More

    ಜಮೀನು ವಿವಾದ, ಓರ್ವನ ಕೊಲೆ

    ಖಾನಾಪುರ: ಆಸ್ತಿ ವಿವಾದಕ್ಕೆ ಸಂಬಂಧಿಸಿ ಓರ್ವನನ್ನು ಕೊಲೆ ಮಾಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಖಾನಾಪುರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಗುಂಜಿ ಗ್ರಾಮದ ನಿವಾಸಿ ಮಷ್ಣು ಧಾಕಲು ಝೆಂಡೆ (56) ಕೊಲೆಗೀಡಾದ ವ್ಯಕ್ತಿ. ಮಾರುತಿ ಮಹಾದೇವ ನಾವಗೇಕರ ಮತ್ತು ಇತರೆ ಇಬ್ಬರನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

    ಘಟನೆ ವಿವರ: ಗುಂಜಿ ಹೊರವಲಯದ ಕಿರಾವಳೆ ರಸ್ತೆ ಮಾರ್ಗದಲ್ಲಿ ಝೆಂಡೆ ಮತ್ತು ನಾವಗೇಕರ ಕುಟುಂಬಗಳ ಕೃಷಿ ಜಮೀನುಗಳು ಅಕ್ಕಪಕ್ಕದಲ್ಲಿವೆ. ಹಾಗಾಗಿ ಎರಡೂ ಕುಟುಂಬಗಳ ನಡುವೆ ಬಹಳ ದಿನಗಳಿಂದ ಜಮೀನಿನ ಗಡಿ ಮತ್ತು ಮಾಲೀಕತ್ವ ಸಂಬಂಧ ಕಲಹವಿತ್ತು. ಭಾನುವಾರ ಬೆಳಗ್ಗೆ ಕೃಷಿ ಕೆಲಸದ ನಿಮಿತ್ತ ತನ್ನ ಜಮೀನಿಗೆ ತೆರಳಿದ್ದ ಗುಂಜಿ ಗ್ರಾಮದ ನಿವಾಸಿ ಮಷ್ಣು ಧಾಕಲು ಝೆಂಡೆ ಮತ್ತು ಪಕ್ಕದ ಜಮೀನಿನ ಮಾಲೀಕ ಮಹಾದೇವ ನಾವಗೇಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅವರಿಬ್ಬರ ವಾಗ್ವಾದ ತಾರಕಕ್ಕೇರಿತ್ತು.

    ಇದೇ ಸಂದರ್ಭದಲ್ಲಿ ಮಹಾದೇವ ಅವರ ಪುತ್ರ ಮಾರುತಿ (26) ತನ್ನ ಬಳಿಯಿದ್ದ ಸಲಿಕೆಯಿಂದ ಮಷ್ಣು ಅವರ ತಲೆಗೆ ಬಲವಾಗಿ ಹೊಡೆದಿದ್ದರಿಂದ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ. ಮಾಹಿತಿ ಪಡೆದ ಖಾನಾಪುರ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದು, ಘಟನೆಗೆ ಕಾರಣರಾದ ಮೂವರನ್ನು ಬಂಧಿಸಿದ್ದಾರೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಷ್ಣು, ರೈಲ್ವೆ ಇಲಾಖೆಯ ನೌಕರರಾಗಿದ್ದರು. ಅಲ್ಲದೆ, ದಕ್ಷಿಣ-ಪಶ್ಚಿಮ ರೈಲ್ವೆ ಯೂನಿಯನ್ ಪದಾಧಿಕಾರಿಯೂ ಆಗಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರ ಮತ್ತು ಪುತ್ರಿ ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts