More

    ಭೂ ಕಾಯ್ದೆ ತಿದ್ದುಪಡಿಗೆ ವಿರೋಧ

    ಬೆಳಗಾವಿ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಮಂಗಳವಾರ ಸಾಂಬ್ರಾ ವಿಮಾನ ನಿಲ್ದಾಣದ ಮುಖ್ಯ ಪ್ರವೇಶದ್ವಾರ ಮತ್ತು ಬಾಗಲಕೋಟೆ- ಬೆಳಗಾವಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.

    ಇದಕ್ಕೂ ಮೊದಲು ಸಾಂಬ್ರಾ ವಿಮಾನ ನಿಲ್ದಾಣದ ಸಭಾಂಗಣದಲ್ಲಿ ಸಚಿವರು, ಶಾಸಕರು, ಸಂಸದರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರೈತ ಸಂಘಟನೆ, ಕನ್ನಡ ಸಂಘಟನೆಗಳ ಸದಸ್ಯರು ಮನವಿ ಸಲ್ಲಿಸಿದರೂ, ಮುಖ್ಯಮಂತ್ರಿಯವರು ಸಮರ್ಪಕವಾಗಿ ಸ್ಪಂದಿಸಲಿಲ್ಲ ಎಂದು ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.

    ಭೂ ಕಾಯ್ದೆ ತಿದ್ದುಪಡಿಯಿಂದ ಉದ್ಯಮಿಗಳಿಗೆ, ಶ್ರೀಮಂತರಿಗೆ ರೈತರ ಜಮೀನು ಖರೀದಿಸುವುದು ಸುಲಭವಾಗಲಿದೆ. ರಾಜಕಾರಣಿಗಳು, ಶಕ್ತಿವಂತರು ದಬ್ಬಾಳಿಕೆ ನಡೆಸಿ ಕೃಷಿ ಭೂಮಿ ತೆಗೆದುಕೊಳ್ಳುತ್ತಾರೆ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ರೈತರು ಭೂಮಿ ಕಳೆದುಕೊಂಡು ಬೀದಿ ಪಾಲಾಗುತ್ತಾರೆ. ಅಲ್ಲದೆ ಉದ್ಯಮಿಗಳು ಫಲವತ್ತಾದ ಕೃಷಿ ಜಮೀನುಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸುತ್ತಾರೆ. ಪರಿಣಾಮ ರೈತರು ಊರುಗಳನ್ನು ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯ ಸರ್ಕಾರವು ಉದ್ಯಮಿದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಭೂ ಕಾಯ್ದೆ ತಿದ್ದುಪಡಿ ಮಾಡುತ್ತಿದೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನ ಇಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ರೈತರನ್ನು ಮಾರುಕಟ್ಟೆ ವ್ಯವಸ್ಥೆಯಿಂದ ಹೊರ ಹಾಕಲಾಗಿದೆ. ಇದೀಗ ಕೃಷಿ ಭೂಮಿಯಿಂದ ರೈತರನ್ನು ಹೊರ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು. ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿಯಿಂದ ಹಾನಿ ಅನುಭವಿಸಿದ ಸಂತ್ರಸ್ತರಿಗೆ ಇನ್ನೂ ಪರಿಹಾರ ನೀಡಿಲ್ಲ. ಪರಿಣಾಮ ರೈತರು, ಸಂತ್ರಸ್ತರು ನಾನಾ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ.

    ಇಂತಹ ಸಂದರ್ಭದಲ್ಲಿ ಮತ್ತೆ ಸಂಭವಿಸಿದ ಅತಿವೃಷ್ಟಿಯಿಂದ ರೈತ ಸಮುದಾಯ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಬೆಳೆಯನ್ನು ಖರೀದಿ ಮಾಡಿಲ್ಲ ಎಂದು ದೂರಿದರು. ರೈತ ಮುಖಂಡರಾದ ಚೂನಪ್ಪ ಪೂಜೇರಿ, ರಾಘವೇಂದ್ರ ನಾಯಕ, ಜಯಶ್ರೀ ಗುರಣ್ಣವರ ಸೇರಿದಂತೆ ಸಂಘಟನೆಯ ಇತರ ಪದಾಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts