More

    ಭಾವಿ ಪತಿಯನ್ನೇ ಬಂಧಿಸಿ ಲೇಡಿ ಸಿಂಗಂ ಎನಿಸಿಕೊಂಡಿದ್ದ ಜುನ್ಮೊನಿ ರಭಾ ದುರಂತ ಸಾವು

    ದೀಸ್ಪುರ್​: ಭಾವಿ ಪತಿಯನ್ನೇ ಬಂಧಿಸುವ ಮೂಲಕ ಲೇಡಿ ಸಿಂಗಂ ಎಂದೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ, ಆನಂತರ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನವಾಗುವ ಮೂಲಕ ಭಾರೀ ಸುದ್ದಿಯಾಗಿದ್ದ ಮಹಿಳಾ ಪೊಲೀಸ್ ಅಧಿಕಾರಿ ಇದೀಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ, ಇದು ಅಪಘಾತವಲ್ಲ ಕೊಲೆ ಎಂದು ಅವರ ಕುಟುಂಬ ಆರೋಪಿಸಿದೆ.

    ಜುನ್ಮೊನಿ ರಭಾ (30) ಮೃತ ಮಹಿಳಾ ಪೊಲೀಸ್​ ಅಧಿಕಾರಿ. ಮೊರಿಕೊಲಾಂಗ್​ ಪೊಲೀಸ್​ ಔಟ್​ಪೋಸ್ಟ್​ನಲ್ಲಿ ಸಬ್​ ಇನ್ಸ್​ಪೆಕ್ಟರ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಂಗಳವಾರ ಬೆಳಗ್ಗೆ ನಗೌನ್​ ಜಿಲ್ಲೆಯ ಕಲಿಯಾಬೊರ್​ ಉಪ-ವಿಭಾಗದ ಜಖಲಾಬಂಧ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಸರುಭುಗಿಯಾ ಗ್ರಾಮದ ಬಳಿ ಕಂಟೈನರ್​ ಟ್ರಕ್​ಗೆ ಕಾರು ಡಿಕ್ಕಿಯಾಗಿ ಜುನ್ಮೊನಿ ರಭಾ ದುರಂತ ಸಾವಿಗೀಡಾಗಿದ್ದಾರೆ.

    ಇದನ್ನೂ ಓದಿ: ಮಹಿಳಾ ಪ್ರಯಾಣಿಕರ ಎದುರಲ್ಲೇ ಯುವಕನ ಅನುಚಿತ ವರ್ತನೆ; ಸಾರ್ವಜನಿಕರ ಸಹಾಯ ಕೋರಿದ ಪೊಲೀಸರು

    ಸಮವಸ್ತ್ರದಲ್ಲಿ ಇರಲಿಲ್ಲ

    ಅಪಘಾತದ ಸಮಯದಲ್ಲಿ ಕಾರಿನಲ್ಲಿ ಜುನ್ಮೊನಿ ರಭಾ ಒಬ್ಬರೇ ಇದ್ದರು. ಈ ವೇಳೆ ಪೊಲೀಸ್​ ಸಮವಸ್ತ್ರದಲ್ಲಿ ಇರಲಿಲ್ಲ. ನಡುರಾತ್ರಿ 2.30ಕ್ಕೆ ಮಾಹಿತಿ ತಿಳಿದ ಬಳಿಕ ಪೊಲೀಸ್​ ಗಸ್ತು ತಂಡ ಸ್ಥಳಕ್ಕೆ ಧಾವಿಸಿ ಜುನ್ಮೊನಿ ರಭಾರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದಾದರೂ ಆಕೆಯನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ.

    ಅಪಘಾತವಲ್ಲ ಕೊಲೆ

    ಅಪ್ಪರ್​ ಅಸ್ಸಾಂಗೆ ಜುನ್ಮೊನಿ ರಭಾ ಒಬ್ಬರೇ ಏಕೆ ಹೋಗಿದ್ದರು ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಅವರ ಕುಟುಂಬಕ್ಕೂ ಮಾಹಿತಿ ಇಲ್ಲ. ಈ ಘಟನೆಯಿಂದ ಅನುಮಾನ ಹೊಗೆ ಹೊತ್ತುಕೊಂಡಿದ್ದು, ಕುಟುಂಬ ತನಿಖೆಗೆ ಆಗ್ರಹಿಸಿದೆ. ಇದೊಂದು ಪೂರ್ವ ನಿಯೋಜಿತ ಕೊಲೆ ಎಂದು ಜುನ್ಮೊನಿ ರಭಾ ಅವರ ತಾಯಿ ಸುಮಿತ್ರಾ ರಭಾ ಗಂಭೀರ ಆರೋಪ ಮಾಡಿದ್ದಾರೆ. ಮಗಳ ಸಾವಿನ ಬಗ್ಗೆ ಪ್ರಾಮಾಣಿಕವಾದ ತನಿಖೆ ಮಾಡಿ, ನ್ಯಾಯ ಒದಗಿಸಿಕೊಡಿ ಮತ್ತು ಆರೋಪಿಗಳಿಗೆ ಶಿಕ್ಷೆ ಕೊಡಿ ಎಂದು ಸುಮಿತ್ರಾ ರಭಾ ಅಸ್ಸಾಂ ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ. ಅಪಘಾತದ ಬಗ್ಗೆ ಸಿಐಡಿ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ.

    ಲೇಡಿ ಸಿಂಗಂ ಹೆಸರಿಗೆ ಕಳಂಕ

    ಜುನ್ಮೊನಿ ರಭಾ ಅವರ ಬಗ್ಗೆ ಹೇಳುವುದಾದರೆ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಲೇಡಿ ಸಿಂಗಂ ಎಂದೇ ಅವರು ಖ್ಯಾತಿಯಾಗಿದ್ದರು. ಒಂದೊಮ್ಮೆ ವಂಚನೆ ಪ್ರಕರಣದಲ್ಲಿ ತಮ್ಮ ಭಾವಿ ಪತಿ ರಾಣಾ ಪೊಗಾಗ್ ಅವರನ್ನೇ ಬಂಧಿಸಿದ್ದರು. ರಭಾ ಅವರ ಕರ್ತವ್ಯ ನಿಷ್ಠೆಯನ್ನು ನೋಡಿ ಇಡೀ ರಾಜ್ಯದ ಜನರು ಮೆಚ್ಚುಗೆ ಮಹಾಪೂರವನ್ನೇ ಹರಿಸಿತ್ತು. ಆದರೆ, ಅದೇ ಭ್ರಷ್ಟಾಚಾರ ಪ್ರಕರಣದಲ್ಲಿ ರಭಾ ಅವರ ಬಂಧನವಾಗಿ, ಲೇಡಿ ಸಿಂಗಂ ಹೆಸರಿಗೆ ಕಳಂಕ ತಂದುಕೊಂಡಿದ್ದರು.

    ಇದನ್ನೂ ಓದಿ: ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಡಿ.ಕೆ. ಶಿವಕುಮಾರ್​ಗೆ ಸೋನಿಯಾ ಗಾಂಧಿ ಕೊಟ್ಟ ಭರವಸೆಗಳೇನು?

    ಕೆಲವೇ ಗಂಟೆಗಳಲ್ಲಿ ಅಪಘಾತ

    ರಭಾ ವಿರುದ್ಧ ಹಣ ವಂಚನೆ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಅಪಘಾತ ಸಂಭವಿಸಿದೆ. ಸೋಮವಾರ ರಾತ್ರಿ ನಡೆದ ದಾಳಿಯಲ್ಲಿ ರಭಾ ಉಳಿದುಕೊಂಡಿದ್ದ ಕ್ವಾಟ್ರಸ್​ನಲ್ಲಿ ಒಂದು ಲಕ್ಷ ರೂ. ಹಣ ಸೀಜ್​ ಮಾಡಲಾಗಿತ್ತು. ರಭಾ ಅವರ ತಾಯಿ ಸುಮಿತ್ರಾ ರಭಾ ಅವರು ಸಣ್ಣ ಉದ್ಯಮದಿಂದ ಸಂಪಾದಿಸಿದ ಹಣ ಎಂದು ಕುಟುಂಬಸ್ಥರು ಹೇಳಿಕೆ ನೀಡಿದ್ದರು. ಆದಾಗ್ಯೂ ರಭಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಅಪಘಾತ ಸಂಭವಿಸಿದೆ. ಇದೀಗ ಆಕೆಯ ಅಂತಿಮ ಕ್ರಿಯೆ ನಡೆಸಲು ಹಣವನ್ನು ಹಿಂದಿರುಗಿಸುವಂತೆ ರಭಾ ಅವರ ತಾಯಿ ಪೊಲೀಸರ ಬಳಿ ಕೇಳಿಕೊಂಡಿದ್ದಾರೆ.

    ಎಫ್‌ಐಆರ್ ದಾಖಲಿಸಲಾಗಿತ್ತು

    ಕ್ರಿಮಿನಲ್ ಪಿತೂರಿ, ಡಕಾಯಿತಿ, ದರೋಡೆ, ಸಾವಿಗೆ ಯತ್ನ, ಅಕ್ರಮ ಬಂಧನ ಮತ್ತು ಸುಲಿಗೆ ಮುಂತಾದ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಉತ್ತರ ಲಖಿಂಪುರ್​ ಪೊಲೀಸ್ ಠಾಣೆಯಲ್ಲಿ ರಭಾ ವಿರುದ್ಧ ಸೋಮವಾರ ಎಫ್‌ಐಆರ್ ದಾಖಲಿಸಲಾಗಿತ್ತು ಎಂದು ಅಸ್ಸಾಂ ಪೊಲೀಸ್ ಮಹಾನಿರ್ದೇಶಕ ಜ್ಞಾನೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.

    ಈ ಹಿಂದೆ ಭ್ರಷ್ಟಾಚಾರ ಪ್ರಕರಣದಲ್ಲಿ ರಭಾ ಅವರನ್ನು ಬಂಧಿಸಲಾಗಿತ್ತು. ಬಳಿಕ ಅಮಾನತಿನಲ್ಲಿ ಇರಿಸಲಾಗಿತ್ತು. ಅಮಾನತು ಅವಧಿ ಮುಗಿದ ಬಳಿಕ ಮತ್ತೆ ಕರ್ತವ್ಯಕ್ಕೆ ಮರಳಿದ್ದರು. ಇದೀಗ ಅಪಘಾತದಲ್ಲಿ ಮೃತಪಟ್ಟಿದ್ದು, ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಇದನ್ನೂ ಓದಿ: ನಾವು ಬಿಲ್ ಕಟ್ಟಲ್ಲ ಎಂದ ಗ್ರಾಮಸ್ಥರು; ಕೆಇಬಿ ಕಲೆಕ್ಟರ್​ ಊರಿಂದ ಹೊರಕ್ಕೆ!

    ಮತ್ತೊಂದು ವಿವಾದ

    2022ರ ಜನವರಿಯಲ್ಲಿ ಬಿಹ್ಪುರಿಯಾ ಕ್ಷೇತ್ರದ ಬಿಜೆಪಿ ಶಾಸಕ ಅಮಿಯಾ ಕುಮಾರ್ ಭುಯಾನ್ ಅವರೊಂದಿಗಿನ ದೂರವಾಣಿ ಸಂಭಾಷಣೆ ಜಾಲತಾನದಲ್ಲಿ ಸೋರಿಕೆಯಾದಾಗ ರಭಾ ಅವರು ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡರು. ಅಕ್ರಮವಾಗಿ ಅಳವಡಿಸಲಾದ ಯಂತ್ರಗಳೊಂದಿಗೆ ದೋಣಿಗಳನ್ನು ನಡೆಸುತ್ತಿದ್ದ ಆರೋಪದಡಿಯಲ್ಲಿ ರಭಾ ಅವರು ಕೆಲವು ಬೋಟ್‌ಮೆನ್‌ಗಳನ್ನು ಬಂಧಿಸಿದ್ದರು ಮತ್ತು ಭೂಯಾನ್‌ನ ಕ್ಷೇತ್ರದ ಜನರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಮತ್ತು ರಭಾ ವಾಗ್ವಾದ ನಡೆಸಿದ್ದರು. (ಏಜೆನ್ಸೀಸ್​)

    ಸಿದ್ದರಾಮಯ್ಯಗೆ ಸಿಎಂ ಸ್ಥಾನ ಖಚಿತ; ಡಿ.ಕೆ ಶಿವಕುಮಾರ್ ತವರು ಜಿಲ್ಲೆಯಲ್ಲಿ ಹೈ ಅಲರ್ಟ್!

    ಬಹುತೇಕ ವಿಚ್ಛೇದನಗಳಿಗೆ ಪ್ರೇಮ ವಿವಾಹಗಳೇ ಕಾರಣ ಎಂದ ಸುಪ್ರೀಂ ಕೋರ್ಟ್ ..

    ಸಿದ್ದರಾಮನ ಹುಂಡಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ; ಭಾವಚಿತ್ರಕ್ಕೆ ಕ್ಷೀರಾಭಿಷೇಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts