋದಿ ಕಾರ್ಯಕ್ರಮಕ್ಕೆ ಸಿದ್ಧತೆ ಶುರು

4
Bhoomi Pooja for land leveling work of PM Narendra Modi Program

ಅಂಕೋಲಾ: ಪ್ರಧಾನಿ ನರೇಂದ್ರ ಮೋದಿ ಅವರು ಮೇ.3 ರಂದು ಮಧ್ಯಾಹ್ನ 12 ಗಂಟೆಗೆ ಅಂಕೋಲಾಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಭೂಮಿ ಸಮತಟ್ಟು ಮಾಡುವ ಕಾರ್ಯವನ್ನು ಆರಂಭಿಸಲಾಗಿದೆ.
ಮೂಡಬಿದರೆಯಿಂದ ಅವರು ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿದ್ದು, ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸುಮಾರು 3 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು. ಮೋದಿ ಕಾರ್ಯಕ್ರಮಕ್ಕಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೇಲೆಕೇರಿ ಟೋಲ್ ಪ್ಲಾಜಾ ಪಕ್ಕ ನೌಕಾನೆಲೆಯ 17 ಎಕರೆ ಜಾಗದಲ್ಲಿ ಕಾರ್ಯಕ್ರಮಕ್ಕೆ ವೇದಿಕೆ, ಪ್ರೇಕ್ಷಕರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.

ಸಮೀಪದಲ್ಲೇ 3 ಪ್ರತ್ಯೇಕ ಹೆಲಿಪ್ಯಾಡ್‌ಗಳು ಹಾಗೂ ಪಾರ್ಕಿಂಗ್ ಜಾಗವನ್ನೂ ಸಿದ್ಧ ಮಾಡಲಾಗುತ್ತಿದೆ. ಭೂಮಿ ಪೂಜೆ ಮಾಡುವ ಮೂಲಕ ನೆಲ ಸಮತಟ್ಟು ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಏಕಕಾಲದಲ್ಲಿ ನಾಲ್ಕೈದು ಜೆಸಿಬಿಗಳು ನಿರಂತರ ಕಾರ್ಯ ಆರಂಭಿಸಿವೆ.

ವೇದಿಕೆಯ ಎದುರು ವಿಐಪಿ ಹಾಗೂ ವಿವಿಐಪಿಗಳಿಗೆ 50 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಅದರ ಹಿಂದೆ ಲಕ್ಷಾಂತರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. 20 ಆಸನಗಳನ್ನು ಹಿಡಿಸಬಹುದಾದಂಥ ದೊಡ್ಡ ವೇದಿಕೆ ಸಿದ್ಧ ಮಾಡಲಾಗುತ್ತಿದೆ.

10 ಸಾವಿರ ವಾಹನಗಳು ಬರುವ ನಿರೀಕ್ಷೆ ಇದ್ದು, ಬೇಲೆಕೇರಿ ರಸ್ತೆಯ ಪಕ್ಕ ಅದವುಗಳ ಪಾರ್ಕಿಂಗ್‌ಗೂ ಜಾಗ ಮಾಡಬೇಕಿದೆ. ಇನ್ನೆರಡು ದಿನದಲ್ಲಿ ನೆಲ ಸಮತಟ್ಟು ಮಾಡುವ ಕಾರ್ಯ ಆರಂಭವಾಗಲಿದ್ದು, ನಂತರ ಭದ್ರತಾ ಪರಿಶೀಲನೆಗಳಿಗೆ ಜಾಗವನ್ನು ಹಸ್ತಾಂತರ ಮಾಡಬೇಕಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಏ.30 ರಂದು ಮೋದಿ ರೋಡ್ ಶೋ


ಭೂಮಿ ಪೂಜೆ: ಶಾಸಕಿ ರೂಪಾಲಿ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಎಂಎಲ್‌ಸಿ ಗಣಪತಿ ಉಳ್ವೇಕರ್, ವಿಭಾಗೀಯ ಪ್ರಭಾರಿ ಎನ್.ಎಸ್.ಹೆಗಡೆ, ಜಿಪಂ ಮಾಜಿ ಸದಸ್ಯ ಜಗದೀಶ ನಾಯಕ, ಭಾಸ್ಕರ ನಾರ್ವೇಕರ, ರಾಜೇಂದ್ರ ನಾಯ್ಕ, ಸಂಜು ನಾಯ್ಕ ಹಾಗೂ ಇತರರು ಭೂಮಿ ಪೂಜೆಯ ಸಂದರ್ಭದಲ್ಲಿದ್ದರು.
ಜಿಲ್ಲಾಧಿಕಾರಿ ಭೇಟಿ:ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಹಾಗೂ ನೌಕಾಸೇನೆಯ ಅಽಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ತಯಾರಿಯ ಪರಿಶೀಲನೆ ನಡೆಸಿದರು. ಪಾರ್ಕಿಂಗ್ ಹಾಗೂ ಇತರ ಭದ್ರತೆಯ ಕುರಿತು ಇನ್ನಷ್ಟೇ ನಿರ್ಧಾರವಾಗಬೇಕಿದೆ ಎಂದು ಎಸ್‌ಪಿ ಎನ್.ವಿಷ್ಣುವರ್ಧನ ತಿಳಿಸಿದ್ದಾರೆ.



ರಕ್ಷಣಾ ಇಲಾಖೆ ಹಾಗೂ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅನುಮತಿ ಪಡೆದೇ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮೋದಿ ಅವರ ಆಗಮನ ಉತ್ತರ ಕನ್ನಡ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಗಲಿದೆ ಎಂಬ ವಿಶ್ವಾಸವಿದೆ. ಮೋದಿ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದೆ.
ವೆಂಕಟೇಶ ನಾಯಕ
ಬಿಜೆಪಿ ಜಿಲ್ಲಾಧ್ಯಕ್ಷ


ದೇವ ಮಾನವ ನರೇಂದ್ರ ಮೋದಿ ಅವರು ಉತ್ತರ ಕನ್ನಡ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸುತ್ತಿದ್ದಾರೆ ಎಂಬುದೇ ಹೆಮ್ಮೆಯ ಸಂಗತಿ. ಕಾಂಗ್ರೆಸ್ ಅವರ ಕಾರ್ಯಕ್ರಮ ತಡೆಯಲು ಸಾಕಷ್ಟು ಪ್ರಯತ್ನ ನಡೆಸಿತು. ಬಿಜೆಪಿ ನಾಯಕರ ಎಲ್ಲರ ಸಹಕಾರದಲ್ಲಿ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳು ಯಶಸ್ವಿಯಾಗಿ ನಡೆಯುತ್ತಿವೆ.
ರೂಪಾಲಿ ನಾಯ್ಕ
ಶಾಸಕಿ