More

    ಯುವನಿಧಿ ಪ್ರಾರಂಭೋತ್ಸವಕ್ಕೆ ಲಕ್ಷ ಮಂದಿ: ಸಭೆಯಲ್ಲಿ ತೀರ್ಮಾನ

    ಶಿವಮೊಗ್ಗ: ರಾಜ್ಯ ಸರ್ಕಾರದ 5ನೇ ಗ್ಯಾರಂಟಿಯಾದ ಯುವನಿಧಿ ಪ್ರಾರಂಭೋತ್ಸವ ಜ.12ರಂದು ಶಿವಮೊಗ್ಗದ ಹಳೇ ಜೈಲು ಆವರಣದಲ್ಲಿ ಆಯೋಜನೆಗೊಂಡಿದ್ದು ಕಾರ್ಯಕ್ರಮಕ್ಕೆ ನಿರುದ್ಯೋಗಿ ಪದವೀಧರರು ಸೇರಿದಂತೆ ಒಂದು ಲಕ್ಷ ಮಂದಿಯನ್ನು ಕರೆತರಲು ತೀರ್ಮಾನಿಸಲಾಗಿದೆ.

    ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಪದವೀಧರ ನಿರುದ್ಯೋಗಿಗಳು ಮಾತ್ರವಲ್ಲದೆ ಶಿವಮೊಗ್ಗ ಜಿಲ್ಲೆಯ ಪ್ರತಿ ಗ್ರಾಪಂಗಳಿಂದಲೂ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆತರಲು ಸುಮಾರು ಒಂದು ಸಾವಿರ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಹೆಚ್ಚಿನ ಖಾಸಗಿ ಬಸ್‌ಗಳನ್ನು ಬಳಸಿಕೊಳ್ಳಲು ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
    ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ್ ನೇತೃತ್ವದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಜ.12ರ ಕಾರ್ಯಕ್ರಮದ ಯಶಸ್ಸಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.
    ಕೇವಲ ಸರ್ಕಾರಿ ಕಾಲೇಜುಗಳಲ್ಲದೆ ಖಾಸಗಿ ಕಾಲೇಜು ವಿದ್ಯಾರ್ಥಿಗಳನ್ನೂ ಕಾರ್ಯಕ್ರಮಕ್ಕೆ ಕರೆತರಬೇಕು. 100 ಕಿ.ಮೀ. ವ್ಯಾಪ್ತಿಯಲ್ಲಿನ ಕಾಲೇಜುಗಳಿಂದ ಹೆಚ್ಚಿನ ವಿದ್ಯಾರ್ಥಿಗಳನ್ನು ಸೇರಿಸಬೇಕು. ಯಾವ ಕಾಲೇಜಿಗೆ ಎಷ್ಟು ಬಸ್‌ಗಳನ್ನು ಒದಗಿಸಬೇಕು? ಎಂಬ ಬಗ್ಗೆ ಆಯಾ ಜಿಲ್ಲೆಯ ಹಂತದಲ್ಲೇ ಲೆಕ್ಕಾಚಾರ ಮಾಡಬೇಕು. ಜ.11ರವರೆಗೆ ಯುವನಿಧಿಗೆ ನೋಂದಣಿ ಮಾಡಿಕೊಂಡವರಿಗೆಲ್ಲರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂದೇಶ ಕಳುಹಿಸಬೇಕೆಂದು ಡಾ.ಶರಣಪ್ರಕಾಶ ಆರ್.ಪಾಟೀಲ್ ಹೇಳಿದರು.
    ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಪದವಿ ಕಾಲೇಜುಗಳ 5 ಹಾಗೂ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರುವುದು ಒಳ್ಳೆಯದು. ಇವರೆಲ್ಲರ ಪ್ರಯಾಣ ಎರಡು ತಾಸು ಮೀರದಂತೆ ಕಾಲೇಜುಗಳ ಆಯ್ಕೆ ಮಾಡಿಕೊಳ್ಳಬೇಕೆಂದರು.
    ಮಧು ಬಂಗಾರಪ್ಪ ಮಾತನಾಡಿ, ಶಿವಮೊಗ್ಗ ಜಿಲ್ಲೆಯಿಂದ 50 ಸಾವಿರ ವಿದ್ಯಾರ್ಥಿಗಳನ್ನು ಕರೆತರಬೇಕು. ಉಳಿದ ನಾಲ್ಕು ಜಿಲ್ಲೆಗಳಿಂದ 30 ಸಾವಿರ ಹಾಗೂ ಗ್ರಾಪಂಗಳಿಂದ 20 ಸಾವಿರ ಮಂದಿಯನ್ನು ಸೇರಿಸಬೇಕು. ಕಾಂಗ್ರೆಸ್ ಕಾರ್ಯಕರ್ತರಿಗೂ ಇದೊಂದು ಅಪೂರ್ವ ಕ್ಷಣವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅವರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಶಾಸಕ ಬೇಳೂರು ಗೋಪಾಲಕೃಷ್ಣ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಪಂ ಸಿಇಒ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತೆ ಡಾ.ಆರ್.ರಾಗಪ್ರಿಯಾ ಸಭೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts