More

    ಸರ್ಕಾರದಿಂದಲೇ ಶಿವಾಜಿ ಪ್ರತಿಮೆ ಅನಾವರಣ; ಹಠ ಬಿಡದ ರಮೇಶ ಜಾರಕಿಹೊಳಿ

    ಜಿದ್ದಿಗೆ ಕಾರಣವಾಗಿದ್ದ ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಲಕ್ಷ್ಮೀ ಹೆಬ್ಬಾಳಕರ ಗೈರು

    ಬೆಳಗಾವಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಧ್ಯೆ ರಾಜಕೀಯ ಸಮರಕ್ಕೆ ಕಾರಣವಾಗಿದ್ದ ರಾಜಹಂಸಗಡ ಕೋಟೆಯಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಕೊನೆಗೂ ಸರ್ಕಾರದ ವತಿಯಿಂದ ಗುರುವಾರ ಅದ್ಧೂರಿಯಾಗಿ ಜರುಗಿತು. ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರೇ ಗೈರಾದರು.

    ಲಕ್ಷ್ಮೀ ಹೆಬ್ಬಾಳಕರ ಮತ್ತು ಅವರ ಬದ್ಧ ರಾಜಕೀಯ ವಿರೋಧಿ ರಮೇಶ್ ಜಾರಕಿಹೊಳಿ ಅವರ ನಡುವಿನ ಜಟಾಪಟಿಯಾಗಿ ಪರಿವರ್ತನೆಯಾಗಿದ್ದ ಕಾರ್ಯಕ್ರಮವನ್ನು ತಾನು ಹೇಳಿದಂತೆ ರಮೇಶ ಜಾರಕಿಹೊಳಿ ಸರ್ಕಾರದಿಂದ ಉದ್ಘಾಟನೆ ಮಾಡಿಸಿದ್ದಾರೆ. ಈ ನಡುವೆ, ಮಾರ್ಚ್ 5ರಂದು ಪ್ರತಿಮೆ ಲೋಕಾರ್ಪಣೆ ಮಾಡುವುದಾಗಿ ಲಕ್ಷ್ಮೀ ಹೆಬ್ಬಾಳಕರ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್‌ನ ಘಟಾನುಘಟಿ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಈಗ ರಾಜಹಂಸಗಡ ಕೋಟೆಗೆ ತೆರಳುವ ಮಾರ್ಗದಲ್ಲಿ ದೊಡ್ಡ ಮಟ್ಟದಲ್ಲಿ ಪ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಪೈಪೋಟಿಗೆ ಬಿದ್ದ ರೀತಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ, ಸಂಜಯ್ ಪಾಟೀಲ್, ರಮೇಶ ಜಾರಕಿಹೊಳಿ ಬೆಂಬಲಿಗರು ಪ್ಲೆಕ್ಸ್ ಹಾಕಿದ್ದಾರೆ. ಬಿಜೆಪಿ ಮುಖಂಡರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರ ಪ್ಲೆಕ್ಸ್ ಹೆಚ್ಚು ರಾರಾಜಿಸುತ್ತಿವೆ.

    ಪ್ರತಿಮೆ ಅನಾವರಣಗೊಳಿಸಿದ ಸಿಎಂ:
    ಸರ್ಕಾರದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜಹಂಸಗಡದ ಶಿವಾಜಿ ಮೂರ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂತಹ ಅದ್ಭುತ ಜಾಗ ಇರುವುದು ನನಗೆ ಗೊತ್ತೇ ಇರಲಿಲ್ಲ. ಕೆಲವರ ಆಡಳಿತಕ್ಕೆ ಸಿಕ್ಕು ಅಭಿವೃದ್ಧಿ ಮರಿಚಿಕೆಯಾಗಿತ್ತು. ಈ ಕೋಟೆಯನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದರು.

    ರಾಜಹಂಸಗಡ ಕೋಟೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿಯಾಗಿ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು. ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಪೂರಕವಾಗಿ ಸಮುದಾಯ ಭವನ, ವಿಶ್ರಾಂತಿ ಗೃಹ ನಿರ್ಮಾಣ ಜತೆಗೆ ಇತರ ಮೂಲಭೂತ ಸೌಕರ್ಯ ಕಲ್ಪಿಸಿ, ಪ್ರವಾಸಿ ತಾಣವನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದರು. ರಾಜಹಂಸಗಡ ಕೋಟೆಯ ಅಭಿವೃದ್ಧಿಗೆ 2008ರಲ್ಲಿ ಸಿಎಂ ಯಡಿಯೂರಪ್ಪ ಅವರು 14 ಕೋಟಿ ರೂ. ಮಂಜೂರು ಮಾಡಿದರು. ಜನಾರ್ದನ ರೆಡ್ಡಿ ಅವರು ಅಂದಿನ ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದರು. ಶಾಸಕ ಸಂಜಯ ಪಾಟೀಲ ಅವರ ಪ್ರಯತ್ನದ ಫಲವಾಗಿ ಕೋಟೆಯ ಆವರಣದಲ್ಲಿ ಮೂಲಸೌಕರ್ಯ ಒದಗಿಸಲು ಅನುದಾನ ಬಿಡುಗಡೆ ಮಾಡಲಾಗಿತ್ತು ಎಂದರು.

    ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲ ಅಂಗಡಿ, ಶಾಸಕರಾದ ರಮೇಶ ಜಾರಕಿಹೊಳಿ, ಅನೀಲ ಬೆನಕೆ, ಅಭಯ ಪಾಟೀಲ, ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ವಿದ್ಯಾವತಿ ಭಜಂತ್ರಿ, ಬಸವರಾಜ ಕುಪ್ಪಸಗೌಡರ ಇದ್ದರು. ರಾಜಹಂಸಗಡದ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಕಾಂಗ್ರೆಸ್ ನಯಾ ಪೈಸೆ ಬಿಡುಗಡೆ ಮಾಡಿಲ್ಲ
    ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಕಾಂಗ್ರೆಸ್ ನೈಯಾಪೈಸೆ ಬಿಡುಗಡೆ ಮಾಡಿದ್ದರೆ ಹೇಳಲಿ ಅವರ ಕೈಯಿಂದಲೇ ಮತ್ತೋಮ್ಮೆ ಪ್ರತಿಮೆ ಅನಾವರಣ ಮಾಡಿಸುತ್ತೇವೆಂದು ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013ರಿಂದ 2018ರವರೆಗೆ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರ ಸರ್ಕಾರ ಆಡಳಿತದಲ್ಲಿತ್ತು. ಆ ಅವಧಿಯಲ್ಲಿ ಕೋಟೆ ಅಭಿವೃದ್ಧಿಗೆ ನೈಯಾಪೈಸೆ ಹಣ ಕೊಟ್ಟಿಲ್ಲ. ಕೋಟೆ ಅಭಿವೃದ್ಧಿಯನ್ನು ನಾವೇ ಮಾಡಿದ್ದೇವೆ. 50 ಲಕ್ಷ ರೂ. ಬಿಡುಗಡೆ ಮಾಡಿದ್ದೇವೆ. ಇದು ಸರ್ಕಾರದ ಯೋಜನೆ ಹೀಗಾಗಿ ಉದ್ಘಾಟನೆ ದಿನಾಂಕ ನಿಗದಿ ಮಾಡುವವರು ನಾವು. ನಿಗದಿಯಂತೆ ಪುತ್ಥಳಿ ಅನಾವರಣ ಮಾಡಿದ್ದೇವೆ. ಕಾಂಗ್ರೆಸ್ ಅಂದರೆ ಸುಳ್ಳು ಅನ್ನುವುದು ಸರ್ವವಿಧಿತವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts