More

    ಆದಿಚುಂಚನಗಿರಿ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಸಂಭ್ರಮ

    ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದ ಇತಿಹಾಸ ಪ್ರಸಿದ್ಧ ಧಾರ್ಮಿಕ ಆಚರಣೆಯಲ್ಲಿ ಪ್ರಮುಖವಾದ ಜ್ವಾಲಾಪೀಠಾರೋಹಣವು ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ವಿಜೃಂಭಣೆಯಿಂದ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಉರಿಗದ್ದಿಗೆಯಲ್ಲಿ ಆಸೀನರಾಗಿ ಭಕ್ತರಿಗೆ ದರ್ಶನ ನೀಡಿದರು.

    ಜ್ವಾಲಾಪೀಠಾರೋಹಣಕ್ಕೂ ಮೊದಲು ಶ್ರೀಗಳು ಕ್ಷೇತ್ರದ ಕಾಲಭೈರವೇಶ್ವರಸ್ವಾಮಿ, ಚಂದ್ರಮೌಳೇಶ್ವರಸ್ವಾಮಿ, ಗಂಗಾಧರೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮೆರವಣಿಗೆಯಲ್ಲಿ ಸಾಗಿ ಬಂದು ಶ್ರೀಮಠದ ಸಂಪ್ರದಾಯದಂತೆ ಜ್ವಾಲಾಪೀಠಾರೋಹಣ ನೆರವೇರಿಸಿದರು. ಶ್ರೀಗಳು ಸರ್ವಾಲಂಕೃತ ಸಿದ್ಧಸಿಂಹಾಸನದ ಮೇಲೆ ಆಸೀನರಾಗಿ ಭಕ್ತರಿಗೆ ದರ್ಶನ ನೀಡಿದರು. ಈ ಸಂದರ್ಭದಲ್ಲಿ ಷೋಡಶೋಪಚಾರ ಪೂಜೆ ನೆರವೇರಿದವು. ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗೆವರೆಗೆ ಅಖಂಡ ಭಜನೆ ಮತ್ತು ಜಾಗರಣೆ ನಡೆಯಲಿದ್ದು, ಜಾಗರಣೆಯ ನಂತರ ಶನಿವಾರ ಬೆಳಗ್ಗೆ ರಾಶಿ ಪೂಜೆ ನೆರವೇರಿಸಿ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಲಿದೆ.

    ಪಟ್ಟಣದಲ್ಲಿ ಲಕ್ಷದೀಪೋತ್ಸವ: ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ಪ್ರತಿವರ್ಷದಂತೆ ಲಕ್ಷದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಲಕ್ಷದೀಪೋತ್ಸವದಲ್ಲಿ ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡು ದೀಪ ಹಚ್ಚುವ ಮೂಲಕ ತಮ್ಮ ಭಕ್ತಿ ಮೆರೆದರು. ಲಕ್ಷದೀಪೋತ್ಸವಕ್ಕೆ ದೇವಾಲಯದ ಪ್ರಧಾನ ಅರ್ಚಕರು ದೇವಾಲಯದ ಮುಂಭಾಗದಲ್ಲಿನ ಗರುಡಗಂಭದ ದೊಡ್ಡ ದೀಪವನ್ನು ಹಚ್ಚುವ ಮೂಲಕ ಚಾಲನೆ ನೀಡಿದ ನಂತರ ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡರು.

    ತಾಲೂಕಿನ ವಿವಿಧೆಡೆ ಶಿವರಾತ್ರಿ ಆಚರಣೆ: ತಾಲೂಕಿನ ಆದಿಚುಂಚನಗಿರಿ, ಮಾಚಲಘಟ್ಟ, ಚಿಟ್ಟನಹಳ್ಳಿ, ತಟ್ಟೆಕೆರೆ, ಕಾಂತಾಪುರ, ನಾಗಮಂಗಲ ಟಿಬಿ ಬಡಾವಣೆ ಸೇರಿದಂತೆ ಮುಂತಾದ ಕಡೆಗಳಲ್ಲಿರುವ ಶಿವನ ದೇವಾಲಯಗಳಲ್ಲಿ ಭಕ್ತಿ ಭಾವದಿಂದ ಶಿವರಾತ್ರಿ ಆಚರಣೆ ನಡೆಯಿತು. ಪಟ್ಟಣದ ಟಿ.ಬಿ.ಬಡಾವಣೆಯ ಮಹದೇಶ್ವರ ದೇವಾಲಯಕ್ಕೆ ಪಟ್ಟಣದ ನಿವಾಸಿಗಳು ತೆರಳಿ ಪೂಜೆ ಸಲ್ಲಿಸಿದರು. ಶಿವನಹಳ್ಳಿ ಗ್ರಾಮದ ಶ್ರೀ ಶನೈಶ್ಚರಸ್ವಾಮಿ ದೇವಾಲಯ ಹಾಗೂ ಚಿಟ್ಟನಹಳ್ಳಿ ಈಶ್ವರನ ದೇವಾಲಯದಲ್ಲಿ ವಿಶೇಷ ಪೂಜೆ ನಡೆದು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಇನ್ನು ಮಾಚಲಘಟ್ಟ, ತಟ್ಟೆಕೆರೆ, ಮಠದಭೂವನಹಳ್ಳಿ ಸೇರಿದಂತೆ ಮುಂತಾದ ಕಡೆಗಳಲ್ಲಿ ವಿಶೇಷ ಪೂಜೆ ನಡೆಯಿತು. ಶಿವರಾತ್ರಿ ಪ್ರಯುಕ್ತ ಪಟ್ಟಣದಲ್ಲಿ ಬೆಳಗ್ಗೆಯಿಂದ ಹೂ, ಹಣ್ಣು ಖರೀದಿಗೆ ಜನ ಮುಗಿಬಿದ್ದು ಖರೀದಿ ಮಾಡುತ್ತಿದ್ದು ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts