More

    ಗಂಗೆಗಾಗಿ ‘ಗೌರಿ’ಯ ಹರಸಾಹಸ

    ಶಿರಸಿ: ಇಲ್ಲಿಯ ಗಣೇಶನಗರದ ಅಂಗನವಾಡಿಯ ನೀರಿನ ಕೊರತೆ ಹೋಗಲಾಡಿಸುವ ಸಲುವಾಗಿ ಬಾವಿ ತೋಡುತ್ತಿರುವ ಜಲ ಸಾಧಕಿ ಗೌರಿ ನಾಯ್ಕ ಅವರ ಮುಖದಲ್ಲಿ ಬುಧವಾರ ಮಂದಹಾಸ ಮೂಡಿದೆ. ಕಳೆದ 10 ದಿನಗಳಿಂದ ಹಗಲಿಡೀ ದುಡಿದ ಪರಿಣಾಮ ಬಾವಿ ಸುಮಾರು 8 ಅಡಿ ಆಳ ತಲುಪಿದ್ದು, ಈಗ ಕೆಂಪನೆಯ ಮತ್ತು ತಂಪನೆಯ ಮಣ್ಣು ಲಭಿಸುತ್ತಿದೆ. ಜಲ ಸಮೀಪದಲ್ಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

    ಇಲ್ಲಿಯ ಗಣೇಶ ನಗರದ ಗೌರಿ ನಾಯ್ಕ 55 ವರ್ಷದ ವಯಸ್ಸಿನಲ್ಲೂ ಶ್ರಮ ಸಾಧನೆಗೆ ಹೆಸರಾದವರು. ಕೆಲ ವರ್ಷಗಳ ಹಿಂದೆ ಮನೆ ಎದುರಿನಲ್ಲಿಯೇ ಗಿಡಗಳಿಗೆ ನೀರುಣಿಸುವ ಸಲುವಾಗಿ ಒಬ್ಬಂಟಿಯಾಗಿ 65 ಅಡಿ ಆಳದ ಬಾವಿ ತೋಡಿದ್ದರು. ಅವರ ಶ್ರಮಕ್ಕೆ ರಾಜ್ಯದ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತಲ್ಲದೆ, ಸ್ವರ್ಣವಲ್ಲೀ ಸಂಸ್ಥಾನ ಸಹ ಗೌರಿಯ ಸಾಧನೆ ಗುರುತಿಸಿ ಸನ್ಮಾನಿಸಿತ್ತು. ರಾಜ್ಯದ ಅನೇಕ ಸಂಸ್ಥೆಗಳೂ ಅವರನ್ನು ಸನ್ಮಾನಿಸಿದ್ದವು.

    ತಮ್ಮ ಮನೆ ಸಮೀಪವೇ ಇರುವ ಗಣೇಶನಗರದ ಅಂಗನವಾಡಿಯಲ್ಲಿ ಇರುವ 15 ಮಕ್ಕಳಿಗೆ ಕುಡಿಯಲು ಬೇರೆಡೆಯಿಂದ ನೀರು ತರುತ್ತಿರುವುದನ್ನು ಗಮನಿಸಿದ್ದ ಗೌರಿ ನಾಯ್ಕ ಬಾವಿ ತೋಡಲು ಆರಂಭಿಸಿದರು. ಒಬ್ಬರೇ ಮಣ್ಣನ್ನೂ ಏಣಿಯ ಸಹಾಯದಿಂದ ಹೊರ ತಂದು ರಾಶಿ ಹಾಕುತ್ತಿದ್ದಾರೆ.

    ಇಲ್ಲಿಯವರೆಗೂ ರಾಶಿರಾಶಿ ಕಲ್ಲುಗಳೇ ಲಭಿಸುತ್ತಿದ್ದವು. ಹೀಗಾಗಿ, ಅಗೆಯುವುದೂ ಕಷ್ಟವಾಗುತ್ತಿತ್ತು. ಈಗ ಕೆಂಪು ಮಣ್ಣು ಮತ್ತು ತಂಪನೆಯ ಮಣ್ಣು ಸಿಗಲಾರಂಭಿಸಿದೆ. ಇದು ಜಲ ಲಭ್ಯವಾಗುವ ಶುಭ ಸೂಚನೆ ಎನ್ನುತ್ತಾರೆ ಗೌರಿ. ಮಧ್ಯಾಹ್ನದ ವೇಳೆ ಅತಿ ಕಡಿಮೆ ಊಟ ಮಾಡುತ್ತೇನೆ. ಜಾಸ್ತಿ ಊಟ ಮಾಡಿದರೆ ಭಾರದ ಮಣ್ಣು ಹೊತ್ತು ಏಣಿ ಹತ್ತುವುದು ಕಷ್ಟ. ಈ ವಯಸ್ಸಿನಲ್ಲಿ ಕೆಲಸ ಮಾಡಿದಾಗ ಎದೆ ನೋವು ಬರುತ್ತಿದೆ. ಆದರೆ, ಅದಕ್ಕಿಂತ ಪುಟಾಣಿಗಳಿಗೆ ಸಮೃದ್ಧ ನೀರು ಲಭಿಸಿ ಅವರ ಮುಖದಲ್ಲಿ ಮಂದಹಾಸ ಮೂಡುವುದೇ ಮುಖ್ಯ ಎಂದು ಭಾವುಕರಾಗಿ ಹೇಳುತ್ತಾರೆ ಗೌರಿ ನಾಯ್ಕ.

    ಈ ಬಾವಿ ಪೂರ್ಣಗೊಳಿಸಲು ಒಂದು ತಿಂಗಳು ಬೇಕಾಗಬಹುದು ಎಂದು ಮೊದಲು ಅಂದಾಜಿಸಿದ್ದೆ. ಬುಧವಾರ ತಂಪನೆಯ ಮಣ್ಣು ಲಭಿಸುತ್ತಿರುವುದರಿಂದ ಇನ್ನು ಹದಿನೈದು ದಿನಗಳು ಭಾವಿ ಕೆಲಸ ಪೂರ್ಣಗೊಳಿಸಲು ಸಾಕಾಗಬಹುದು ಎನ್ನುತ್ತಾರೆ ಅವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts