More

    ಭೂ ಕಾಯ್ದೆ ತಿದ್ದುಪಡಿ ಕೈಬಿಡಿ

    ಬೆಳಗಾವಿ: ಭೂ ಕಾಯ್ದೆ ತಿದ್ದುಪಡಿ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ನಗರದ ಚನ್ನಮ್ಮ ವೃತ್ತದಿಂದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕಚೇರಿಯವರೆಗೆ ಶುಕ್ರವಾರ ಪ್ರತಿಭಟನಾ ರ‌್ಯಾಲಿ ನಡೆಸಿದರು. ಬಳಿಕ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.

    ಭೂ ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ಉದ್ಯಮಿಗಳಿಗೆ, ಶ್ರೀಮಂತರಿಗೆ ರೈತರ ಜಮೀನು ಖರೀದಿಸುವುದು ಸುಲಭವಾಗಲಿದೆ. ರಾಜಕಾರಣಿಗಳು, ಬಲಾಢ್ಯರು ದಬ್ಬಾಳಿಕೆ ನಡೆಸಿ ರೈತರ ಕೃಷಿ ಭೂಮಿ ಕಸಿದುಕೊಳ್ಳುತ್ತಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಅನ್ನದಾತರು ಭೂಮಿ ಕಳೆದುಕೊಂಡು ಬೀದಿ ಪಾಲಾಗುವಂತಾಗುತ್ತದೆ. ಹೀಗಾಗಿ ಸರ್ಕಾರ ತಿದ್ದುಪಡಿಯನ್ನು ಕೈ ಬಿಡಬೇಕು ಎಂದು ಕೇಂದ್ರ ಸಚಿವರ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿದರು.

    ಉದ್ಯಮಿಗಳಿಗಾಗಿ ರೈತರ ಕಡೆಗಣನೆ: ರೈತರ ಭೂಮಿ ಖರೀದಿಸುವ ಧನವಂತರು ಫಲವತ್ತಾದ ಕೃಷಿ ಜಮೀನುಗಳಲ್ಲಿ ಕೈಗಾರಿಕೆ ಆರಂಭಿಸುತ್ತಾರೆ. ಇದರಿಂದಾಗಿ ರೈತರು ತಮ್ಮ ಊರು ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ರಾಜ್ಯ ಸರ್ಕಾರವು ಉದ್ಯಮಿಗಳು ಹಾಗೂ ಬಲಾಢ್ಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಭೂ ಕಾಯ್ದೆ ತಿದ್ದುಪಡಿ ಮಾಡುತ್ತಿದೆ. ಇದರಿಂದ ಅನ್ನದಾತರಿಗೆ ಯಾವುದೇ ಪ್ರಯೋಜನವಿಲ್ಲ. ಈಗಾಗಲೇ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ರೈತರನ್ನು ಮಾರುಕಟ್ಟೆ
    ವ್ಯವಸ್ಥೆಯಿಂದ ಹೊರ ಹಾಕಲಾಗಿದೆ. ಇದೀಗ ಕೃಷಿ ಭೂಮಿಯಿಂದ ರೈತರನ್ನು ಹೊರ ಹಾಕಲು ಸರ್ಕಾರ ಹುನ್ನಾರ ಮಾಡುತ್ತಿದೆ ಎಂದು ದೂರಿದರು.

    ರೈತ ಮುಖಂಡ ಚೂನಪ್ಪ ಪೂಜೇರಿ, ಅಶೋಕ ಯಮಕನಮರಡಿ, ರಾಘವೇಂದ್ರ ನಾಯಕ, ಜಯಶ್ರೀ ಗುರಣ್ಣವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ತೀವ್ರ ಹೋರಾಟದ ಎಚ್ಚರಿಕೆ: ಈಗಾಗಲೇ ಉಭಯ ಸರ್ಕಾರಗಳು ಭೂ ಸುಧಾರಣೆ ಮತ್ತು ರೈತರ ಅಭಿವೃದ್ಧಿ ಹೆಸರಿನಲ್ಲಿ ಜಾರಿಗೆ ತಂದಿರುವ ಕಾನೂನುಗಳು ಅನ್ನದಾತರಿಗೆ ಮಾರಕವಾಗಿವೆ. 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿರುವ ಸರ್ಕಾರ ಈವರೆಗೂ ಯಾವುದೇ ಬೆಳೆ ಖರೀದಿ ಮಾಡುತ್ತಿಲ್ಲ. ಇದರಿಂದಾಗಿ ಮಧ್ಯವರ್ತಿಗಳು ಅಗ್ಗದ ದರದಲ್ಲಿ ರೈತರಲ್ಲಿರುವ ಬೆಳೆಗಳನ್ನು ಖರೀದಿಸತೊಡಗಿದ್ದಾರೆ. ವ್ಯಾಪಾರಿಗಳ ಅನುಕೂಲಕ್ಕಾಗಿಯೇ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅದೇ ಮಾದರಿಯಲ್ಲಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಭೂ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದು ಸರಿಯಾದುದಲ್ಲ. ಸರ್ಕಾರ ತನ್ನ ನಿರ್ಧಾರ ವಾಪಸ್ ಪಡೆಯದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾನಿರತ ರೈತರು ಎಚ್ಚರಿಕೆ ನೀಡಿದರು.

    ರೈತರ ಹಿತ ಕಾಯಲು ಸರ್ಕಾರ ಬದ್ಧ

    ಉಭಯ ಸರ್ಕಾರಗಳು ರೈತರಿಗಿರುವ ಸಮಸ್ಯೆ ನಿವಾರಿಸಲು ಸ್ಪಂದಿಸುತ್ತಿವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರೈತರ ಹಿತ ಕಾಯಲು ಕೇಂದ್ರ ಸರ್ಕಾರ ‘ಕಿಸಾನ್ ರೈಲು’ ಸೇರಿದಂತೆ ವಿವಿಧ ಯೋಜನೆ ಜಾರಿಗೆ ತಂದಿದೆ. ರೈತರ ಪರವಾಗಿ ಸರ್ಕಾರಗಳು ಕೆಲಸ ಮಾಡುತ್ತಿವೆ. ಹೀಗಾಗಿ ರೈತರು ಅನವಶ್ಯಕವಾಗಿ ಪ್ರತಿಭಟನೆಗೆ ಇಳಿಯದೆ, ಆತ್ಮನಿರ್ಭರ ಯೋಜನೆಯಡಿ ಕೆಲಸ ಮಾಡಬೇಕಿದೆ. ಭೂ ಸುಧಾರಣೆ ಕಾಯ್ದೆಯನ್ನು ತಜ್ಞರಿಂದ ಪರಿಶೀಲಿಸಿದ ಬಳಿಕವೇ ರಾಜ್ಯ ಸರ್ಕಾರ ಭೂ ಕಾಯ್ದೆ ತಿದ್ದುಪಡಿ ಮಾಡಿ ಜಾರಿಗೆ ತಂದಿದೆ. ಆದರೂ ರೈತರಿಗೆ ಮಾರಕವಾಗುವ ಸಮಸ್ಯೆಗಳು ಕಂಡುಬಂದರೆ ಸಿಎಂ ಜತೆ ಚರ್ಚಿಸಿ, ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts