More

    ಲಕ್ಷ್ಮಣ ಸವದಿ ಮನಸ್ಸು ಬಿಜೆಪಿ ಕಡೆ: ವಿಜಯೇಂದ್ರ ಹೇಳಿಕೆ

    ಶಿವಮೊಗ್ಗ: ಶಾಸಕ ಲಕ್ಷ್ಮಣ ಸವದಿ ಕಾಂಗ್ರೆಸ್‌ನಲ್ಲಿದ್ದರೂ ಅವರ ಮನಸ್ಸು ಮಾತ್ರ ಬಿಜೆಪಿಯಲ್ಲಿದೆ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ರಾಜಕೀಯದಲ್ಲಿ ಘರ್ ವಾಪ್ಸಿ ಮುಂದುವರಿಯುವ ಸುಳಿವು ನೀಡಿದ್ದಾರೆ.

    ನಾವು ಯಾರನ್ನೂ ಒತ್ತಾಯಪೂರ್ವಕವಾಗಿ ಪಕ್ಷಕ್ಕೆ ಆಹ್ವಾನಿಸುತ್ತಿಲ್ಲ. ದೇಶದ ಹಿತ ಬಯಸಿ ಯಾರು ಬಿಜೆಪಿಗೆ ಬಂದರೂ ಅವರಿಗೆ ಸ್ವಾಗತವಿದೆ. ಬಿಜೆಪಿಯಿಂದ ಅನೇಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ಆ ಪಕ್ಷದ ನಾಯಕರೇ ಹೇಳುತ್ತಿದ್ದರು. ಮೊದಲು ಅವರ ಪಕ್ಷದಲ್ಲಿರುವವರನ್ನು ಅಲ್ಲಿಯೇ ಉಳಿಸಿಕೊಳ್ಳಲಿ ಎಂದು ಸವಾಲೆಸೆದಿದ್ದಾರೆ.
    ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಬಿಜೆಪಿಗೆ ಮರಳಿದ್ದರಿಂದ ಕಾಂಗ್ರೆಸ್ ನಾಯಕರಿಗೆ ಆಘಾತವಾಗಿದೆ. ಗುಪ್ತಚರ ಇಲಾಖೆ ವಿಫಲವಾಗಿದೆಯೇ ಎಂಬ ಆತಂಕ ರಾಜ್ಯ ಸರ್ಕಾರಕ್ಕಿದೆ. ಕಾಂಗ್ರೆಸ್‌ನವರು ಅತಿಯಾದ ಭ್ರಮೆ ಹಾಗೂ ಆತ್ಮವಿಶ್ವಾಸದಲ್ಲಿದ್ದರು. ಈಗ ಅವರು ಶಾಕ್‌ಗೆ ಒಳಗಾಗಿದ್ದಾರೆ ಎಂದರು.
    ಶೆಟ್ಟರ್ ಯಾವ ಬೇಡಿಕೆಯೂ ಇಲ್ಲದೆ ಪಕ್ಷಕ್ಕೆ ಮರಳಿದ್ದಾರೆ. ನಾವೂ ಅವರಿಗೆ ಯಾವುದೇ ಭರವಸೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲೇ ಇದ್ದಾರೆ. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಅವರ ಮನಸ್ಸಿಗೆ ಘಾಸಿಯಾಗಿದೆ. ಹೀಗಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
    ಮಧುಗೆ ಮುಂದೆ ತಕ್ಕ ಉತ್ತರ:ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದ ಬೆದರಿಕೆಯೊಡ್ಡಿ ಶೆಟ್ಟರ್ ಅವರನ್ನು ಮತ್ತೆ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂಬ ಸಚಿವ ಮಧು ಬಂಗಾರಪ್ಪ ಹೇಳಿಕೆ ಬಗ್ಗೆ ಮಾತನಾಡಿದ ವಿಜಯೇಂದ್ರ, ಅವರ (ಮಧು ಬಂಗಾರಪ್ಪ) ಎಲ್ಲ ನಡೆ ಗಮನಿಸುತ್ತಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರ ನೀಡಲಾಗುವುದು. ಈಗ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts