More

    ಭೂ ತಿದ್ದುಪಡಿ ಕಾಯ್ದೆ ನಿಷೇಧಿಸಿ

    ಸವದತ್ತಿ: ರಾಜ್ಯ ಸರ್ಕಾರ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ನಿಷೇಧಿಸಬೇಕು. ಲಾಕ್‌ಡೌನ್‌ದಿಂದ ಸಂಕಷ್ಟಕ್ಕೊಳಗಾದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರ ಹೇಳಿದರು.

    ರೈತರ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಉಪ ತಹಸೀಲ್ದಾರ್ ಆರ್.ಎಸ್. ನೇಸರಗಿ ಅವರ ಮೂಲಕ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

    ತಾಲೂಕಿನಲ್ಲಿ ಯೂರಿಯಾ ಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ್ಲ. ವ್ಯಾಪಾರಸ್ಥರು ಪ್ರತಿ ಯೂರಿಯಾ ಬ್ಯಾಗ್‌ಗೆ 480 ರೂ. ನಿಂದ 520 ರೂ.ವರೆಗೆ ಹಣ ಪಡೆಯುತ್ತಿದ್ದಾರೆ. ಅವರಿಗೆ ಬಿಲ್ ಕೇಳಿದರೂ ಕೊಡುತ್ತಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಎಲ್ಲ ಸಹಕಾರ ಸಂಘಗಳ ಸೊಸೈಟಿಯಲ್ಲಿ ಸಮರ್ಪಕವಾಗಿ ಯೂರಿಯಾ ಸಿಗುವಂತೆ ನೋಡಿಕೊಳ್ಳಬೇಕು. ತಾಲೂಕಿನಲ್ಲಿ ಈಗಾಗಲೇ ಹೆಸರು ಬೆಳೆ ಕಟಾವು ಆಗಿದ್ದು ಮಾರ್ಕೆಟ್‌ನಲ್ಲಿ ಸದರಿ ಬೆಳೆಗೆ ಬೆಲೆ ಇಲ್ಲದ ಕಾರಣ ಸರ್ಕಾರ ನಿಗದಿಪಡಿಸಿದ ದರದಲ್ಲಿ ಖರೀದಿ ಮಾಡಲು ಕೇಂದ್ರವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆಯಬೇಕು ಎಂದರು.

    ಸರ್ಕಾರವು ರೈತರ ಎಲ್ಲ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ಬೆಳೆಹಾನಿ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಅತಿ ಶೀಘ್ರದಲ್ಲಿ ಪರಿಹಾರ ಹಣ ಜಮೆ ಮಾಡಬೇಕು. ಹಿಂದಿನ ಸಾಲಿನಲ್ಲಿ ಆದ ಅತಿವೃಷ್ಟಿಗೆ ವಾಸದ ಮನೆಗಳು ಸಂಪೂರ್ಣ ಕುಸಿದು ಬಿದ್ದಿದ್ದು ಮನೆಗಳಿಗೆ ಪುನರ್ ಸರ್ವೇ ಮಾಡಿ ಎಲ್ಲ ಫಲಾನುಭವಿಗಳಿಗೆ ಹಣ ಮಂಜೂರು ಮಾಡಬೇಕು. ಮಹಿಳೆಯರು ಮೈಕ್ರೋ ಫೈನಾನ್ಸ್ ಹಾಗೂ ಬ್ಯಾಂಕ್‌ನಲ್ಲಿ ಮತ್ತು ಖಾಸಗಿ ಫೈನಾನ್ಸ್‌ನಲ್ಲಿ ಮಾಡಿಕೊಂಡಂತಹ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

    ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬೆನಕಟ್ಟಿ, ಸರೋಜಾ ಮುಕ್ಕಣ್ಣವರ, ಪಾರ್ವತಿ ಯಮನೂರ, ಸುರೇಖಾ ಕಾಮಾಜೀ, ಸದರಸಾಬ ಪಟ್ಟಣ, ಎಸ್.ಎಂ. ಕರೋಶಿ, ಚೂನಪ್ಪ ನಿಂಗಣ್ಣವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts