

ಲಖನೌ: ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹಾಯಿಸಿದ ಆರೋಪ ಎದುರಿಸುತ್ತಿರುವ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರ ಅವರ ಮಗ ಆಶಿಶ್ ಮಿಶ್ರ ಇಂದು (ಅಕ್ಟೋಬರ್ 9) ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣದ ತನಿಖೆಗೆ ರಚಿಸಲಾಗಿರುವ ಎಸ್ಐಟಿ ಅಧಿಕಾರಿಗಳು ಬೆಳಿಗ್ಗೆ 11 ಕ್ಕೆ ವಿಚಾರಣೆ ಆರಂಭಿಸಿದ್ದಾರೆ.
ಅಕ್ಟೋಬರ್ 3 ರಂದು ನಡೆದ ಘಟನೆಯಲ್ಲಿ ನಾಲ್ಕು ರೈತರು, ಒಬ್ಬ ಪತ್ರಕರ್ತ ಸೇರಿದಂತೆ ಒಟ್ಟು ಎಂಟು ಜನ ಸಾವಪ್ಪಿದ್ದಾರೆ. ಈ ಸಂಬಂಧವಾಗಿ ಆಶಿಶ್ ಮಿಶ್ರ ವಿರುದ್ಧ ಅ.4ರಂದೇ ಕೊಲೆಯ ಆರೋಪದ ಎಫ್.ಐ.ಆರ್. ದಾಖಲಾಗಿದ್ದರೂ, ಅ.7 ರಂದು ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಈ ಸಮನ್ಸ್ ಕೂಡ ಸಾಕ್ಷಿದಾರರಿಗೆ ನೀಡಲಾಗುವ ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 160 ರಡಿಯ ನೋಟೀಸಾಗಿದೆ ಎನ್ನಲಾಗಿದೆ. ಆದಾಗ್ಯೂ ವಿಚಾರಣೆಯ ವೇಳೆ ಮಿಶ್ರಾರ ಹೇಳಿಕೆಗಳ ಆಧಾರದ ಮೇಲೆ ಅವರನ್ನು ಬಂಧಿಸುವ ಅವಕಾಶ ಕಾನೂನಿನಲ್ಲಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವ ಅಜಯ್ ಕುಮಾರ್ ಮಿಶ್ರ ಅವರು, ರೈತರ ಮೇಲೆ ಹಾದುಹೋದ ವಾಹನ ತಮಗೆ ಸೇರಿದ್ದಾದರೂ, ತಮ್ಮ ಮಗ ಆ ಕಾರಿನಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ. ನಿನ್ನೆ ವಿಚಾರಣೆಗೆ ಹಾಜರಾಗದ ಆಶಿಶ್ ಮಿಶ್ರ ಇಂದು ಪೊಲೀಸರ ಮುಂದೆ ಪ್ರತ್ಯಕ್ಷವಾಗಿದ್ದು, ಬಿಗಿಭದ್ರತೆಯಲ್ಲಿ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ. ಮೃತರ ಮೇಲೆ ಹಾದುಹೋದ ವಾಹನದಲ್ಲಿ ಇದ್ದರೆನ್ನಲಾಗಿರುವ ಲವ್ ಕುಶ್ ಮತ್ತು ಆಶಿಶ್ ಪಾಂಡೆ ಎಂಬುವರನ್ನು ಅ. 7ರಂದು ಬಂಧಿಸಲಾಗಿದೆ. (ಏಜೆನ್ಸೀಸ್)